ನವದೆಹಲಿ: ಉತ್ತರ ಪ್ರದೇಶ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಯೋಗಿ ಆದಿತ್ಯನಾಥ್ ಸರ್ಕಾರದ ಮೂರನೇ ಸಚಿವ ರಾಜೀನಾಮೆ ನೀಡುವ ಮೂಲಕ ಬಿಜೆಪಿಗೆ ಶಾಕ್ ನೀಡಿದ್ದಾರೆ. ಉತ್ತರ ಪ್ರದೇಶದ ಸಚಿವ ಧರಂ ಸಿಂಗ್ ಸೈನಿ ಇಂದು ಬಿಜೆಪಿಗೆ ರಾಜೀನಾಮೆ ನೀಡಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಬಿಜೆಪಿ ತೊರೆಯುವ ಮೂಲಕ ಕಮಲ ಪಾಳಯಕ್ಕೆ ಶಾಕ್ ನೀಡಿದ್ದಾರೆ. ಈ ಮೂಲಕ ಧರಂ ಸಿಂಗ್ ಸೈನಿ ಕಳೆದ 3 ದಿನಗಳಿಂದ ಬಿಜೆಪಿಗೆ ರಾಜೀನಾಮೆ ನೀಡಿದ 9ನೇ ಶಾಸಕ ಹಾಗೂ 3ನೇ ಸಚಿವರಾಗಿದ್ದಾರೆ.
ನಿನ್ನೆಯಷ್ಟೇ ಧರಂ ಸಿಂಗ್ ಸೈನಿ ಅವರಿಗೆ ರಾಜ್ಯ ಸರ್ಕಾರ ಮಂಜೂರು ಮಾಡಿದ ಭದ್ರತೆ ಮತ್ತು ನಿವಾಸವನ್ನು ಹಿಂದಿರುಗಿಸಿದ್ದರು. ಹೀಗಾಗಿ, ಅವರು ಬಿಜೆಪಿಯನ್ನು ತೊರೆಯಲಿದ್ದಾರೆ ಎಂಬ ವದಂತಿಗಳು ಎದ್ದಿದ್ದವು. ಇಂದು ಅವರು ರಾಜೀನಾಮೆ ನೀಡಿದ್ದಾರೆ. ಧರಂ ಸಿಂಗ್ ಸೈನಿ ಉತ್ತರ ಪ್ರದೇಶದ ಆಯುಷ್, ಆಹಾರ ಭದ್ರತೆ ಮತ್ತು ಔಷಧ ಆಡಳಿತ ಸಚಿವರಾಗಿದ್ದಾರೆ.
ಬಿಜೆಪಿಯ ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ 2 ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ನಿನ್ನೆಯಷ್ಟೇ ಸಚಿವ ದಾರಾ ಸಿಂಗ್ ಚೌಹಾಣ್ ರಾಜೀನಾಮೆ ನೀಡಿದ್ದರು. ಇಂದು ಧರಂ ಸಿಂಗ್ ಸೈನಿ ರಾಜೀನಾಮೆ ನೀಡಿದ್ದಾರೆ. ಮೊದಲು ರಾಜೀನಾಮೆ ನೀಡಿದ್ದ ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ ಇನ್ನೂ ಕೆಲವರು ಶಾಸಕರು ರಾಜೀನಾಮೆ ನೀಡಿದ್ದರು. ಇನ್ನೂ ಹಲವು ಶಾಸಕರು ಹಾಗೂ ಸಚಿವರು ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ಮೌರ್ಯ ಹೇಳಿದ್ದರು.
ಇಂದು ರಾಜೀನಾಮೆ ನೀಡಿರುವ ಧರಂ ಸಿಂಗ್ ಸೈನಿ, ದಲಿತರು, ಹಿಂದುಳಿದವರು, ರೈತರು, ನಿರುದ್ಯೋಗಿ ಯುವಕರು ಮತ್ತು ಸಣ್ಣ ವ್ಯಾಪಾರಿಗಳ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರುತ್ತಿರುವ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಅವರು ಯೋಗಿ ಆದಿತ್ಯನಾಥ್ ಕ್ಯಾಬಿನೆಟ್‌ನಿಂದ ಪ್ರತಿದಿನ ಒಂದರಿಂದ ಇಬ್ಬರು ಸಚಿವರು ಹೊರಬರುತ್ತಾರೆ. ಜನವರಿ 20ರ ವೇಳೆಗೆ ಈ ಸಂಖ್ಯೆ 18ಕ್ಕೆ ಏರುತ್ತದೆ ಎಂದು ಹೇಳಿದ್ದಾರೆ. ರಾಜ್‌ಭರ್ 2022ಕ್ಕೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದೆ. ಫೆಬ್ರವರಿ 10 ರಿಂದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಬಂಧನ ವಾರೆಂಟ್ ಜಾರಿ
Dara Singh Chauhan ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನೆಡೆ; ಸಚಿವ ದಾರಾ ಸಿಂಗ್ ಚೌಹಾಣ್ ರಾಜೀನಾಮೆ
Published On - 2:52 pm, Thu, 13 January 22