ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defence Academy-NDA) ಮತ್ತು ನೌಕಾದಳ ಅಕಾಡೆಮಿ ಪರೀಕ್ಷೆಗೆ ಅವಿವಾಹಿತ ಯುವತಿಯರೂ ಅರ್ಜಿ ಸಲ್ಲಿಸಲು ಕೇಂದ್ರ ಸೇವಾ ಆಯೋಗ (UPSC) ಅವಕಾಶ ನೀಡಿದೆ. ಈ ಬಗ್ಗೆ ಇಂದು ಅಧಿಕೃತ ಪ್ರಕಟಣೆ ಹೊರಡಿಸಿದೆ. ಎನ್ಡಿಎ ಮತ್ತು ನೌಕಾದಳ ಅಕಾಡೆಮಿಗಳಲ್ಲಿ ಮಹಿಳೆಯರಿಗೂ ಪ್ರವೇಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಮಹಿಳೆಯರಿಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪ್ರವೇಶ ಮತ್ತು ಸೇನೆಯಲ್ಲಿ ಶಾಶ್ವತ ಆಯೋಗಕ್ಕೆ ಅವಕಾಶ ನೀಡಲು ಸೇನೆಯ ಮೂರು ವಿಭಾಗಗಳು ಒಪ್ಪಿಗೆ ನೀಡಿದ್ದಾಗಿ ಕೇಂದ್ರ ಸರ್ಕಾರವೂ ಸುಪ್ರೀಂಕೋರ್ಟ್ಗೆ ತಿಳಿಸಿತ್ತು.
ಇದೀಗ ಸುಪ್ರೀಂಕೋರ್ಟ್ನ ಮಧ್ಯಂತರ ಆದೇಶಕ್ಕೆ ಅನುಸಾರವಾಗಿ ಯುಪಿಎಸ್ಸಿ (UPSC) ತನ್ನ upsconline.nic.in ವೆಬ್ಸೈಟ್ನಲ್ಲಿ ಅವಿವಾಹಿತ ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲು ನಿರ್ಧರಿಸಿದೆ. ಅಲ್ಲಿ ಅವಿವಾಹಿತ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ( unmarried women candidates only) ಎಂಬ ಆಯ್ಕೆ ನೀಡಲಿದ್ದು, ರಾಷ್ಟ್ರೀಯತೆ, ವಯಸ್ಸು, ಶಿಕ್ಷಣದಲ್ಲಿ ಅರ್ಹರಾಗಿರುವ, ಆಸಕ್ತ ಯುವತಿಯರು ಅರ್ಜಿ ಸಲ್ಲಿಸಬಹುದು ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಮಹಿಳಾ ಅಭ್ಯರ್ಥಿಗಳ ದೈಹಿಕ ಮಾನದಂಡಗಳು ಮತ್ತು ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಕೇಂದ್ರ ರಕ್ಷಣಾ ಸಚಿವಾಲಯದಿಂದ ಅಧಿಸೂಚನೆ ಬಂದ ಬಳಿಕ ತಿಳಿಸಲಾಗುವುದು. ಇಂದಿನಿಂದ (ಸೆಪ್ಟೆಂಬರ್ 24) ಅಕ್ಟೋಬರ್ 8ರ ಸಂಜೆ 6ಗಂಟೆವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅಕ್ಟೋಬರ್ 8ರ ಸಂಜೆ ಆರುಗಂಟೆ ನಂತರ ಬಂದ ಯಾವುದೇ ಅರ್ಜಿಯನ್ನೂ ಸ್ವೀಕರಿಸುವುದಿಲ್ಲ. ಅರ್ಜಿ ಸಲ್ಲಿಸುವಾಗ ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ. ನವೆಂಬರ್ 14ರಂದು ಪರೀಕ್ಷೆ ನಡೆಯಲಿದೆ ಎಂದು ಎಂದು ಯುಪಿಎಸ್ಸಿ ತಿಳಿಸಿದೆ.
ಮಹಿಳೆಯರನ್ನು ಸೇನೆಯಲ್ಲಿ ಶಾರ್ಟ್ ಸರ್ವೀಸ್ ಕಮಿಷನ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈ ಲಿಂಗತಾರತಮ್ಯವನ್ನು ಹೋಗಲಾಡಿಸಬೇಕು. ಮಹಿಳೆಯರನ್ನೂ ಶಾಶ್ವತ ಆಯೋಗದಡಿಯೇ ನೇಮಕ ಮಾಡಬೇಕು ಎಂದು 2020ರಲ್ಲೇ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಅದರ ವಿಚಾರಣೆ ನಡೆಯುತ್ತಿತ್ತು..ಆಗಸ್ಟ್ 18ರಂದು ಮತ್ತೆ ಈ ವಿಚಾರ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಪುನರುಚ್ಚರಿಸಿತ್ತು.
ಇದನ್ನೂ ಓದಿ: IPL 2021: ಟಿ. ನಟರಾಜನ್ಗೆ ಕೊರೊನಾ ಸೋಂಕು; ಬದಲಿಯಾಗಿ ತಂಡ ಸೇರಿದ ಜಮ್ಮು ಮತ್ತು ಕಾಶ್ಮೀರದ ಯುವ ವೇಗಿ
KL Rahul and Athiya Shetty: ಮುಂದುವರೆದಿದೆ ರಾಹುಲ್- ಆಥಿಯಾ ತುಂಟಾಟ; ಈ ಬಾರಿ ಏನು ಸಮಾಚಾರ?
(UPSC allows unmarried women to apply for national defence academy exams)