UP Assembly Election 2022; ಚುನಾವಣೆಯಲ್ಲಿ ಗೋರಖ್ಪುರದಿಂದಲೇ ಸ್ಪರ್ಧಿಸಲಿದ್ದಾರೆ ಸಿಎಂ ಯೋಗಿ ಆದಿತ್ಯನಾಥ್; ಅಯೋಧ್ಯೆಯಿಂದ ಯಾರು?
ಫೆಬ್ರವರಿ 10ರಿಂದ ಪ್ರಾರಂಭವಾಗಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ, ಉತ್ತರಪ್ರದೇಶದಲ್ಲಿ ಏಳು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಅದರಲ್ಲಿ 57 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಧರ್ಮೇಂದ್ರ ಪ್ರಧಾನ್ ಬಿಡುಗಡೆ ಮಾಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ(Uttar Pradesh Assembly Election 2022)ಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಬಹುದೊಡ್ಡ ಕುತೂಹಲ ಸೃಷ್ಟಿಸಿದ ವಿಚಾರವಾಗಿತ್ತು. ಈ ಬಾರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯಿಂದ ಸ್ಪರ್ಧಿಸಲಿದ್ದಾರೆ ಎಂದು ಬಲವಾದ ಮೂಲಗಳಿಂದ ತಿಳಿದುಬಂದ ಮಾಹಿತಿ ಎಂದೇ ಹೇಳಲಾಗಿತ್ತು. ಆದರೆ ಕುತೂಹಲಕ್ಕೀಗ ತೆರೆಬಿದ್ದಿದೆ. ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆಯಿಂದ ಸ್ಪರ್ಧಿಸುತ್ತಿಲ್ಲ. ಬದಲಿಗೆ ಅವರು ಗೋರಖ್ಪುರ ನಗರ ವಿಧಾನಸಭೆ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎಂಬುದು ಪಕ್ಕಾ ಆಗಿದೆ. ಈ ಗೋರಖ್ಪುರ ಯೋಗಿ ಆದಿತ್ಯನಾಥ್ರ ಸ್ವಕ್ಷೇತ್ರ. ಆದರೆ ಈ ಬಾರಿ ಅಯೋಧ್ಯೆ ಅಭಿವೃದ್ಧಿ ಬೆನ್ನಲ್ಲೇ, ಅವರು ಗೋರಖ್ಪುರ ತೊರೆದು ಅಯೋಧ್ಯೆಯಿಂದ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಬಿಜೆಪಿಯ ಉತ್ತರಪ್ರದೇಶ ಉಸ್ತುವಾರಿ, ಸಚಿವ ಧರ್ಮೇಂದ್ರ ಪ್ರಧಾನ್ ಅವರೇ ಇದನ್ನು ತಿಳಿಸಿದ್ದಾರೆ.
ಫೆಬ್ರವರಿ 10ರಿಂದ ಪ್ರಾರಂಭವಾಗಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ, ಉತ್ತರಪ್ರದೇಶದಲ್ಲಿ ಏಳು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಅದರಲ್ಲಿ 57 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಧರ್ಮೇಂದ್ರ ಪ್ರಧಾನ್ ಬಿಡುಗಡೆ ಮಾಡಿದ್ದಾರೆ. ಹಾಗೇ, ಎರಡನೇ ಹಂತದಲ್ಲಿ 55 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಅದರ 38 ಅಭ್ಯರ್ಥಿಗಳ ಹೆಸರನ್ನೂ ಇಂದು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯ ಪ್ರಕಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸ್ವಕ್ಷೇತ್ರ ಗೋರಖ್ಪುರದಿಂದಲೇ ಕಣಕ್ಕೆ ಇಳಿಯಲಿದ್ದಾರೆ. ಆದರೆ ಅಯೋಧ್ಯೆಯಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬುದಿನ್ನೂ ಬಹಿರಂಗವಾಗಿಲ್ಲ.
ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರಪ್ರದೇಶದ ಬಿಜೆಪಿ ಸರ್ಕಾರದಲ್ಲಿ ಅಸ್ಥಿರತೆಯೂ ಹೆಚ್ಚುತ್ತಿದೆ. ಯೋಗಿ ಸರ್ಕಾರದ ಒಟ್ಟು 10 ಶಾಸಕರು (3 ಸಚಿವರು)ಈಗಾಗಲೇ ಪಕ್ಷವನ್ನು ತೊರೆದಿದ್ದಾರೆ. ಅದರಲ್ಲಿ ಬಹುಪಾಲು ಜನರು ಅಖಿಲೇಶ್ ಯಾದವ್ರ ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದಾರೆ. ಹೀಗೆ ಪಕ್ಷ ತೊರೆದವರೆಲ್ಲ ಹಿಂದುಳಿದ ವರ್ಗಗಳಿಗೆ ಸೇರಿದವರೇ ಆಗಿದ್ದು, ಬಿಜೆಪಿ ಸರ್ಕಾರ ಹಿಂದುಳಿದ ವರ್ಗ, ದಲಿತರ ನಿರ್ಲಕ್ಷ್ಯ ಮಾಡುತ್ತಿದೆ. ಇದರಿಂದ ಬೇಸರವಾಗಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಗೋರಖ್ಪುರದಲ್ಲಿ ದಲಿತರೊಂದಿಗೆ ಊಟ : ಹೀಗೆ ಒಬ್ಬರಾದ ಬಳಿಕ ಇನ್ನೊಬ್ಬರು ಬಿಜೆಪಿ ತೊರೆದ ಬೆನ್ನಲ್ಲೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಗೋರಖ್ಪುರಕ್ಕೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲ, ಅಲ್ಲಿನ ದಲಿತರ ಮನೆಯಲ್ಲಿ ಊಟ ಮಾಡಿದ್ದರು. ನಮ್ಮ ಸರ್ಕಾರ ಯಾವುದೇ ತಾರತಮ್ಯವನ್ನೂ ಮಾಡದೆ, ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಎಂದೂ ಹೇಳಿದ್ದರು. ಜುಂಗಿಯಾ ಎಂಬಲ್ಲಿರುವ ಅಮೃತ್ಲಾಲ್ ಭಾರ್ತಿ ಎಂಬ ದಲಿತ ಬಿಜೆಪಿ ಕಾರ್ಯಕರ್ತನ ಮನೆಗೆ ಭೇಟಿ ನೀಡಿದ್ದ ಅವರು, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಅದೇ ಹೊತ್ತಲ್ಲಿ, ಬಿಜೆಪಿಯನ್ನು ತೊರೆದು ಹೋಗಿರುವ ಮಾಜಿ ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ, ದಾರಾ ಸಿಂಗ್ ಚೌಹಾಣ್ ಮತ್ತು ಧರ್ಮ ಸಿಂಗ್ ಸೈನಿ ಅತ್ತ ಲಖನೌದಲ್ಲಿ ಸಮಾಜವಾದಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇನ್ನು ದಲಿತ ಬಿಜೆಪಿ ಕಾರ್ಯಕರ್ತನ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಪೂರ್ವ ಆಡಳಿತ ನಡೆಸಿದ್ದ ಅಖಿಲೇಶ್ ಯಾದವ್ ಪಕ್ಷ ಏನು ಮಾಡಿತ್ತು? ಸಮಾಜವಾದಿ ಪಕ್ಷದ ಸರ್ಕಾರವಿದ್ದ ಐದು ವರ್ಷದಲ್ಲಿ ಪಿಎಂ ಆವಾಸ್ ಯೋಜನೆಯಡಿಯಲ್ಲಿ 18 ಸಾವಿರ ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ನೀಡಲಾಗಿತ್ತು. ಆದರೆ ಈಗ ನಮ್ಮ ಸರ್ಕಾರ 45 ಲಕ್ಷ ಮಂದಿಗೆ ಮನೆ ನೀಡಿದೆ ಎಂದು ಹೇಳಿದರು.
ಇದನ್ನೂ ಓದಿ: BSP Candidate List UP: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ; ಬಿಎಸ್ಪಿಯಿಂದ 53 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
Published On - 1:15 pm, Sat, 15 January 22