ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ; ನಕ್ಸಲಿಸಂ ವಿರುದ್ಧದ ಯಶಸ್ವಿ ಹೋರಾಟ ಹೇಗಿತ್ತು?
ಸೆಪ್ಟೆಂಬರ್ 17ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ 76ನೇ ವರ್ಷಕ್ಕೆ ಕಾಲಿಟ್ಟ ದಿನದಿಂದ ಆರಂಭಿಸಿ, ಅವರ ಬೆಂಬಲಿಗರು ಅವರ 25 ವರ್ಷಗಳ ‘ಜನಸೇವೆ’ಯನ್ನು ಆಚರಿಸುತ್ತಿದ್ದಾರೆ. ನರೇಂದ್ರ ಮೋದಿ 2001ರಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಈ ಅಕ್ಟೋಬರ್ 7ಕ್ಕೆ 25 ವರ್ಷಗಳು ಪೂರ್ಣಗೊಳ್ಳಲಿವೆ. ಬಿಜೆಪಿ ತನ್ನ ‘ಸೇವಾ ಸಂಕಲ್ಪ ಅಭಿಯಾನ’ದ ಅಡಿಯಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ಒಂದು ತಿಂಗಳ ಕಾಲ ಸೇವಾ ಆಧಾರಿತ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಂಪರ್ಕ ಉದ್ಯಮಗಳನ್ನು ಹಮ್ಮಿಕೊಳ್ಳಲು ಯೋಜಿಸಿದೆ. ಮೋದಿ ಸರ್ಕಾರದ ಅವಧಿಯಲ್ಲಿ ನಕ್ಸಲಿಸಂ ನಿರ್ಮೂಲನೆಗೆ ಯಾವ ರೀತಿಯ ಹೆಜ್ಜೆಯನ್ನಿಡಲಾಯಿತು ಎಂಬ ಮಾಹಿತಿ ಇಲ್ಲಿದೆ.

ನವದೆಹಲಿ, ಅಕ್ಟೋಬರ್ 6: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಭಾರತದಲ್ಲಿ ನಕ್ಸಲಿಸಂ ಮತ್ತು ‘ಎಡಪಂಥೀಯ ತೀವ್ರವಾದ’ಕ್ಕೆ ಸಂಪೂರ್ಣ ತೆರೆ ಎಳೆದ ಹೆಗ್ಗಳಿಕೆಗೆ ಪಾತ್ರವಾಗಿದೆ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ನಕ್ಸಲಿಸಂ ವಿರುದ್ಧ ತೀಕ್ಷ್ಣ ಹೋರಾಟವನ್ನು ಪ್ರಾರಂಭಿಸಿತು. ದೇಶದ ಯಾವುದೇ ಜಿಲ್ಲೆಯೂ ಈಗ ನಕ್ಸಲಿಸಂ ಇಲ್ಲ, ಭಾರತ ಸಂಪೂರ್ಣವಾಗಿ ನಕ್ಸಲ್ ಮುಕ್ತವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ.
ಭದ್ರತಾ ಕಾರ್ಯಾಚರಣೆಗಳು, ಮೂಲಸೌಕರ್ಯಗಳ ವಿಸ್ತರಣೆ, ಶರಣಾದ ನಕ್ಸಲರ ಪುನರ್ವಸತಿ, ಬುಡಕಟ್ಟು ಜನರ ಕಲ್ಯಾಣ ಹಾಗೂ ಸುಧಾರಿತ ಆಡಳಿತವನ್ನು ಒಳಗೊಂಡ ಸಮಗ್ರ ತಂತ್ರಜ್ಞಾನ ಆಧಾರಿತ ಕಾರ್ಯತಂತ್ರವೇ ಈ ಐತಿಹಾಸಿಕ ಬದಲಾವಣೆಗೆ ಪ್ರಮುಖ ಕಾರಣ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಛತ್ತೀಸ್‌ಗಢದ ಅಬುಜ್‌ಮರ್ ಮತ್ತು ಉತ್ತರ ಬಸ್ತಾರ್ ಅನ್ನು ನಕ್ಸಲ್ ಮುಕ್ತ ಎಂದು ಘೋಷಿಸಿದ ಅಮಿತ್ ಶಾ
ಭಾರತದಲ್ಲಿದ್ದ ನಕ್ಸಲ್ ಸಮಸ್ಯೆಯ ಹಿನ್ನೆಲೆ:
1967ರಲ್ಲಿ ಪಶ್ಚಿಮ ಬಂಗಾಳದ ನಕ್ಸಲ್ಬಾರಿಯಿಂದ ಪ್ರಾರಂಭವಾದ ನಕ್ಸಲ್ ಚಳವಳಿಯು ನಂತರ ಬಂದ ಎಲ್ಲಾ ಸರ್ಕಾರಗಳಿಗೂ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಸುಮಾರು 5 ದಶಕಗಳ ಕಾಲ, ಮಾವೋವಾದಿ ದಂಗೆಕೋರರು ಭಾರತದ ಮಧ್ಯಭಾಗದಲ್ಲಿ ಬೃಹತ್ ‘ರೆಡ್ ಕಾರಿಡಾರ್’ ಸೃಷ್ಟಿಸಿಕೊಂಡು ತಮ್ಮದೇ ಆಡಳಿತ ನಡೆಸುತ್ತಿದ್ದರು. 1967ರ ನಂತರ ಅಧಿಕಾರಕ್ಕೆ ಬಂದ ಹಲವು ಪ್ರಧಾನ ಮಂತ್ರಿಗಳು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದರೂ, ನಕ್ಸಲ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ನಕ್ಸಲಿಸಂ ಅನ್ನು ಹತೋಟಿಗೆ ತರಲು ಸೂಕ್ತ ಯೋಜನೆಯೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿತ್ತು. ಆದರೆ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ನಕ್ಸಲಿಸಂ ನಿರ್ಮೂಲನೆಯ ಪಣ ತೊಟ್ಟರು.
ಇದನ್ನೂ ಓದಿ: ಝೀರಮ್ ಕಣಿವೆಯ ನಕ್ಸಲ್ ದಾಳಿ ಪ್ರಕರಣ; 29 ಜನರ ಸಾವಿಗೆ ಕಾರಣರಾದ 10 ಅಪರಾಧಿಗಳಿಗೆ ಗಲ್ಲು ಶಿಕ್ಷೆ
2010ರ ಏಪ್ರಿಲ್ ತಿಂಗಳಲ್ಲಿ, ದಾಂತೇವಾಡದಲ್ಲಿ ಸಿಆರ್‌ಪಿಎಫ್ ಗಸ್ತು ಪಡೆಯ ಮೇಲೆ ನಕ್ಸಲರು ನಡೆಸಿದ ಒಂದೇ ಒಂದು ದಾಳಿಯಲ್ಲಿ 76 ಯೋಧರು ಹುತಾತ್ಮರಾಗಿದ್ದರು. 2014ರ ವೇಳೆಗೆ ಛತ್ತೀಸ್‌ಗಢ ಸೇರಿದಂತೆ ದೇಶದ ಸುಮಾರು 126 ಜಿಲ್ಲೆಗಳು ನಕ್ಸಲ್ ಪೀಡಿತ ಜಿಲ್ಲೆಗಳ ಪಟ್ಟಿಯಲ್ಲಿದ್ದವು. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ, ನಕ್ಸಲ್ ಸಮಸ್ಯೆಯನ್ನು ಪರಿಹರಿಸಲು ಅಭೂತಪೂರ್ವ ತಂತ್ರಜ್ಞಾನ ಮತ್ತು ಅಭಿವೃದ್ಧಿ ಮಾದರಿಯನ್ನು ಜಾರಿಗೆ ತಂದರು. ಸೇನಾ/ ಪೊಲೀಸ್ ಕಾರ್ಯಾಚರಣೆಗಳು ಹಾಗೂ ಗುಪ್ತಚರ ಮಾಹಿತಿಯನ್ನು ರಸ್ತೆಗಳು, ಶಾಲೆಗಳು, ಮೊಬೈಲ್ ಟವರ್‌ಗಳು ಮತ್ತು ಬ್ಯಾಂಕಿಂಗ್ ಸೌಲಭ್ಯಗಳಂತಹ ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಸಂಯೋಜಿಸಲಾಯಿತು.
ನಕ್ಸಲ್ ಪೀಡಿತ ಪ್ರದೇಶಗಳೆಂದು ಕಡೆಗಣಿಸಲ್ಪಟ್ಟಿದ್ದ ಹಾಗೂ ಅಭಿವೃದ್ಧಿಯಿಂದ ವಂಚಿತವಾಗಿದ್ದ ಹಿಂದುಳಿದ ಪ್ರದೇಶಗಳನ್ನು ಮುಖ್ಯವಾಹಿನಿಗೆ ತರುವುದು ಸರ್ಕಾರದ ಮುಖ್ಯ ಉದ್ದೇಶವಾಗಿತ್ತು. 2026ರ ಮಾರ್ಚ್ 30ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಾತನಾಡಿ, “ದೇಶದ ಯಾವುದೇ ಜಿಲ್ಲೆಯೂ ಈಗ ನಕ್ಸಲ್ ಪೀಡಿತವಾಗಿ ಉಳಿದಿಲ್ಲ,” ಎಂದು ಅಧಿಕೃತವಾಗಿ ಘೋಷಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




