ಕೊರೊನಾ ಸೋಂಕು ಹೆಚ್ಚಾಗುತ್ತಿರುವ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ; ಜಾಗರೂಕರಾಗಿರಿ ಎಂದ ಕೇಂದ್ರ

| Updated By: ರಶ್ಮಿ ಕಲ್ಲಕಟ್ಟ

Updated on: Apr 08, 2022 | 8:39 PM

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ದೆಹಲಿ, ಹರಿಯಾಣ, ಕೇರಳ, ಮಹಾರಾಷ್ಟ್ರ ಮತ್ತು ಮಿಜೋರಾಂ ಸೇರಿದಂತೆ ಐದು ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.

ಕೊರೊನಾ ಸೋಂಕು ಹೆಚ್ಚಾಗುತ್ತಿರುವ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ; ಜಾಗರೂಕರಾಗಿರಿ ಎಂದ ಕೇಂದ್ರ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ದೇಶದಲ್ಲಿ ಕೊರೊನಾವೈರಸ್ (Coronavirus) ನಾಲ್ಕನೇ ಅಲೆಯ ಎಚ್ಚರಿಕೆಯ ನಡುವೆ ಕೊವಿಡ್ -19 (Covid 19) ಪ್ರಕರಣಗಳ ಹೆಚ್ಚಳದ ಕುರಿತು ಜಾಗರೂಕರಾಗಿರಿ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಬಿಡಬೇಡಿ ಎಂದು ಕೇಂದ್ರವು ಮತ್ತೊಮ್ಮೆ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ (Rajesh Bhushan) ಅವರು ದೆಹಲಿ, ಹರಿಯಾಣ, ಕೇರಳ, ಮಹಾರಾಷ್ಟ್ರ ಮತ್ತು ಮಿಜೋರಾಂ ಸೇರಿದಂತೆ ಐದು ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಈ ರಾಜ್ಯಗಳಲ್ಲಿ ಕಳೆದ ವಾರಗಳಿಂದ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪತ್ರ ಬರೆಯಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ಮಾಡಿದೆ . ಭೂಷಣ್ ಅವರು ಪತ್ರದಲ್ಲಿ, ಈ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಾದ ನಿಗಾ ವಹಿಸುವಂತೆ ಮತ್ತು ಅಗತ್ಯವಿದ್ದರೆ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಶುಕ್ರವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಒಂದೇ ದಿನದಲ್ಲಿ 1,109 ಹೊಸ ಕೊರೊನಾವೈರಸ್ ಸೋಂಕುಗಳು ಏರಿಕೆಯಾಗಿದ್ದು, ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 4,30,33,067 ಕ್ಕೆ ತಲುಪಿದೆ. ದೇಶದಲ್ಲಿ ಸಕ್ರಿಯ ಕೊವಿಡ್ ಪ್ರಕರಣಗಳು 11,492 ಕ್ಕೆ ಇಳಿದಿವೆ. 43 ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 5,21,573 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಡೇಟಾ ತಿಳಿಸಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೊವಿಡ್ ಪ್ರಕರಣಗಳಲ್ಲಿ 147 ಪ್ರಕರಣಗಳ ಕಡಿತ ಕಂಡು ಬಂದಿದೆ. ಆರೋಗ್ಯ ಸಚಿವಾಲಯದ ಪ್ರಕಾರ ದೈನಂದಿನ ಧನಾತ್ಮಕತೆಯ ದರವು 0.24 ಶೇಕಡಾ ಮತ್ತು ಸಾಪ್ತಾಹಿಕ ಧನಾತ್ಮಕತೆಯ ದರವು ಶೇಕಡಾ 0.23 ರಷ್ಟಿದೆ.


ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,25,00,002 ಕ್ಕೆ ಏರಿದೆ, ಆದರೆ ಸಾವಿನ ಪ್ರಮಾಣವು ಶೇಕಡಾ 1.21 ರಷ್ಟಿದೆ. ರಾಷ್ಟ್ರವ್ಯಾಪಿ ಕೊವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ ದೇಶದಲ್ಲಿ ನಿರ್ವಹಿಸಲಾದ ಒಟ್ಟು ಕೊವಿಡ್ ಡೋಸ್‌ಗಳು 185.38 ಕೋಟಿಯನ್ನು ಮೀರಿದೆ.

ಏಪ್ರಿಲ್ 10 ರಿಂದ ಬೂಸ್ಟರ್ ಡೋಸ್
8 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಕೊರೊನಾವೈರಸ್ ಲಸಿಕೆ ಫಲಾನುಭವಿಗಳು ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಏಪ್ರಿಲ್ 10 ರಿಂದ ಬೂಸ್ಟರ್ ಡೋಸ್ ಪಡೆಯಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಕೊರೊನಾವೈರಸ್ ಲಸಿಕೆಯ  ಎರಡನೇ ಡೋಸ್ ಪಡೆದು ಒಂಬತ್ತು ತಿಂಗಳುಗಳನ್ನು ಪೂರ್ಣಗೊಳಿಸಿದ ಎಲ್ಲಾ ವಯಸ್ಕರು ಭಾನುವಾರದಿಂದ ಅವರ ಮೂರನೇ ಡೋಸ್ ಅಥವಾ ಮುಂಜಾಗ್ರತಾ ಡೋಸ್‌ಗಾಗಿ ಖಾಸಗಿ ಲಸಿಕೆ ಕೇಂದ್ರಗಳಿಗೆ ಭೇಟಿ ನೀಡಬಹುದು. ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ ಕೊವಿಡ್ ಲಸಿಕೆಗಳ ಮುನ್ನೆಚ್ಚರಿಕೆ ಪ್ರಮಾಣ 18 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಜನರಿಗೆ ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಖಾಸಗಿ ಲಸಿಕೆ ಕೇಂದ್ರಗಳ ಮೂಲಕ 18ಕ್ಕಿಂತ  ಮೇಲ್ಪಟ್ಟ  ವಯಸ್ಸಿನ ಜನರಿಗೆ ಮುನ್ನೆಚ್ಚರಿಕೆ ಡೋಸ್ ನೀಡಿಕೆ ಏಪ್ರಿಲ್ 10 (ಭಾನುವಾರ), 2022 ರಿಂದ ಪ್ರಾರಂಭವಾಗುತ್ತದೆ. 18 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಎರಡನೇ ಡೋಸ್ ಪಡೆದು 9 ತಿಂಗಳುಗಳನ್ನು ಪೂರೈಸಿದ ಎಲ್ಲರೂ, ಮುನ್ನೆಚ್ಚರಿಕೆ ಡೋಸ್‌ ಪಡೆಯಬಹುದು. ಈ ಸೌಲಭ್ಯವು ಎಲ್ಲಾ ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಭ್ಯವಿರುತ್ತದೆ.

ಇಲ್ಲಿಯವರೆಗೆ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸುಮಾರು 96 ಪ್ರತಿಶತದಷ್ಟು ಲಸಿಕೆ ಫಲಾನುಭವಿಗಳು ಕನಿಷ್ಠ ಒಂದು ಡೋಸ್ ಕೊವಿಡ್ ಲಸಿಕೆ ಅನ್ನು ಪಡೆದಿದ್ದಾರೆ ಮತ್ತು ಅವರಲ್ಲಿ ಸುಮಾರು 83 ಪ್ರತಿಶತದಷ್ಟು ಜನರು ಎರಡೂ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರಿಗೆ (60 ವರ್ಷಕ್ಕಿಂತ ಮೇಲ್ಪಟ್ಟವರು) 2.4 ಕೋಟಿಗೂ ಹೆಚ್ಚು ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ. ಹೆಚ್ಚುವರಿಯಾಗಿ, 12 ರಿಂದ 14 ವರ್ಷ ವಯಸ್ಸಿನ 45 ಪ್ರತಿಶತ ಫಲಾನುಭವಿಗಳು ಈಗಾಗಲೇ ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ.

ಜನವರಿ 2021 ರಲ್ಲಿ ಪ್ರಾರಂಭವಾದ ಕೊವಿಡ್ ಲಸಿಕೆ ಕಾರ್ಯಕ್ರಮವನ್ನು ಹದಿಹರೆಯದವರು ಸೇರಿದಂತೆ ಹಲವಾರು ಹಂತಗಳಲ್ಲಿ ವಿಸ್ತರಿಸಲಾಯಿತು. ಈಗ ಎಲ್ಲಾ ವಯಸ್ಕರು ಲಸಿಕೆಯ ಮೂರನೇ ಡೋಸ್‌ಗೆ ಅರ್ಹರಾಗಿದ್ದಾರೆ, ಇದು ಭಾರತದ ಲಸಿಕೆ ಕಾರ್ಯಕ್ರಮಕ್ಕೆ ಗಮನಾರ್ಹ ಮೈಲಿಗಲ್ಲು.

ಇದನ್ನೂ ಓದಿ:ಭಾನುವಾರದಿಂದ ಎಲ್ಲಾ ವಯಸ್ಕರಿಗೆ ಬೂಸ್ಟರ್ ಡೋಸ್: ಯಾವ ಲಸಿಕೆ ನೀಡಲಾಗುತ್ತದೆ? ಲಸಿಕೆ ಪಡೆಯಲು ಯಾರು ಅರ್ಹರು?