ಪ್ರಧಾನಿ ಮೋದಿಯ 25 ವರ್ಷಗಳ ಆಡಳಿತಕ್ಕೆ ಕೇಂದ್ರ ಸಚಿವರ ಬಹುಪರಾಕ್; ಸಂಪುಟದಿಂದ ಅಭಿನಂದನಾ ನಿರ್ಣಯ ಅಂಗೀಕಾರ

ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅಪರೂಪದ ಮೈಲಿಗಲ್ಲು ದಾಖಲಾಗಿದೆ. ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ದೇಶದ ಪ್ರಧಾನ ಮಂತ್ರಿಯಾಗಿ 25 ವರ್ಷಗಳ ನಿರಂತರ ನಾಯಕತ್ವವನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ಕೇಂದ್ರ ಸಚಿವ ಸಂಪುಟವು ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದೆ. ಪ್ರಧಾನಿ ಮೋದಿಯವರ ಪ್ರಯಾಣವು ಕೇವಲ ಸ್ಥಾನಗಳ ದಾಖಲೆಯಲ್ಲ, ಬದಲಾಗಿ ರಾಷ್ಟ್ರ ಮೊದಲು - ನಾಗರಿಕ ಮೊದಲು ಎಂಬ ತತ್ವಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದು ಸಂಪುಟವು ಶ್ಲಾಘಿಸಿದೆ. ಗುಜರಾತ್‌ನಲ್ಲಿ ಸತತ ಮೂರು ಗೆಲುವುಗಳು ಮತ್ತು ದೇಶಾದ್ಯಂತ ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಅವರು ಪಡೆದ ಅಗಾಧ ಜನಪ್ರಿಯತೆಯು ಅವರ ನಾಯಕತ್ವದ ಮೇಲಿನ ಜನರ ಅಚಲ ನಂಬಿಕೆಯ ಸಂಕೇತವಾಗಿದೆ ಎಂದು ಹೇಳುವ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಸರ್ವಾನುಮತದಿಂದ ಅಂಗೀಕರಿಸಿತು. ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿಯವರ ಪ್ರಯಾಣವನ್ನು ಮತ್ತು ಅವರು ಸಾಧಿಸಿದ ಗಮನಾರ್ಹ ಸಾಧನೆಗಳನ್ನು ಪ್ರತಿಬಿಂಬಿಸುವ 10 ಪ್ರಮುಖ ಅಂಶಗಳನ್ನು ನಿರ್ಣಯವು ನಿರ್ದಿಷ್ಟವಾಗಿ ಉಲ್ಲೇಖಿಸಿದೆ.

ಪ್ರಧಾನಿ ಮೋದಿಯ 25 ವರ್ಷಗಳ ಆಡಳಿತಕ್ಕೆ ಕೇಂದ್ರ ಸಚಿವರ ಬಹುಪರಾಕ್; ಸಂಪುಟದಿಂದ ಅಭಿನಂದನಾ ನಿರ್ಣಯ ಅಂಗೀಕಾರ
ಪ್ರಧಾನಿ ಮೋದಿ
Image Credit source: PTI

Updated on: Oct 06, 2026 | 8:12 PM

ನವದೆಹಲಿ, ಅಕ್ಟೋಬರ್ 6: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ಸುದೀರ್ಘ ನಾಯಕತ್ವವನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟವು ಇಂದು ವಿಶೇಷ ಅಭಿನಂದನಾ ನಿರ್ಣಯವನ್ನು ಅಂಗೀಕರಿಸಿದೆ. ಈ ನಿರ್ಣಯವು ಗುಜರಾತ್‌ನಿಂದ ರಾಷ್ಟ್ರೀಯ ರಾಜಕೀಯ ರಂಗದವರೆಗಿನ ಅವರ ರಾಜಕೀಯ ಪಯಣದ ಮಹತ್ವವನ್ನು ಎತ್ತಿಹಿಡಿದಿದೆ. ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಲವಾದ ದೇಶವನ್ನಾಗಿ ಮಾಡಿದ್ದು, ಕೋಟ್ಯಂತರ ಬಡವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೆ ತಂದಿದ್ದು ಹಾಗೂ ‘ಡಿಜಿಟಲ್ ಇಂಡಿಯಾ’, ‘ಆತ್ಮನಿರ್ಭರ ಭಾರತ’ದಂತಹ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದಿದ್ದನ್ನು ಸಚಿವ ಸಂಪುಟ ಸಭೆಯಲ್ಲಿ ಸ್ಮರಿಸಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಸಾರ್ವಜನಿಕ ಸೇವೆಯಲ್ಲಿ ಸತತ 25 ವರ್ಷಗಳ ಸುದೀರ್ಘ ನಾಯಕತ್ವ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟವು ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದೆ. 2001ರ ಅಕ್ಟೋಬರ್ 7ರಂದು ಗುಜರಾತ್‌ನ ಮುಖ್ಯಮಂತ್ರಿಯಾಗಿ ಪ್ರಥಮ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದ ನರೇಂದ್ರ ಮೋದಿ ಅಲ್ಲಿಂದ ಸತತವಾಗಿ ಮುಖ್ಯಮಂತ್ರಿಯಾಗಿ ಹಾಗೂ ಭಾರತದ ಪ್ರಧಾನಮಂತ್ರಿಯಾಗಿ ರಜೆರಹಿತವಾಗಿ 25ನೇ ವರ್ಷದ ಸಾರ್ವಜನಿಕ ನಾಯಕತ್ವವನ್ನು ಪೂರೈಸುತ್ತಿದ್ದಾರೆ.


ಈ ನಿರ್ಣಯದ ಪ್ರಕಾರ, ಪ್ರಧಾನಿ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಹಲವು ನೂತನ ಯೋಜನೆಗಳು ಜನರ ಜೀವನವನ್ನು ಸುಗಮಗೊಳಿಸಿದವು. ನಾಗರಿಕರು ತಮ್ಮ ಕುಂದುಕೊರತೆಗಳನ್ನು ನೇರವಾಗಿ ಸಲ್ಲಿಸಲು ನೆರವಾದ ‘ಸ್ವಾಗತ್’ ಯೋಜನೆಗೆ 2010ರಲ್ಲಿ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿ ಲಭಿಸಿತು. ಈ ಯೋಜನೆಯ ಮಾದರಿಯು ನಂತರ ಕೇಂದ್ರ ಸರ್ಕಾರದ ‘ಪ್ರಗತಿ’ ಯೋಜನೆಗೆ ದಾರಿದೀಪವಾಯಿತು.

ಇದನ್ನೂ ಓದಿ: ಮನ್ ಕಿ ಬಾತ್: ಸರ್ಜಿಕಲ್ ಸ್ಟ್ರೈಕ್‌ನಿಂದ ಜನಗಣತಿ ತನಕ ಹಲವು ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಮಾತು

ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿಯವರ 25 ವರ್ಷಗಳ ಯಶಸ್ವಿ ಸಾರ್ವಜನಿಕ ಸೇವೆಯನ್ನು ಶ್ಲಾಘಿಸಿ ನಿರ್ಣಯವನ್ನು ಅಂಗೀಕರಿಸಲಾಯಿತು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಂದ ‘ಗುಜರಾತ್ ಅಭಿವೃದ್ಧಿ ಮಾದರಿ’ ಹಾಗೂ 2014ರಿಂದ ಭಾರತದ ಪ್ರಧಾನಿಯಾಗಿ ದೇಶದಲ್ಲಿ ತಂದ ಬೃಹತ್ ಮೂಲಸೌಕರ್ಯ, ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಗಳನ್ನು ಸಚಿವ ಸಂಪುಟವು ಮುಕ್ತಕಂಠದಿಂದ ಪ್ರಶಂಸಿದೆ.

ಪ್ರಧಾನಿ ಮೋದಿ ಆಡಳಿತದಲ್ಲಿ ಜನಕಲ್ಯಾಣ:

ಈ ನಿರ್ಣಯವು ಸರ್ಕಾರದ ಜನಕಲ್ಯಾಣ ತಲುಪಿಸುವಿಕೆ ಹಾಗೂ ಬಡತನ ನಿರ್ಮೂಲನೆಯನ್ನು ಪ್ರಮುಖವಾಗಿ ಉಲ್ಲೇಖಿಸಿದೆ. ಅವುಗಳೆಂದರೆ,

ಆರ್ಥಿಕ ಸೇರ್ಪಡೆ ಹಾಗೂ ಮೂಲಸೌಕರ್ಯ: ಸುಮಾರು 60 ಕೋಟಿ ಜನ್‌ಧನ್ ಖಾತೆಗಳು, 4 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣ ಹಾಗೂ ಹಣಕಾಸು ಸೇವೆಗಳು, ವಸತಿ, ಕುಡಿಯುವ ನೀರು ಮತ್ತು ಆರೋಗ್ಯ ರಕ್ಷಣೆಯ ಲಭ್ಯತೆಯನ್ನು ಹೆಚ್ಚಿಸಿದ ಯೋಜನೆಗಳನ್ನು ಶ್ಲಾಘಿಸಲಾಗಿದೆ.

ಮಹಿಳಾ ಮತ್ತು ಯುವ ಸಬಲೀಕರಣ: ‘ಲಖ್‌‌ಪತಿ ದೀದಿ’ ಯೋಜನೆ, ‘ನಾರಿ ಶಕ್ತಿ ವಂದನ್ ಅಧಿನಿಯಮ’ (ಮಹಿಳಾ ಮೀಸಲಾತಿ ಕಾಯ್ದೆ), ‘ಪಿಎಂ-ಕಿಸಾನ್’ ಮತ್ತು ‘ಪಿಎಂ-ಜನ್‌ಮನ್’ ಯೋಜನೆಗಳು ಜನರ ಆರ್ಥಿಕ ಹಾಗೂ ಸಾಮಾಜಿಕ ಭಾಗವಹಿಸುವಿಕೆಯಲ್ಲಿ ಕ್ರಾಂತಿಕಾರಿ ಪಾತ್ರ ವಹಿಸಿವೆ.

ಇದನ್ನೂ ಓದಿ: ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ; ನಕ್ಸಲಿಸಂ ವಿರುದ್ಧದ ಯಶಸ್ವಿ ಹೋರಾಟ ಹೇಗಿತ್ತು?

ಜಿಎಸ್‌ಟಿ ಜಾರಿ, ಬ್ರಿಟಿಷ್ ಕಾಲದ ಹಳೆಯ ಕಾನೂನುಗಳ ರದ್ದತಿಯನ್ನು ಪ್ರಮುಖ ಬದಲಾವಣೆಗಳಾಗಿ ಉಲ್ಲೇಖಿಸಲಾಗಿದೆ. ಜೊತೆಗೆ ಸಾರ್ವಜನಿಕ ಬಂಡವಾಳ ವೆಚ್ಚ ಹೆಚ್ಚಳ, ಹೆದ್ದಾರಿಗಳ ವಿಸ್ತರಣೆ, ರೈಲ್ವೆ ವಿದ್ಯುದ್ದೀಕರಣ, ಎಲೆಕ್ಟ್ರಾನಿಕ್ಸ್ ಉತ್ಪಾದನಾ ಬೆಳವಣಿಗೆ ಹಾಗೂ ರಕ್ಷಣೆ ಮತ್ತು ಸೆಮಿಕಂಡಕ್ಟರ್ ಉತ್ಪಾದನಾ ವಿಸ್ತರಣೆಯ ಪ್ರಯತ್ನಗಳನ್ನು ಎತ್ತಿಹಿಡಿಯಲಾಗಿದೆ.

ಡಿಜಿಟಲ್ ಮೂಲಸೌಕರ್ಯ ಮತ್ತು ರಾಷ್ಟ್ರೀಯ ಭದ್ರತೆ:

ತಂತ್ರಜ್ಞಾನ ಆಧಾರಿತ ಆಡಳಿತ: ಡಿಜಿಟಲ್ ಮೂಲಸೌಕರ್ಯ, ಗುರುತಿನ ಚೀಟಿ ವ್ಯವಸ್ಥೆ, ಮೊಬೈಲ್ ಸಂಪರ್ಕ ಮತ್ತು ಯುಪಿಐ ಜಾಲವನ್ನು ತಂತ್ರಜ್ಞಾನ ಆಧಾರಿತ ಸುಡಳಿತಕ್ಕೆ ಸಾಕ್ಷಿಯಾಗಿ ನೀಡಲಾಗಿದೆ.

ವೈಜ್ಞಾನಿಕ ಮೈಲಿಗಲ್ಲುಗಳು: ಭಾರತದ ಬೃಹತ್ ಕೋವಿಡ್-19 ಲಸಿಕಾ ಅಭಿಯಾನ ಹಾಗೂ ಚಂದ್ರಯಾನ-3 ಸಾಹಸಗಳನ್ನು ದೇಶದ ವೈಜ್ಞಾನಿಕ ಸಾಮರ್ಥ್ಯದ ಮೈಲಿಗಲ್ಲುಗಳೆಂದು ನಿರ್ಣಯದಲ್ಲಿ ಹೇಳಲಾಗಿದೆ.

ರಾಷ್ಟ್ರೀಯ ಭದ್ರತೆ: ಭದ್ರತಾ ಕ್ಷೇತ್ರದಲ್ಲಿ 2016ರ ಸರ್ಜಿಕಲ್ ಸ್ಟ್ರೈಕ್ಸ್, 2019ರ ಬಾಲಾಕೋಟ್ ವೈಮಾನಿಕ ದಾಳಿ ಹಾಗೂ 2025ರ ಆಪರೇಷನ್ ಸಿಂಧೂರ್, ಜೊತೆಗೆ ವಿಧಿ 370 ರದ್ದುಗೊಳಿಸುವಿಕೆ ಹಾಗೂ ಇತರ ರಕ್ಷಣಾ ಕ್ರಮಗಳನ್ನು ಉಲ್ಲೇಖಿಸಲಾಗಿದೆ.

ಈ ನಿರ್ಣಯವು ಭಾರತದ ವಿಸ್ತರಿಸುತ್ತಿರುವ ರಾಜತಾಂತ್ರಿಕ ಪ್ರಭಾವ, ‘ಗ್ಲೋಬಲ್ ಸೌತ್’ ಭಾಗವಹಿಸುವಿಕೆ, ಹವಾಮಾನ ಬದಲಾವಣೆ ಉಪಕ್ರಮಗಳು, ಸಾಂಸ್ಕೃತಿಕ ಪರಂಪರೆಯ ಪುನರುಜ್ಜೀವನ ಮತ್ತು 2047ರ ವೇಳೆಗೆ ‘ವಿಕಸಿತ ಮತ್ತು ಆತ್ಮನಿರ್ಭರ ಭಾರತ’ ನಿರ್ಮಿಸುವ ದೃಷ್ಟಿಕೋನವನ್ನು ಉಲ್ಲೇಖಿಸುವ ಮೂಲಕ ಮುಕ್ತಾಯಗೊಳ್ಳುತ್ತದೆ.

ಸೇವಾ ಸಂಕಲ್ಪ ಅಭಿಯಾನ:

ಪ್ರಧಾನಿ ಮೋದಿಯವರ 76ನೇ ಜನ್ಮದಿನ (ಸೆಪ್ಟೆಂಬರ್ 17) ಮತ್ತು ಅವರು ಸಿಎಂ ಆಗಿ 25 ವರ್ಷ ಪೂರೈಸುವ ಮೈಲಿಗಲ್ಲಿನ (ಅಕ್ಟೋಬರ್ 7) ಸವಿನೆನಪಿಗಾಗಿ ಬಿಜೆಪಿಯು ದೇಶಾದ್ಯಂತ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ಒಂದು ತಿಂಗಳ ಕಾಲ ‘ಸೇವಾ ಸಂಕಲ್ಪ ಅಭಿಯಾನ’ವನ್ನು ಆಯೋಜಿಸುತ್ತಿದೆ.


ಸಂಪುಟ ಸಭೆಯ ವೇಳೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದರು. “ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಿಶಿಷ್ಟವಾದ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಜಗತ್ತಿನಲ್ಲಿ ಕೆಲವೇ ಕೆಲವು ದೇಶಗಳು ಒಂದೇ ನಾಯಕನನ್ನು ಪದೇ ಪದೇ ಬೆಂಬಲಿಸಿವೆ ಮತ್ತು ಅವರ ಕೆಲಸದ ನೀತಿ, ಅವರ ಉತ್ತಮ ನೀತಿಗಳು ಮತ್ತು ಅವರ ಉತ್ತಮ ಮತ್ತು ಉದಾತ್ತ ಉದ್ದೇಶಗಳಿಂದಾಗಿ ಈ ಬೆಂಬಲವನ್ನು ಗಳಿಸಲಾಗಿದೆ” ಎಂದು ಅವರು ಹೇಳಿದರು.

“ಅಕ್ಟೋಬರ್ 7ರಂದು ಪ್ರಧಾನಿ ಮೋದಿ ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರೈಸಲಿದ್ದಾರೆ. ಮೊದಲು ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ಈಗ ಭಾರತದ ಪ್ರಧಾನ ಮಂತ್ರಿಯಾಗಿ. ರಾಷ್ಟ್ರಕ್ಕೆ ಅವರು ಸಲ್ಲಿಸಿದ ನಿರಂತರ ಸೇವೆಗಾಗಿ ಸಚಿವ ಸಂಪುಟ ಅವರನ್ನು ಅಭಿನಂದಿಸಿ ಗೌರವಿಸಿತು ಮತ್ತು ಅವರ ಗೌರವಾರ್ಥವಾಗಿ ನಿರ್ಣಯವನ್ನು ಅಂಗೀಕರಿಸಿತು” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:07 pm, Tue, 6 October 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us