ಲಕ್ನೋ: ಕಾನ್ಪುರ್, ಪ್ರಯಾಗ್ರಾಜ್ನಲ್ಲಿ ನಡೆದ ಕಟ್ಟಡಗಳ ತೆರವು ಪ್ರಕರಣದ ಕುರಿತು ಉತ್ತರ ಪ್ರದೇಶ ಸರ್ಕಾರವು ಸುಪ್ರೋಂಕೋರ್ಟ್ಗೆ ಮಾಹಿತಿ ನೀಡಿದ್ದು, ಅಕ್ರಮ ಕಟ್ಟಡಗಳ ಧ್ವಂಸವು ಕಾನೂನು ಪ್ರಕಾರವೇ ನಡೆದಿದೆ ಗಲಭೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಕಟ್ಟಡಗಳ ತೆರವು ಕಾರ್ಯದ ಕುರಿತು ಜಮೈತ್ ಉಲಾಮಾ-ಎ-ಹಿಂದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ, ಉತ್ತರ ಪ್ರದೇಶ ಅರ್ಬನ್ ಪ್ಲಾನಿಂಗ್ ಆಂಡ್ ಡೆವಲಾಪ್ಮೆಂಟ್ ಆಕ್ಟ್ 1972ರ ಪ್ರಕಾರ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಸರ್ಕಾರ ತಿಳಿಸಿದೆ.
ಕಳೆದ ವಾರದ ಹಿಂಸಾಚಾರ ಪ್ರಕರಣದ ಆರೋಪಿಗಳ ಮನೆಗಳನ್ನು ಅಕ್ರಮವಾಗಿ ಕೆಡವಲಾಗಿದೆ ಎಂದು ಆರೋಪಿಸಿ, ಯೋಗಿ ಆದಿತ್ಯನಾಥ್ ಸರ್ಕಾರದ ಬುಲ್ಡೋಜರ್ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ‘ಬುಲ್ಡೋಜರ್‌ನ ಕ್ರಮ ಕಾನೂನಿನ ಪ್ರಕಾರ ಇರಬೇಕು’ಎಂದು ಹೇಳಿತ್ತು.
ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಯೋಗಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರೆ, ಅರ್ಜಿದಾರರ ಪರ ವಕೀಲ ಸಿಯು ಸಿಂಗ್ ಇದಕ್ಕೆ ತಡೆ ನೀಡಬೇಕೆಂದು ಒತ್ತಾಯಿಸಿದರು.
ವಿಚಾರಣೆಯ ನಂತರ, ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ವೇಳೆ ಕಾನೂನಿನ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಇದರೊಂದಿಗೆ ಯುಪಿ ಸರ್ಕಾರ ಹಾಗೂ ಪ್ರಯಾಗ್‌ರಾಜ್ ಮತ್ತು ಕಾನ್ಪುರ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಬಗ್ಗೆ 3 ದಿನಗಳಲ್ಲಿ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಇದೀಗ ಸರ್ಕಾರವು ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದ್ದು, ಎಲ್ಲಾ ಕಟ್ಟಡಗಳ ತೆರವು ಕಾನೂನು ಪ್ರಕಾರವೇ ನಡೆದಿದೆ, ತೆರವು ಕಾರ್ಯಕ್ಕೂ ಗಲಭೆಗೂ ಸಂಬಂಧವಿಲ್ಲ ಎಂದು ಹೇಳಿದೆ.
ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ನಡೆದ ಗಲಭೆಯ ಮಾಸ್ಟರ್ ಮೈಂಡ್ ಎನಿಸಿಕೊಂಡಿದ್ದ ಜಾವೇದ್ ಮೊಹಮ್ಮದ್ ಮನೆಯೂ ಕೂಡ ಅದರಲ್ಲಿ ಒಂದಾಗಿತ್ತು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ