ನನಗೆ ದಿನಕ್ಕೆ 50 ಬೆದರಿಕೆ ಕರೆಗಳು ಬರುತ್ತವೆ, ಜನರು ಕರೆ ಮಾಡಿ ನಿಂದಿಸುತ್ತಾರೆ: ಮುನಾವರ್ ಫರೂಕಿ

Munawar Faruqui ಬಲಪಂಥೀಯ ಗುಂಪಿನ ಸದಸ್ಯರು ಸ್ಥಳಗಳನ್ನು ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದ ನಂತರ ಮುಂಬೈ ಪ್ರದರ್ಶನಗಳನ್ನು ರದ್ದುಗೊಳಿಸಲಾಯಿತು. ರದ್ದು ಮಾಡಿರುವ ವಿಷಯ ಪ್ರಕಟಿಸಿದ ಫರೂಕಿ ಪ್ರೇಕ್ಷಕರ ಸುರಕ್ಷತೆಯು ತನಗೆ ಹೆಚ್ಚು ಮುಖ್ಯವಾಗಿದೆ ಎಂದು ಟ್ವೀಟ್ ಮಾಡಿದ್ದರು.

ನನಗೆ ದಿನಕ್ಕೆ 50 ಬೆದರಿಕೆ ಕರೆಗಳು ಬರುತ್ತವೆ, ಜನರು ಕರೆ ಮಾಡಿ ನಿಂದಿಸುತ್ತಾರೆ: ಮುನಾವರ್ ಫರೂಕಿ
ಮುನಾವರ್ ಫರೂಕಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 01, 2021 | 2:09 PM

ಮುಂಬೈ: ದೇಶದ ಯುವಕರು ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಲು ಸಾಧ್ಯವಾದರೆ, ಏನನ್ನು ನೋಡಬೇಕೆಂದು ಅವರು ನಿರ್ಧರಿಸಬಹುದು ಎಂದು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫರೂಕಿ (Munawar Faruqui) ಹೇಳಿದ್ದಾರೆ. ಮುಂಬೈನಲ್ಲಿ ನಡೆಯಲಿದ್ದ ಮೂರು ಕಾರ್ಯಕ್ರಮಗಳನ್ನು ಬಜರಂಗದಳದ (Bajrang Dal) ಬೆದರಿಕೆಯ ಹಿನ್ನಲೆಯಲ್ಲಿ ರದ್ದುಗೊಳಿಸಿದ ನಂತರ ಎನ್​​ಡಿಟಿವಿ ಜತೆ ಮಾತನಾಡಿದ ಮುನಾವರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. “ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ” ಆರೋಪದ ಪ್ರಕರಣದಲ್ಲಿ ಈ ವರ್ಷದ ಆರಂಭದಲ್ಲಿ ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ಫರೂಕಿ, ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರವೂ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಹೇಳಿದರು.

“ನನಗೆ ದಿನಕ್ಕೆ 50 ಬೆದರಿಕೆ ಕರೆಗಳು ಬರುತ್ತವೆ, ನಾನು ನನ್ನ ಸಿಮ್ ಕಾರ್ಡ್ ಅನ್ನು ಮೂರು ಬಾರಿ ಬದಲಾಯಿಸಬೇಕಾಗಿತ್ತು. ನನ್ನ ಸಂಖ್ಯೆ ಸೋರಿಕೆಯಾದಾಗ, ಜನರು ಕರೆ ಮಾಡಿ ನನ್ನನ್ನು ನಿಂದಿಸುತ್ತಾರೆ” ಎಂದು ಅವರು ಹೇಳಿದರು.

ಬಲಪಂಥೀಯ ಗುಂಪಿನ ಸದಸ್ಯರು ಸ್ಥಳಗಳನ್ನು ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದ ನಂತರ ಮುಂಬೈ ಪ್ರದರ್ಶನಗಳನ್ನು ರದ್ದುಗೊಳಿಸಲಾಯಿತು. ರದ್ದು ಮಾಡಿರುವ ವಿಷಯ ಪ್ರಕಟಿಸಿದ ಫರೂಕಿ ಪ್ರೇಕ್ಷಕರ ಸುರಕ್ಷತೆಯು ತನಗೆ ಹೆಚ್ಚು ಮುಖ್ಯವಾಗಿದೆ ಎಂದು ಟ್ವೀಟ್ ಮಾಡಿದ್ದರು.

ಇಲ್ಲಿ ನಡೆಯುತ್ತಿರುವುದು ದುರದೃಷ್ಟಕರ. ಈ ದೇಶದಲ್ಲಿ ಸಾಕಷ್ಟು ತಪ್ಪುಗಳು ನಡೆಯುತ್ತಿವೆ. ದೊಡ್ಡ ವಿಷಯವೆಂದರೆ ಈ ಮೂರು ಶೋಗಳಿಗೆ, ಒಟ್ಟು 1,500 ಜನರು ಒಂದು ತಿಂಗಳ ಹಿಂದೆ ಟಿಕೆಟ್ ಖರೀದಿಸಿದ್ದಾರೆ. ಅವರ ಬಗ್ಗೆ ನನಗೆ ಬೇಸರವಾಗಿದೆ ಎಂದು ಅವರು ಹೇಳಿದರು.

“ನನ್ನಿಂದ ಬಹುಶಃ ತಪ್ಪಾಗಿರಬಹುದು ಎಂದು ನಾನು ಕೆಲವೊಮ್ಮೆ ಭಾವಿಸುತ್ತೇನೆ. ಆದರೆ ಕೆಲವರು ಇದರಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನನಗೆ ಅರ್ಥವಾಯಿತು” ಎಂದು ಅವರು ಹೇಳಿದರು. “ಎಲ್ಲರೂ ಗುರಿಯಾಗಿರುತ್ತಾರೆ” ಆದರೆ ನನ್ನ ವಿಷಯದಲ್ಲಿ, ಅವರು ಧರ್ಮವನ್ನು ಬಳಸುತ್ತಾರೆ, ಅದು ನನಗೆ ಭಯವನ್ನುಂಟು ಮಾಡುತ್ತದೆ” ಎಂದು ಅವರು ಹೇಳಿದರು.

ಅವರ ಬಂಧನ ಮತ್ತು ಜಾಮೀನಿನ ನಂತರ, ಅವರು 50 ಶೋ ನೀಡಿದ್ದಾರೆ ಮತ್ತು ಅವುಗಳಲ್ಲಿ ಶೇ 90 ಜನರು ನಿಂತು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು ಎಂದು ಫರೂಕಿ ಹೇಳಿದರು. “ಯಾರು ಯಾವ ಧರ್ಮ ಅಥವಾ ಜಾತಿಗೆ ಸೇರಿದವರು ಎಂದು ಪ್ರೇಕ್ಷಕರು ಹೆದರುವುದಿಲ್ಲ, ನನ್ನ ಶೋಗಳಲ್ಲಿ ಯಾವುದೇ ಧರ್ಮದ ಬಗ್ಗೆ ಯಾವುದೇ ಕಾಮೆಂಟ್‌ಗಳಿಲ್ಲ” ಎಂದು ಅವರು ಹೇಳಿದರು.

ಎರಡು ಗಂಟೆಗಳ ಪ್ರದರ್ಶನದಿಂದ 10 ಸೆಕೆಂಡುಗಳ ಕ್ಲಿಪ್ ಅನ್ನು ಪ್ರಸಾರ ಮಾಡುವ ಮೂಲಕ ಬಜರಂಗದಳದ ಸದಸ್ಯರು ತನ್ನನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸ್ಟ್ಯಾಂಡ್-ಅಪ್ ಕಲಾವಿದ ಹೇಳಿದರು. “ನೀವು ಕ್ಲಿಪ್ ಅನ್ನು ಸಂದರ್ಭಕ್ಕೆ ಮೀರಿ ತೋರಿಸಿ ಮತ್ತು ನಾನು (ಹಿಂದೂ ದೇವರುಗಳನ್ನು) ಅವಮಾನಿಸಿದ್ದೇನೆ ಎಂದು ಹೇಳುತ್ತೀರಿ” ಎಂದು ಅವರು ಹೇಳಿದರು.

ಚಾಲಕರು, ಸ್ವಯಂಸೇವಕರು ಮತ್ತು ಗಾರ್ಡ್ ಸೇರಿದಂತೆ 80 ಜನರು ಒಂದೇ ಪ್ರದರ್ಶನದಿಂದ ಜೀವನೋಪಾಯವನ್ನು ಗಳಿಸುತ್ತಾರೆ ಎಂದು ಫಾರೂಕಿ ಹೇಳಿದರು. “ಇವರು ಕಳೆದ ಒಂದೂವರೆ ವರ್ಷಗಳಿಂದ ನಿರುದ್ಯೋಗಿಗಳಾಗಿದ್ದಾರೆ. ಅವರ ಬಗ್ಗೆ ನನಗೆ ಬೇಸರವಾಗಿದೆ” ಎಂದು ಅವರು ಹೇಳಿದರು.

ಯಾವುದೇ ಸಮಸ್ಯೆ ಇಲ್ಲ ಮತ್ತು ಅವರು ಭಯಪಡುವ ಅಗತ್ಯವಿಲ್ಲ ಎಂದು ನಾನು ಶೋ ನಡೆಯುವ ಸ್ಥಳ ಮಾಲೀಕರಿಗೆ ಹೇಳಿದ್ದೆ. “ಆದರೆ ಯಾರಾದರೂ ಆ ಸ್ಥಳವನ್ನು ಸುಟ್ಟುಹಾಕುತ್ತೇನೆ, ಧ್ವಂಸಗೊಳಿಸುತ್ತೇನೆ ಎಂದು ಬೆದರಿಕೆ ಹಾಕಿದರೆ ನಾನು ಯೋಚಿಸುತ್ತೇವೆ. ಇದು ತಪ್ಪು, ಇದು ಸ್ವತಂತ್ರ ದೇಶ.” “ದ್ವೇಷ ಗೆದ್ದಿತು, ಆದ್ದರಿಂದ ಪ್ರದರ್ಶನಗಳು ರದ್ದುಗೊಂಡವು. ಆದರೆ ಎಲ್ಲಿಯವರೆಗೆ? ನಾವು ಗೆಲ್ಲುತ್ತೇವೆ” ನಾನು ನಗು ಪಸರಿಸುವ ಕಾರ್ಯ ಮುಂದುವರಿಸುವೆ ಎಂದು ಫರೂಕಿ ಹೇಳಿದರು.

ಇದನ್ನೂ ಓದಿ: ಭಾರತದತ್ತ ಬಂದರೆ ಏರ್​ಸ್ಟ್ರೈಕ್​​ಗೆ ಸಿದ್ಧರಾಗಿಯೇ ಇದ್ದೇವೆ: ತಾಲಿಬಾನಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಸಿಎಂ ಯೋಗಿ