ಭಾರತದಲ್ಲಿ ಯುವತಿಯರಿಗೆ ಕನಿಷ್ಠ 18ವರ್ಷ ಆದ ವಿನಃ ಮದುವೆ ಮಾಡುವಂತೆ ಇಲ್ಲ ಎಂಬ ಕಾನೂನು ಇತ್ತು. ಅದನ್ನೀಗ ಬದಲಿಸಿ, ಮಹಿಳೆಯರ ಮದುವೆ ವಯಸ್ಸಿನ ಮಿತಿಯನ್ನು 21ಕ್ಕೆ ಏರಿಸುವ ಪ್ರಸ್ತಾಪವನ್ನು ಬುಧವಾರ ಕೇಂದ್ರ ಸಂಪುಟ ಅಂಗೀಕರಿಸಿದೆ. ಯುವತಿಯರ ಮದುವೆ ವಯಸ್ಸನ್ನು 18ವರ್ಷಕ್ಕೆ ನಿಗದಿಪಡಿಸಲಾಗಿದೆ. ಅದನ್ನು ಮರುಪರಿಶೀಲನೆ ಮಾಡಲಾಗುವುದು. ಇದಕ್ಕಾಗಿ ಒಂದು ಸಮಿತಿ ರಚಿಸಲಾಗುವುದು ಎಂದು 2020ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಒಂದೂವರೆ ವರ್ಷದ ಬಳಿಕ ಅದನ್ನೀಗ ಅನುಷ್ಠಾನಕ್ಕೆ ತರಲು ಕೇಂದ್ರ ಸಂಪುಟ ಮುಂದಡಿ ಇಟ್ಟಿದೆ. ದೇಶದಲ್ಲಿ ಇರುವ ಬಾಣಂತಿ-ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು, ಪೌಷ್ಟಿಕಾಂಶದ ಕೊರತೆ ನೀಗಿಸಲು ಮತ್ತು ಮಹಿಳೆಯರ ಮದುವೆ ವಯಸ್ಸಿನ ಮಿತಿ ಹೆಚ್ಚಿಸುವುದರಿಂದ, ಸಹಜವಾಗಿಯೇ ತಾಯ್ತನದ ವಯಸ್ಸಿನ ಮಿತಿಯೂ ಏರುತ್ತದೆ. ಹೀಗಾಗಿ ಒಂದಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದರ ಬಗ್ಗೆ ಪರಿಶೀಲಿಸಲು ಕೇಂದ್ರ ಸರ್ಕಾರ ಒಂದು ಟಾಸ್ಕ್ಫೋರ್ಸ್ ರಚಿಸಿತ್ತು. ಈ ಟಾಸ್ಕ್ ಫೋರ್ಸ್ನ ಶಿಫಾರಸ್ಸಿನ ಅನ್ವಯ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಈ ಕಾರ್ಯಪಡೆಯ ನೇತೃತ್ವವನ್ನು ಸಮತಾ ಪಕ್ಷದ ಮಾಜಿ ಸದಸ್ಯೆ ಜಯಾ ಜೇಟ್ಲಿ ವಹಿಸಿಕೊಂಡಿದ್ದರು. ಹಲವಾರು ತಜ್ಞರೊಟ್ಟಿಗೆ ವ್ಯಾಪಕವಾದ ಚರ್ಚೆ ನಡೆಸಿದ ಬಳಿಕ, ಅದರಲ್ಲೂ ಯುವ ವಯಸ್ಸಿನ ಮಹಿಳೆಯರೊಟ್ಟಿಗೆ ಆಳವಾಗಿ ಚರ್ಚಿಸಿದ ನಂತರ ಮದುವೆ ವಯಸ್ಸಿನ ಮಿತಿ ಏರಿಕೆಗೆ ಶಿಫಾರಸ್ಸು ಮಾಡಲಾಗಿದೆ. ಯಾಕೆಂದರೆ ಇದು ನೇರವಾಗಿ ಅನ್ವಯ ಆಗುವುದು ಮಹಿಳೆಯರಿಗೇ ಆಗಿದೆ. ಮಹಿಳಾ ಸಬಲೀಕರಣಕ್ಕಾಗಿ ಈ ಯೋಜನೆ ಎಂದು ಜಯಾ ಜೇಟ್ಲಿ ಹೇಳಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಹಾಗೇ, ನಾವು ಜನಸಂಖ್ಯೆ ನಿಯಂತ್ರಣಕ್ಕಾಗಿ ಈ ಶಿಫಾರಸ್ಸನ್ನು ಮಾಡಿಲ್ಲ. ಇತ್ತೀಚೆಗಷ್ಟೇ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ ಬಿಡುಗಡೆ ಮಾಡಿದ ಡಾಟಾದಲ್ಲಿ, ಒಟ್ಟಾರೆ ಫಲವತ್ತತೆ ದರ ಕಡಿಮೆ ಆಗಿದೆ ಮತ್ತು ಜನಸಂಖ್ಯೆ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮಹಿಳೆಯರ ಮದುವೆ ವಯಸ್ಸನ್ನು ಏರಿಸುವಂತೆ ಶಿಫಾರಸ್ಸು ಮಾಡಿದ್ದು ಅವರ ಆರೋಗ್ಯ, ವೃತ್ತಿ ಮತ್ತು ಸಬಲೀಕರಣದ ದೃಷ್ಟಿಯಿಂದ ಎಂದೂ ಜಯಾ ಹೇಳಿದ್ದಾರೆ.
ಈ ಟಾಸ್ಕ್ಫೋರ್ಸ್ನ್ನು 2020ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಚಿಸಿತ್ತು. ಇದರಲ್ಲಿ ನೀತಿ ಆಯೋಗದ ಡಾ.ವಿ.ಕೆ.ಪೌಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ , ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು, ಕಾನೂನು ಇಲಾಖೆಯ ಸಿಬ್ಬಂದಿ ಕೂಡ ಇದ್ದರು. ಇದೀಗ ಪ್ರಸ್ತಾಪಕ್ಕೆ ಅನುಮೋದನೆ ಸಿಕ್ಕಿದ ಬಳಿಕ, ಸರ್ಕಾರ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ಕ್ಕೆ ತಿದ್ದುಪಡಿ ತರುತ್ತದೆ. ವಿಶೇಷ ವಿವಾಹ ಕಾಯ್ದೆ ಮತ್ತು ಹಿಂದೂ ವಿವಾಹ ಕಾಯ್ದೆ, 1955 ರಂತಹ ವೈಯಕ್ತಿಕ ಕಾನೂನುಗಳಿಗೆ ತಿದ್ದುಪಡಿಗಳನ್ನು ತರಲು ಮುಂದಾಗಲಿದೆ ಎಂದು ಮೂಲಗಳು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಪ್ರಪಂಚದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಬಿಜೆಪಿಯದ್ದು, ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಘೋಷಣೆ
Published On - 9:41 am, Thu, 16 December 21