
ನವದೆಹಲಿ, ನವೆಂಬರ್ 26: ಅಮೆರಿಕದ ವ್ಯಾಪಾರ ನೀತಿಗಳ ವಿರುದ್ಧ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಭಾರತದ ಕೈಗಾರಿಕಾ ಮತ್ತು ವ್ಯಾಪಾರ ನೀತಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುವರಿ ಉತ್ಪಾದನೆಗೆ ಕಾರಣವಾಗುತ್ತಿವೆ ಎಂಬ ಅಮೆರಿಕದ ಆರೋಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ದೇಶದ ಯಾವುದೇ ಕೈಗಾರಿಕಾ ವಲಯದಲ್ಲೂ ರಚನಾತ್ಮಕ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ಇಲ್ಲ ಎಂದು ಭಾರತ ಹೇಳಿದೆ.
ಈ ಬೆಳವಣಿಗೆಯ ಬೆನ್ನಲ್ಲೇ, ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಕೆಲವು ಸರಕುಗಳ ಮೇಲೆ ಶೇ.25ರವರೆಗೆ ಸುಂಕ ವಿಧಿಸುವ ಪ್ರಸ್ತಾಪವೂ ಚರ್ಚೆಗೆ ಬಂದಿದೆ. ಈ ನೋಟಿಸ್ ಪರಿಶೀಲನೆಯಲ್ಲಿದೆ ಎಂದು ಭಾರತದ ವಾಣಿಜ್ಯ ಸಚಿವಾಲಯ ತಿಳಿಸಿದ್ದು, ಅಮೆರಿಕದೊಂದಿಗಿನ ವ್ಯಾಪಾರ ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಭಾರತ ಬಯಸಿದೆ.
ಅಮೆರಿಕದ ಆರೋಪವೇನು?
ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ ಪ್ರಕಾರ, ಭಾರತ ಸೇರಿದಂತೆ 14 ಆರ್ಥಿಕತೆಗಳ ಕೈಗಾರಿಕಾ ನೀತಿಗಳು ಅಮೆರಿಕದ ಉತ್ಪಾದಕರು ಮತ್ತು ರಫ್ತುದಾರರಿಗೆ ತೊಂದರೆ ಉಂಟುಮಾಡುತ್ತಿವೆ. ಈ ದೇಶಗಳಲ್ಲಿನ ಸರ್ಕಾರದ ಸಬ್ಸಿಡಿಗಳು, ಕೈಗಾರಿಕೆಗಳಿಗೆ ನೀಡುವ ಆರ್ಥಿಕ ನೆರವು, ಕಾರ್ಮಿಕ ನೀತಿಗಳು ಮತ್ತು ಮಾರುಕಟ್ಟೆ ನಿರ್ಬಂಧಗಳು ಜಾಗತಿಕ ವ್ಯಾಪಾರದಲ್ಲಿ ಅಸಮತೋಲನ ಸೃಷ್ಟಿಸುತ್ತಿವೆ ಎಂಬುದು ಅಮೆರಿಕದ ವಾದ.
ಭಾರತದ ವಿಚಾರದಲ್ಲಿ, ಉತ್ಪಾದನಾ ವಲಯವನ್ನು ವಿಸ್ತರಿಸುವ ಕೈಗಾರಿಕಾ ಯೋಜನೆಗಳು, ಕಾರ್ಮಿಕರ ರಕ್ಷಣೆಯಲ್ಲಿನ ಕೊರತೆ, ಮಾರುಕಟ್ಟೆ ಪ್ರವೇಶದ ನಿರ್ಬಂಧಗಳು ಮತ್ತು ಕೆಲವು ಆರ್ಥಿಕ ನೀತಿಗಳನ್ನು ಅಮೆರಿಕ ಪ್ರಶ್ನಿಸಿದೆ. ಔಷಧ, ವೈದ್ಯಕೀಯ ಉಪಕರಣಗಳು, ಉಕ್ಕು, ಸೌರಶಕ್ತಿ ಮತ್ತು ಮಾಹಿತಿ-ತಂತ್ರಜ್ಞಾನ ಕ್ಷೇತ್ರಗಳನ್ನು ವಿಶೇಷವಾಗಿ ಉಲ್ಲೇಖಿಸಿದೆ.
ಇದನ್ನೂ ಓದಿ:
ಟ್ರಂಪ್ ಸುಂಕದ ಹೊಸ ಅಸ್ತ್ರ: ಭಾರತದ ಮೇಲೂ ಬೀಳುತ್ತಾ ಹೆಚ್ಚುವರಿ ತೆರಿಗೆ?
ಶೇ.25 ಸುಂಕದ ಪ್ರಸ್ತಾಪ ಏಕೆ?
ಅಮೆರಿಕದ ಪ್ರಸ್ತಾಪದ ಪ್ರಕಾರ, ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.25ರವರೆಗೆ ಹೆಚ್ಚುವರಿ ಸುಂಕ ವಿಧಿಸಬಹುದು. ಆದರೆ ಭಾರತ ಮತ್ತು ಅಮೆರಿಕ ಪರಸ್ಪರ ವ್ಯಾಪಾರ ಒಪ್ಪಂದಕ್ಕೆ ಬಂದರೆ ಈ ಸುಂಕದ ಪ್ರಮಾಣವನ್ನು ಶೇ.17ಕ್ಕೆ ಇಳಿಸುವ ಸಾಧ್ಯತೆಯನ್ನೂ ಅಮೆರಿಕ ಮುಂದಿಟ್ಟಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಶೇ.25ರ ಸುಂಕ ಈಗಾಗಲೇ ಜಾರಿಗೆ ಬಂದಿಲ್ಲ. ಇದು ಅಮೆರಿಕದ ಪ್ರಸ್ತಾವಿತ ಕ್ರಮ. ಕೆಲವು ಸರಕುಗಳಿಗೆ ವಿನಾಯಿತಿಯನ್ನೂ ನೀಡುವ ಸಾಧ್ಯತೆಯಿದೆ.
ಸೆಕ್ಷನ್ 301 ಎಂದರೇನು?
ಅಮೆರಿಕದ 1974ರ ವ್ಯಾಪಾರ ಕಾಯ್ದೆಯಲ್ಲಿರುವ ಸೆಕ್ಷನ್ 301, ವಿದೇಶಗಳ ವ್ಯಾಪಾರ ನೀತಿಗಳು ಅಮೆರಿಕದ ವ್ಯಾಪಾರಕ್ಕೆ ಅನ್ಯಾಯ ಮಾಡುತ್ತಿವೆ ಎಂದು ಭಾವಿಸಿದಾಗ ತನಿಖೆ ನಡೆಸಲು ಅವಕಾಶ ನೀಡುತ್ತದೆ.
– ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ ತನಿಖೆ ನಡೆಸುತ್ತದೆ.
– ವಿದೇಶಿ ಸರ್ಕಾರಗಳ ನೀತಿಗಳು ಅಮೆರಿಕದ ವ್ಯಾಪಾರಕ್ಕೆ ಹಾನಿ ಮಾಡುತ್ತಿವೆಯೇ ಎಂದು ಪರಿಶೀಲಿಸುತ್ತದೆ.
– ಅನ್ಯಾಯದ ವ್ಯಾಪಾರ ಪದ್ಧತಿಗಳಿವೆ ಎಂದು ನಿರ್ಧರಿಸಿದರೆ ಹೆಚ್ಚುವರಿ ಸುಂಕ ಅಥವಾ ಇತರ ನಿರ್ಬಂಧಗಳನ್ನು ಪ್ರಸ್ತಾಪಿಸಬಹುದು.
ಈ ಪ್ರಕರಣದಲ್ಲಿ 2026ರ ಮಾರ್ಚ್ನಲ್ಲಿ 16 ಆರ್ಥಿಕತೆಗಳ ವಿರುದ್ಧ ತನಿಖೆ ಆರಂಭಿಸಲಾಗಿತ್ತು. ನವೆಂಬರ್ 25ರಂದು ಅವುಗಳಲ್ಲಿ 14ರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧಾರ ಪ್ರಕಟಿಸಲಾಗಿದೆ.
ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ಎಂದರೇನು?
ಒಂದು ದೇಶದ ಕಾರ್ಖಾನೆಗಳು ಉತ್ಪಾದಿಸಬಲ್ಲ ಸರಕುಗಳ ಪ್ರಮಾಣವು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಯ ಬೇಡಿಕೆಗಿಂತ ಬಹಳ ಹೆಚ್ಚಾಗಿದ್ದರೆ ಅದನ್ನು ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ಎಂದು ಕರೆಯಲಾಗುತ್ತದೆ.
ಉದಾಹರಣೆಗೆ, ಒಂದು ಕಾರ್ಖಾನೆ ತಿಂಗಳಿಗೆ ಒಂದು ಲಕ್ಷ ವಸ್ತುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ ಎಂದುಕೊಳ್ಳಿ. ಆದರೆ ಮಾರುಕಟ್ಟೆಯಲ್ಲಿ ಅದಕ್ಕೆ 50 ಸಾವಿರ ವಸ್ತುಗಳಷ್ಟೇ ಬೇಡಿಕೆಯಿದೆ. ಆಗ ಉಳಿದ ಉತ್ಪಾದನಾ ಸಾಮರ್ಥ್ಯ ಬಳಕೆಯಾಗದೆ ಉಳಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಂಪನಿಗಳು ಹೆಚ್ಚುವರಿ ಸರಕುಗಳನ್ನು ವಿದೇಶಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಬಹುದು. ಇದರಿಂದ ಬೇರೆ ದೇಶಗಳ ಸ್ಥಳೀಯ ಉತ್ಪಾದಕರಿಗೆ ಸ್ಪರ್ಧೆ ಎದುರಾಗಬಹುದು. ಇದೇ ವಿಚಾರವನ್ನು ಅಮೆರಿಕ ತನ್ನ ಆರೋಪಕ್ಕೆ ಆಧಾರವಾಗಿ ಮುಂದಿಟ್ಟಿದೆ. ಆದರೆ ಭಾರತ ಈ ಆರೋಪವನ್ನು ಒಪ್ಪಿಲ್ಲ. ದೇಶದ ಯಾವುದೇ ವಲಯದಲ್ಲೂ ರಚನಾತ್ಮಕ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ಇಲ್ಲ ಎಂಬುದು ಭಾರತದ ಸ್ಪಷ್ಟನೆ.
ಮುಂದೇನು ಆಗಬಹುದು?
ಅಮೆರಿಕದ ಪ್ರಸ್ತಾಪದ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. 2027ರ ಜನವರಿ 5ರೊಳಗೆ ಲಿಖಿತ ಅಭಿಪ್ರಾಯ ಸಲ್ಲಿಸಲು ಅವಕಾಶವಿದೆ. ಜನವರಿ 25ರಿಂದ ವಿಚಾರಣೆಗಳನ್ನು ನಡೆಸಲು ಯುಎಸ್ಟಿಆರ್ ಯೋಜಿಸಿದೆ. ಆ ಪ್ರಕ್ರಿಯೆಯ ನಂತರವೇ ಮುಂದಿನ ಕ್ರಮದ ಬಗ್ಗೆ ನಿರ್ಧಾರವಾಗಲಿದೆ.
ಹೀಗಾಗಿ ಸುಂಕ ಜಾರಿಗೆ ಬರುವ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಭಾರತದ ವಾಣಿಜ್ಯ ಸಚಿವಾಲಯವು ಅಮೆರಿಕದ ನೋಟಿಸ್ ಪರಿಶೀಲನೆಯಲ್ಲಿದೆ ಎಂದು ಹೇಳಿದೆ. ಎರಡೂ ದೇಶಗಳ ನಡುವೆ ನಡೆಯುತ್ತಿರುವ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳಲ್ಲಿಯೇ ವ್ಯಾಪಾರ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬುದು ಭಾರತದ ನಿಲುವು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ