US Visa: ಅಮೆರಿಕ ವೀಸಾ ವಿತರಣೆಗೆ ಹೊಸ ನಿಯಮ, ವಿದೇಶಗಳಲ್ಲೂ ಅರ್ಜಿ ಸಲ್ಲಿಸಲು ಅವಕಾಶ; ಮಹತ್ವದ ಬೆಳವಣಿಗೆಯ 10 ಅಂಶಗಳಿವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 06, 2023 | 10:01 AM

B1 B2 Visa: ಮೊದಲ ಬಾರಿಗೆ ಅಮೆರಿಕ ವೀಸಾಗಾಗಿ ಅರ್ಜಿ ಸಲ್ಲಿಸುವವರಿಗೆಂದೇ ಪ್ರತಿ ಶನಿವಾರ ವಿಶೇಷ ಸಂದರ್ಶನಗಳನ್ನು ಆಯೋಜಿಸಲಾಗುತ್ತಿದೆ.

US Visa: ಅಮೆರಿಕ ವೀಸಾ ವಿತರಣೆಗೆ ಹೊಸ ನಿಯಮ, ವಿದೇಶಗಳಲ್ಲೂ ಅರ್ಜಿ ಸಲ್ಲಿಸಲು ಅವಕಾಶ; ಮಹತ್ವದ ಬೆಳವಣಿಗೆಯ 10 ಅಂಶಗಳಿವು
ಅಮೆರಿಕ ವೀಸಾ ಮತ್ತು ಭಾರತದ ಪಾಸ್​ಪೋರ್ಟ್​ (ಪ್ರಾತಿನಿಧಿಕ ಚಿತ್ರ)
Follow us on

ದೆಹಲಿ: ಅಮೆರಿಕದ ವೀಸಾ (US Visa) ಬಯಸುವ ಭಾರತೀಯರು ಅಕ್ಕಪಕ್ಕದ ದೇಶಗಳಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಭಾರತದಲ್ಲಿರುವ ಅಮೆರಿಕ ದೂತಾವಾಸ ಕಚೇರಿ (US Embassy in India) ತಿಳಿಸಿದೆ. ಕೊವಿಡ್ ಪಿಡುಗಿನ ನಂತರ ಅಮೆರಿಕದ ವೀಸಾ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಭಾರತದ ಕೆಲವು ವೀಸಾ ವಿತರಣಾ ಕೇಂದ್ರಗಳಲ್ಲಿ 800 ದಿನಗಳಷ್ಟು ಸುದೀರ್ಘ ಅವಧಿಯ ಕಾಯುವಿಕೆ ಇದೆ. ಈ ಹಿನ್ನೆಲೆಯಲ್ಲಿ ವೀಸಾ ವಿತರಣೆಯನ್ನು ಸರಳಗೊಳಿಸಲು ಅಮೆರಿಕ ಮುಂದಾಗಿದೆ.

  1. ಅಮೆರಿಕ ದೂತವಾಸ ಕಚೇರಿಯಲ್ಲಿ ಪ್ರವಾಸಿ ಮತ್ತು ಬ್ಯುಸಿನೆಸ್ ವೀಸಾಗಾಗಿ ಅರ್ಜಿ ಸಲ್ಲಿಸುವ ಭಾರತೀಯರು ಮುಂದಿನ ದಿನಗಳಲ್ಲಿ ಅಕ್ಕಪಕ್ಕದ ದೇಶಗಳ ರಾಜತಾಂತ್ರಿಕ ಕಚೇರಿ ಅಥವಾ ದೂತಾವಾಸಗಳನ್ನೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
  2. ‘ನೀವು ವಿದೇಶ ಪ್ರವಾಸಕ್ಕೆ ಹೊರಡುವ ತಯಾರಿಯಲ್ಲಿದ್ದೀರಾ? ನೀವೀಗ ನಿಮ್ಮದೇ ದೇಶ / ಊರಿನಲ್ಲಿರುವ ರಾಜತಾಂತ್ರಿಕ ಕಚೇರಿಯಲ್ಲಿ ವೀಸಾಗೆ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ ಥಾಯ್ಲೆಂಡ್​ನಲ್ಲಿರುವ ಭಾರತೀಯರು ಅಲ್ಲಿನ ರಾಜತಾಂತ್ರಿಕ ಕಚೇರಿಯಿಂದಲೇ ವೀಸಾ ಪಡೆದುಕೊಳ್ಳಬಹುದು’ ಎಂದು ಅಮೆರಿಕ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
  3. ಥಾಯ್ಲೆಂಡ್​ ಅನ್ನು ಒಂದು ಉದಾಹರಣೆಯಾಗಿಯಷ್ಟೇ ಕೊಟ್ಟಿದ್ದೇವೆ. B1 ಮತ್ತು B2 ವೀಸಾ ಸೌಲಭ್ಯವಿರುವ ಯಾವುದೇ ದೇಶದ ರಾಜತಾಂತ್ರಿಕ ಕಚೇರಿಯಿಂದ ನೀವು ವೀಸಾ ಪಡೆಯಬಹುದಾಗಿದೆ ಎಂದು ಟ್ವೀಟ್​ನಲ್ಲಿ ಮಾಹಿತಿ ನೀಡಲಾಗಿದೆ.
  4. ವೀಸಾ ವಿತರಣೆಯನ್ನು ಸುಲಲಿತಗೊಳಿಸುವ ಉದ್ದೇಶದಿಂದ ಇನ್ನೂ ಕೆಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜತಾಂತ್ರಿಕ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗಿದೆ. ಮೊದಲ ಬಾರಿ ವೀಸಾ ಪಡೆಯುತ್ತಿರುವವರಿಗಾಗಿ ವಿಶೇಷ ಸಂದರ್ಶನಗಳನ್ನು ಆಯೋಜಿಸಲಾಗಿದೆ ಎಂದು ಅಮೆರಿಕ ತಿಳಿಸಿದೆ.
  5. ಕೊವಿಡ್ ಪಿಡುಗು ವ್ಯಾಪಿಸಿದ್ದಾಗ ಅಮೆರಿಕ ದೂತವಾಸ ಕಚೇರಿಯ ಸಾಕಷ್ಟು ಸಿಬ್ಬಂದಿಯನ್ನು ವಾಪಸ್ ಕಳಿಸಲಾಗಿತ್ತು. ಕೊವಿಡ್ ಅಂತ್ಯಗೊಂಡ ನಂತರ ಅಮೆರಿಕ ವೀಸಾಗಳಿಗೆ ಭಾರತದಲ್ಲಿ ಅಮೆರಿಕ ವೀಸಾಗಳಿಗೆ ಏಕಾಏಕಿ ಬೇಡಿಕೆ ಹೆಚ್ಚಾಗಿದೆ. ಈ ವರ್ಷದ ಬೇಸಿಗೆಯಲ್ಲಿ ಇನ್ನಷ್ಟು ಸಿಬ್ಬಂದಿ ನೇಮಿಸಲಾಗುವುದು ಎಂದು ಅಮೆರಿಕ ಹೇಳಿದೆ.
  6. ಅಮೆರಿಕ ವೀಸಾಗಳನ್ನು ನವೀಕರಿಸಲು ಬಯಸುವವರು ಡ್ರಾಪ್​ಬಾಕ್ಸ್ (dropbox) ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅವರ ಬಯೋಮೆಟ್ರಿಕ್ ವಿವರಗಳು ಅದಾಗಲೇ ಅಮೆರಿಕ ಸರ್ಕಾರದ ಬಳಿ ಇರುವ ಕಾರಣ ವೈಯಕ್ತಿಕ ಭೇಟಿ ಅಗತ್ಯವಿಲ್ಲ ಎಂದು ಅಮೆರಿಕ ದೂತಾವಾಸ ಕಚೇರಿ ಸ್ಪಷ್ಟಪಡಿಸಿದೆ.
  7. ಈ ವರ್ಷ ಭಾರತೀಯ ವಿದ್ಯಾರ್ಥಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವೀಸಾಗಳಿಗೆ ಅರ್ಜಿ ಸಲ್ಲಿಕೆಯಾಗಬಹುದು ಎಂಬ ನಿರೀಕ್ಷೆ ಇರುವುದರಿಂದ ಬ್ಯಾಕ್​ಲಾಗ್ ಆಗದಂತೆ ತಡೆಯಲು ಹಲವು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಮುಂಬೈನಲ್ಲಿರುವ ಅಮೆರಿಕದ ಕಾನ್ಸುಲೇಟ್ ಜನರಲ್ ಜಾನ್ ಬಲ್ಲಾರ್ಡ್ ಹೇಳಿದ್ದಾರೆ.
  8. ಮೊದಲ ಬಾರಿಗೆ ಅಮೆರಿಕ ವೀಸಾಗಾಗಿ ಅರ್ಜಿ ಸಲ್ಲಿಸುವವರಿಗೆಂದೇ ಮುಂಬೈ, ಚೆನ್ನೈ, ಕೊಲ್ಕತ್ತಾ ಮತ್ತು ಹೈದರಾಬಾದ್​ ನಗರಗಳಲ್ಲಿರುವ ಅಮೆರಿಕ ದೂತಾವಾಸ ಕಚೇರಿಗಳಲ್ಲಿ ಪ್ರತಿ ಶನಿವಾರ ವಿಶೇಷ ಸಂದರ್ಶನಗಳನ್ನು ಆಯೋಜಿಸಲಾಗುತ್ತಿದೆ.
  9. ಕೇವಲ ಎರಡು ವಾರಗಳಲ್ಲಿ ಭಾರತದಲ್ಲಿರುವ ಅಮೆರಿಕ ರಾಜತಾಂತ್ರಿಕ ಕಚೇರಿಗಳು 2.50 ಲಕ್ಷಕ್ಕೂ ಹೆಚ್ಚು B1/B2 ವೀಸಾಗಳನ್ನು ಬಿಡುಗಡೆ ಮಾಡಿವೆ.
  10. ಅಮೆರಿಕ ರಾಜತಾಂತ್ರಿಕ ಕಚೇರಿಗಳಲ್ಲಿ ವೀಸಾ ಪಡೆಯಲು ಸಿಗುವ ಅಪಾಯಿಂಟ್​ಮೆಂಟ್​ಗಳ ಅವಧಿ 2 ತಿಂಗಳು ಮೀರಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿತ್ತು.

 

Published On - 9:58 am, Mon, 6 February 23