ಹೈದರಾಬಾದ್: ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನ ಆಲಯದಲ್ಲಿ ಇಂದು ಸಂಭ್ರಮ. ತಿಮ್ಮಪ್ಪನ ಸನ್ನಿಧಾನಕ್ಕೆ ಭಕ್ತಸಾಗರವೇ ಹರಿದು ಬರುತ್ತೆ. ಹೂವಿನ ಅಲಂಕಾರದೊಂದಿಗೆ ದೇಗುಲ ಝಗಮಗಿಸುತ್ತೆ. ಎಲ್ಲೆಡೆ ಗೋವಿಂದನ ಸ್ಮರಣೆ ಮೊಳಗುತ್ತೆ.
ತಿರುಮಲದಲ್ಲಿ ವೈಕುಂಠ ಏಕಾದಶಿ, ದ್ವಾದಶಿ ಸಂಭ್ರಮ:
ಹೌದು, ತಿರುಪತಿ ತಿರುಮಲದಲ್ಲಿ ವೈಕುಂಠ ಏಕಾದಶಿ ಮತ್ತು ದ್ವಾದಶಿ ಸಂಭ್ರಮ ಮನೆ ಮಾಡಿದೆ. ಉತ್ಸವ ಹಿನ್ನೆಲೆ ಇಂದಿನಿಂದ ಎರಡು ದಿನಗಳ ಕಾಲ ವೈಕುಂಠ ದ್ವಾರವನ್ನ ತೆರೆಯಲು ಟಿಟಿಡಿ ನಿರ್ಧರಿಸಿದೆ. ಈ ಹಿನ್ನೆಲೆ ವೈಕುಂಠ ದ್ವಾರದ ಮೂಲಕ ವೆಂಕಟೇಶ್ವರನ ದರ್ಶನ ಪಡೆಯಲು ಭಕ್ತರು ಕೂಡ ಉತ್ಸುಕರಾಗಿದ್ದಾರೆ. ವೈಕುಂಠ ದ್ವಾರದ ಮೂಲಕ ಶ್ರೀವಾರಿಯ ದರ್ಶನ ಪಡೆದ್ರೆ ಪುಣ್ಯ ಸಿಗುತ್ತೆ ಅನ್ನೋ ನಂಬಿಕೆ ಇದೆ. ಹೀಗಾಗಿ, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬಾಲಾಜಿಯ ಸನ್ನಿಧಿಯತ್ತ ಹೆಜ್ಜೆ ಹಾಕ್ತಿದ್ದಾರೆ.
ವೈಕುಂಠ ಏಕಾದಶಿ ಹಿನ್ನೆಲೆ ಇಂದು ಸ್ವರ್ಣ ರಥೋತ್ಸವ ನಡೆಯಲಿದ್ದು, ನಾಳೆ ಬೆಳಗ್ಗೆ 6 ಗಂಟೆಗೆ ಪುಷ್ಕರಣಿಯಲ್ಲಿ ಚಕ್ರಸ್ನಾನ ಜರುಗಲಿದೆ. ಇನ್ನು ವೈಕುಂಠ ದ್ವಾರ ತೆರೆಯುತ್ತಿರೋದ್ರಿಂದ ಭಕ್ತರಿಗೆ ನೇರವಾಗಿ ವೆಂಕಟೇಶ್ವರನ ದರ್ಶನ ಸಿಗಲಿದೆ. ಬೆಳಗಿನ ಜಾವ 1.30ರಿಂದ 4.30ರವರೆಗೆ ವಿಐಪಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಿದ್ರೆ. ಉಳಿದ ಅವಧಿಯಲ್ಲಿ ಸಾಮಾನ್ಯ ಭಕ್ತರಿಗೆ ಶ್ರೀವಾರಿಯ ದರ್ಶನ ಸಿಗಲಿದೆ.
ತಿರುಮಲಕ್ಕೆ ಬರುವ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನ ನೀಡಲು ಟಿಟಿಡಿ ಸಿದ್ಧತೆ ಮಾಡಿಕೊಂಡಿದೆ. 1.70 ಕೋಟಿ ವೆಚ್ಚದಲ್ಲಿ ಅನ್ನ ಸಂತರ್ಪಣೆ, ಕುಡಿಯೋ ನೀರು ಸೇರಿದಂತೆ ವಿವಿಧ ಸೌಕರ್ಯಗಳ ಏರ್ಪಾಡು ಮಾಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸ್ತಿರೋ ಹಿನ್ನೆಲೆ ಎಲ್ಲಾ ರೀತಿಯ ಪಾವತಿ ದರ್ಶನಗಳನ್ನ ಕೂಡ ರದ್ದು ಮಾಡಲಾಗಿದೆ. ಒಟ್ನಲ್ಲಿ, ತಿರುಮಲದಲ್ಲಿ ವೈಕುಂಠ ಏಕಾದಶಿ ಹಾಗೂ ದ್ವಾದಶಿ ಸಂಭ್ರಮ ಮನೆ ಮಾಡಿದ್ದು, ವೈಕುಂಠ ದ್ವಾರದ ಮೂಲಕ ವೆಂಕಟೇಶ್ವರನ ದರ್ಶನ ಪಡೆಯಲು ಭಕ್ತರ ದಂಡೇ ಹರಿದು ಬರ್ತಿದೆ.
Published On - 6:45 am, Mon, 6 January 20