ದೆಹಲಿ: ಗುಜರಾತ್‌ನಲ್ಲಿ(Gujarat) ನಡೆದ ಉತ್ಕರ್ಷ್ ಸಮಾರೋಹ್ (Utkarsh Samaroh) ಕಾರ್ಯಕ್ರಮದಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಗುರುವಾರ ಸಂವಾದ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು, ದೃಷ್ಟಿ ವೈಕಲ್ಯವಿರುವ ವ್ಯಕ್ತಿಯೊಬ್ಬರ ಕಷ್ಟವನ್ನು ಕಂಡು ಮರುಗಿದ್ದಾರೆ. ತನ್ನ ಮಗಳು ವೈದ್ಯೆಯಾಗಲು ಬಯಸಿದ್ದಾಳೆ ಎಂದು ಆ ವ್ಯಕ್ತಿ ಹೇಳಿದಾಗ ಮಗಳು ನಿಮ್ಮ ಬಳಿ ಇದ್ದಾಳೆಯೇ?ಎಂದು ಮೋದಿ ಕೇಳಿದ್ದಾರೆ. ವ್ಯಕ್ತಿಯ ಪಕ್ಕದಲ್ಲಿ ಕುಳಿತಿದ್ದ ಬಾಲಕಿ ಎದ್ದು ನಿಂತಾಗ ಆಕೆಯಲ್ಲಿ ನೀವು ಯಾಕೆ ಡಾಕ್ಟರ್ ಆಗಲು ಬಯಸುತ್ತಿದ್ದೀರಿ? ಎಂದು ಮೋದಿ ಕೇಳಿದ್ದಾರೆ. ಆಕೆ ನೀಡಿದ ಉತ್ತರ ಕೇಳಿ ಕ್ಷಣ ಕಾಲ ಮೌನರಾದ ಮೋದಿ ಭಾವುಕರಾಗಿದ್ದಾರೆ. ಪ್ರಧಾನಿಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅಯೂಬ್ ಪಟೇಲ್ ಎಂಬ ವ್ಯಕ್ತಿಯಲ್ಲಿ ಪ್ರಧಾನಿ ಅವರು ತಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುತ್ತೀರಾ ಎಂದು ಕೇಳಿದರು. ಅದಕ್ಕೆ ಆ ವ್ಯಕ್ತಿ ತನ್ನ ಮೂವರು ಹೆಣ್ಣುಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ. ಅವರಲ್ಲಿ ಇಬ್ಬರು ಸರ್ಕಾರಿ ವಿದ್ಯಾರ್ಥಿವೇತನವನ್ನು ಸಹ ಪಡೆಯುತ್ತಿದ್ದಾರೆ ಎಂದು ಹೇಳಿದರು. 12ನೇ ತರಗತಿ ಓದುತ್ತಿರುವ ಹಿರಿಯ ಮಗಳು ವೈದ್ಯೆಯಾಗುವ ಆಸೆ ಹೊಂದಿದ್ದಾಳೆ ಎಂದು ಹೇಳಿದ್ದಾರೆ. ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎಂದು ಪ್ರಧಾನಿ ಮೋದಿ ಬಾಲಕಿಯಲ್ಲಿ ನೇರವಾಗಿ ಕೇಳಿದಾಗ, ನನ್ನ ತಂದೆಯಿಂದ ಬಳಲುತ್ತಿರುವ ಸಮಸ್ಯೆಯಿಂದ ನಾನು ವೈದ್ಯೆಯಾಗಲು ಬಯಸುತ್ತೇನೆ ಎಂದು ಬಾಲಕಿ ಕಣ್ಣೀರಾಗಿದ್ದಾಳೆ. ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವಾಗ ಕಣ್ಣಿಗೆ ಹಾಕಿದ ಹನಿ ಮದ್ದಿನಿಂದಾಗಿ ತನ್ನ ಕಣ್ಣಿನ ದೃಷ್ಟಿ ಕಡಿಮೆಯಾಗಿದೆ ಎಂದು ಅಯೂಬ್ ಹೇಳಿದ್ದಾರೆ.
ಹುಡುಗಿಯ ಪ್ರತಿಕ್ರಿಯೆಯ ಬಗ್ಗೆ ಭಾವುಕರಾದ ಪ್ರಧಾನಿಯವರು ಸ್ವಲ್ಪ ಹೊತ್ತು ಮೌನವಾಗಿ ಬಿಟ್ಟರು. ನಂತರ ಆಕೆಯ ಧೈರ್ಯವನ್ನು ಶ್ಲಾಘಿಸಿದರು. ನಿಮ್ಮ ಸಹಾನುಭೂತಿಯೇ ನಿಮ್ಮ ಶಕ್ತಿ ಎಂದು ಮೋದಿ ಹೇಳಿದ್ದಾರೆ.
#WATCH | While talking to Ayub Patel, one of the beneficiaries of govt schemes in Gujarat during an event, PM Modi gets emotional after hearing about his daughter’s dream of becoming a doctor & said, “Let me know if you need any help to fulfill the dream of your daughters” pic.twitter.com/YuuVpcXPiy
— ANI (@ANI) May 12, 2022
ಈದ್ ಮತ್ತು ರಂಜಾನ್ ಹಬ್ಬಗಳನ್ನು ಹೇಗೆ ಆಚರಿಸಿದಿರಿ ಎಂದು ವಿಚಾರಿಸಿದ ಮೋದಿ, ಮಗಳಿಗೆ ವೈದ್ಯಕೀಯ ಶಿಕ್ಷಣದ ಅಗತ್ಯವಿದ್ದರೆ ಸಹಾಯ ಮಾಡುತ್ತೇವೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. “ನೀವು ಅವರ ಕನಸನ್ನು ನನಸಾಗಿಸಬೇಕು” ಎಂದು ಮೋದಿ ಅಯೂಬ್‌ಗೆ ಹೇಳಿದ್ದಾರೆ. ಪ್ರಧಾನಿ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹುಡುಗಿಯರ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯವನ್ನು ಪಡೆಯುತ್ತಿದ್ದೇನೆ ಎಂದು ಆಯೂಬ್ ಹೇಳಿದ್ದಾರೆ.