ಯೋಗಿ ಆದಿತ್ಯನಾಥ್ ವಿಧಾನಸಭಾ ಚುನಾವಣೆ ಸ್ಪರ್ಧೆಗೆ ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದ ರಾಜಕೀಯ ಇತಿಹಾಸ ಇಲ್ಲಿದೆ ನೋಡಿ

| Updated By: sandhya thejappa

Updated on: Jan 15, 2022 | 2:56 PM

UP Assembly Election: ಸಿಎಂ ಯೋಗಿ ಆದಿತ್ಯನಾಥ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಮತ್ತು ಗೋರಖ್‌ಪುರ, ಅಯೋಧ್ಯೆ ಮತ್ತು ಮಥುರಾ ಕ್ಷೇತ್ರಗಳ ಬಗ್ಗೆ ಬಿಜೆಪಿ ಹೈಕಮಾಂಡ್ ಚರ್ಚೆ ನಡೆಸುತ್ತಿದೆ ಎಂದು ಮಾಧ್ಯಮಗಳು ಈ ಮೊದಲು ಕೂಡ ವರದಿ ಮಾಡಿದ್ದವು.

ಯೋಗಿ ಆದಿತ್ಯನಾಥ್ ವಿಧಾನಸಭಾ ಚುನಾವಣೆ ಸ್ಪರ್ಧೆಗೆ ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದ ರಾಜಕೀಯ ಇತಿಹಾಸ ಇಲ್ಲಿದೆ ನೋಡಿ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
Follow us on

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಈ ಬಾರಿ ವಿಧಾನಸಭಾ ಚುನಾವಣೆಗೆ (Assembly Election) ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಗೋರಖ್ ಪುರ (Gorakhpur) ನಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ. ಯೋಗಿ ಆದಿತ್ಯನಾಥ್ ಸ್ಪರ್ಧೆಗೆ ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದ ರಾಜಕೀಯ ಇತಿಹಾಸ ಏನು ಗೊತ್ತಾ? ಯೋಗಿ ಆದಿತ್ಯನಾಥ್ ಗೋರಖ್ ಪುರ ನಗರ ಕ್ಷೇತ್ರದಲ್ಲಿ ಗೆಲ್ಲುತ್ತಾರಾ? ಇದರ ಸಂಪೂರ್ಣ ವರದಿ ಇಲ್ಲಿದೆ ನೋಡಿ.

1967 ರಿಂದ ಬಿಜೆಪಿ ಮತ್ತು ಜನಸಂಘ ಪಕ್ಷದ ಭದ್ರಕೋಟೆಯಾದ ಗೋರಖ್‌ ಪುರ ನಗರ ಕ್ಷೇತ್ರದಿಂದ ಮುಂಬರುವ 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಶನಿವಾರ ಪ್ರಕಟಿಸಿದೆ. ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆ, ಗೋರಖ್‌ ಪುರ ನಗರ ಮತ್ತು ಮಥುರಾ ಎಂಬ ಮೂರು ಸಂಭವನೀಯ ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ್ಧಿಸಬಹುದು ಎಂಬ ಲೆಕ್ಕಾಚಾರಗಳಿದ್ದವು. ಅಂತಿಮವಾಗಿ ಬಿಜೆಪಿ ಸಂಸದೀಯ ಮಂಡಳಿಯು ಸಿಎಂ ಅವರನ್ನು ಗೋರಖ್‌ ಪುರ ನಗರ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದೆ.

ಆದಿತ್ಯನಾಥ್ 1998 ರಿಂದ 2017 ರಲ್ಲಿ ಯುಪಿ ಮುಖ್ಯಮಂತ್ರಿಯಾಗುವವರೆಗೂ ಗೋರಖ್‌ ಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು. ಗೋರಖ್‌ ಪುರ ನಗರ ಕ್ಷೇತ್ರವು ಬಿಜೆಪಿಗೆ ಅತ್ಯಂತ ಸುರಕ್ಷಿತ ಮತ್ತು ಯೋಗಿ ಆದಿತ್ಯನಾಥ್ ಅವರ ಭದ್ರಕೋಟೆಯಾಗಿರುವ ಗೋರಖನಾಥ ದೇವಾಲಯದ ಕಾರಣ, ಸಿಎಂ ಪ್ರಚಾರದಲ್ಲಿ ಹೆಚ್ಚು ಸಮಯ ಕಳೆಯಬೇಕಾಗಿಲ್ಲ. ಅವರು ಯುಪಿಯಲ್ಲಿ ಉಳಿದ ಚುನಾವಣಾ ತಂತ್ರಗಳ ಮೇಲೆ ಕೇಂದ್ರೀಕರಿಸಬಹುದು. ಗೋರಖ್ ಪುರ ನಗರ ವಿಧಾನಸಭಾ ಕ್ಷೇತ್ರವು 1967ರಿಂದಲೂ ಜನಸಂಘ ಹಾಗೂ ಬಿಜೆಪಿಯ ಭದ್ರಕೋಟೆ ಕ್ಷೇತ್ರ. 1967ರಿಂದಲೂ ಈ ಕ್ಷೇತ್ರದಲ್ಲಿ ಜನಸಂಘ ಹಾಗೂ ಬಿಜೆಪಿ ಅಭ್ಯರ್ಥಿಗಳೇ ನಿರಂತರವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸಿಎಂ ಯೋಗಿ ಆದಿತ್ಯನಾಥ್ ವಿಧಾನಸಭಾ ಚುನಾವಣೆಗೆ ಅತ್ಯಂತ ಸುರಕ್ಷಿತ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಅಗ್ರ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು 2012ರಲ್ಲಿ ಗೆದ್ದಿದ್ದ ಸಿರತ್ತು ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ.

ಸಿಎಂ ಯೋಗಿ ಆದಿತ್ಯನಾಥ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಮತ್ತು ಗೋರಖ್‌ಪುರ, ಅಯೋಧ್ಯೆ ಮತ್ತು ಮಥುರಾ ಕ್ಷೇತ್ರಗಳ ಬಗ್ಗೆ ಬಿಜೆಪಿ ಹೈಕಮಾಂಡ್ ಚರ್ಚೆ ನಡೆಸುತ್ತಿದೆ ಎಂದು ಮಾಧ್ಯಮಗಳು ಈ ಮೊದಲು ಕೂಡ ವರದಿ ಮಾಡಿದ್ದವು. ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಆದಿತ್ಯನಾಥ್ ಅವರು ತಮ್ಮ ರಾಜಕೀಯ ಎದುರಾಳಿಗಳಾದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಎಸ್‌ಪಿ ವರಿಷ್ಠೆ ಮಾಯಾವತಿ ಮತ್ತು ಕಾಂಗ್ರೆಸ್ ಯುಪಿ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮೇಲೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರಿದ್ದಾರೆ.

ಬಿಜೆಪಿಯ ಘೋಷಣೆಗೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿದ್ದು, “ಜನರು ಯೋಗಿ ಆದಿತ್ಯನಾಥ್ ಅವರನ್ನು ಗೋರಖ್‌ಪುರಕ್ಕೆ ಕಳುಹಿಸಬೇಕಾಗಿತ್ತು, ಆದರೆ ಜನರ ಮುಂದೆ ಬಿಜೆಪಿ ಅವರನ್ನು ವಾಪಸ್ ಗೋರಖ್ ಪುರಕ್ಕೆ ಕಳುಹಿಸಿದೆ” ಎಂದು ಹೇಳಿದ್ದಾರೆ. ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅಖಿಲೇಶ್ ಯಾದವ್ ಈ ಹಿಂದೆ ಹೇಳಿದ್ದರು, ಆದರೆ ಇತ್ತೀಚೆಗೆ ಈ ವಿಷಯದಲ್ಲಿ ತಮ್ಮ ಪಕ್ಷದ ನಿರ್ಧಾರದಂತೆ ಹೋಗುವುದಾಗಿ ಮತ್ತು ಆಯ್ಕೆಯಾದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಆದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಯಾವತಿ ಸ್ಪಷ್ಟಪಡಿಸಿದ್ದಾರೆ. ಆದರೆ ಈ ಬಗ್ಗೆ ಪ್ರಿಯಾಂಕಾ ಗಾಂಧಿ ಯಾವುದೇ ಹೇಳಿಕೆ ನೀಡಿಲ್ಲ.

ಬಿಜೆಪಿ ನಾಯಕ ರಾಧಾ ಮೋಹನ್ ದಾಸ್ ಅಗರ್ವಾಲ್ 2002 ರಿಂದ ಗೋರಖ್‌ ಪುರ ನಗರ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದಾರೆ. 2017 ರಲ್ಲಿ 60,000 ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಅದಕ್ಕೂ ಮೊದಲು, ಬಿಜೆಪಿ ನಾಯಕರಾದ ಶಿವ ಪ್ರತಾಪ್ ಶುಕ್ಲಾ ಮತ್ತು ಸುನೀಲ್ ಶಾಸ್ತ್ರಿ ಕ್ರಮವಾಗಿ 1989 ರಿಂದ 2002 ಮತ್ತು 1980 ರಿಂದ 1989 ರವರೆಗೆ ಗೋರಖ್ ಪುರ ನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು, 1967 ರಿಂದ ಭಾರತೀಯ ಜನಸಂಘದ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ 1951, 1957 ಮತ್ತು 1962 ರಲ್ಲಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು.

ವರದಿ: ಚಂದ್ರಮೋಹನ್

ಇದನ್ನೂ ಓದಿ

BSP Candidate List UP: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ; ಬಿಎಸ್​ಪಿಯಿಂದ 53 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

UP Assembly Election 2022; ಚುನಾವಣೆಯಲ್ಲಿ ಗೋರಖ್​ಪುರದಿಂದಲೇ ಸ್ಪರ್ಧಿಸಲಿದ್ದಾರೆ ಸಿಎಂ ಯೋಗಿ ಆದಿತ್ಯನಾಥ್​; ಅಯೋಧ್ಯೆಯಿಂದ ಯಾರು?