ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ (Farm Laws) ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಗಡಿ ಭಾಗಗಳಿಂದ ಎಬ್ಬಿಸಿ ಕಳಿಸಿದರೆ ದೇಶಾದ್ಯಂತ ಸರ್ಕಾರಿ ಕಚೇರಿಗಳನ್ನು ಗಲ್ಲ ಮಂಡಿಗಳನ್ನಾಗಿ ಪರಿವರ್ತಿಸುತ್ತೇವೆ ಎಂದು ಇತ್ತೀಚೆಗೆಷ್ಟೇ ಎಚ್ಚರಿಕೆ ನೀಡಿರುವ ರೈತ ನಾಯಕ ರಾಕೇಶ್ ಟಿಕಾಯತ್ (Rakesh Tikait) ಇದೀಗ ಕೇಂದ್ರ ಸರ್ಕಾರಕ್ಕೆ ನವೆಂಬರ್ 26ರವರೆಗೆ ಗಡುವು ನೀಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ನವೆಂಬರ್ 26ರವರೆಗೆ ಸಮಯ ಕೊಡುತ್ತೇವೆ, ಅದಾದ ಮೇಲೆ ರೈತರು ದೆಹಲಿಯ ಪ್ರತಿಭಟನಾ ಸ್ಥಳಗಳನ್ನು ತಲುಪುತ್ತಾರೆ ಮತ್ತು ಆಂದೋಲನವನ್ನು ಇನ್ನಷ್ಟು ಬಲಪಡಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಟ್ವೀಟ್ ಮಾಡಿರುವ ರಾಕೇಶ್ ಟಿಕಾಯತ್, ಸರ್ಕಾರಕ್ಕೆ ನವೆಂಬರ್ 26ರವರೆಗೆ ಸಮಯವಿದೆ. ನವೆಂಬರ್ 27ರಿಂದ ಹಳ್ಳಿಹಳ್ಳಿಗಳಿಂದ ರೈತರು ಟ್ರ್ಯಾಕ್ಟರ್ ತೆಗೆದುಕೊಂಡು ದೆಹಲಿಯ ಪ್ರತಿಭಟನಾ ಸ್ಥಳಗಳಿಗೆ ಬರುತ್ತಾರೆ. ರೈತರ ಸಂಖ್ಯೆ ಹೆಚ್ಚುತ್ತದೆ ಮತ್ತು ಕೃಷಿ ಕಾಯ್ದೆಗಳ ವಿರುದ್ಧದ ಆಂದೋಲನ ಇನ್ನಷ್ಟು ತೀವ್ರವಾಗುತ್ತದೆ ಎಂದು ತಿಳಿಸಿದ್ದಾರೆ.
केंद्र सरकार को 26 नवंबर तक का समय है, उसके बाद 27 नवंबर से किसान गांवों से ट्रैक्टरों से दिल्ली के चारों तरफ आंदोलन स्थलों पर बॉर्डर पर पहुंचेगा और पक्की किलेबंदी के साथ आंदोलन और आन्दोलन स्थल पर तंबूओं को मजबूत करेगा।#FarmersProtest
— Rakesh Tikait (@RakeshTikaitBKU) November 1, 2021
ರಾಕೇಶ್ ಟಿಕಾಯತ್ ಟ್ವೀಟ್ನಲ್ಲಿ ನವೆಂಬರ್ 26ರವರೆಗೆ ಕೇಂದ್ರ ಸರ್ಕಾರಕ್ಕೆ ಸಮಯವಿದೆ ಎಂದು ಹೇಳಿದ್ದಾರೆ. ಆದರೆ ಯಾವುದಕ್ಕೆ ಗಡುವು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಕೇಂದ್ರಕ್ಕೆ ಕೊಟ್ಟ ಗಡುವೋ? ಅಥವಾ ರೈತರನ್ನು ಮತ್ತೊಂದು ಸುತ್ತಿನ ಮಾತುಕತೆಗೆ ಆಹ್ವಾನಿಸಲು ಕೊಟ್ಟ ಸಮಯವೋ ಎಂಬಿತ್ಯಾದಿ ಗೊಂದಲಗಳು ಬಾಕಿ ಇವೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ ನವೆಂಬರ್ನಿಂದ ದೆಹಲಿಯ ಸುತ್ತಲಿನ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಮತ್ತು ರೈತರ ಮಧ್ಯೆ 11 ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ ಒಂದು ಸೂಕ್ತ ನಿರ್ಣಯ ಹೊರಬಿದ್ದಿಲ್ಲ. ಹೀಗಾಗಿ ಇನ್ನೂ ರೈತರು ಪ್ರತಿಭಟನೆ ಹಿಂಪಡೆದಿಲ್ಲ.
ಇದನ್ನೂ ಓದಿ: T20 World Cup 2021: ಕೊಹ್ಲಿ ನಿರ್ಧಾರಗಳೇ ಕಾರಣ! ಟೀಂ ಇಂಡಿಯಾ ಸೋಲಿನ ಪೋಸ್ಟ್ ಮಾರ್ಟಂ ಮಾಡಿದ ಗಂಭೀರ್