ಉನ್ನಾವೋ ರೇಪ್​ ಸಂತ್ರಸ್ತೆಯ ತಾಯಿಯನ್ನು ಚುನಾವಣಾ ಕಣಕ್ಕೆ ಇಳಿಸಿದ ಕಾಂಗ್ರೆಸ್​; ಆರೋಪಿ ಕುಲದೀಪ್​ ಸಿಂಗ್ ಕ್ಷೇತ್ರದಿಂದಲೇ ಟಿಕೆಟ್​

Uttar Pradesh Assembly Election 2022: ನಮ್ಮ ಪಕ್ಷವನ್ನು ಬಲಪಡಿಸುವುದು ಮತ್ತು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ನಾವು ಯಾವುದೇ ನೆಗೆಟಿವ್​ ಪ್ರಚಾರವನ್ನೂ ನಡೆಸುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.

ಉನ್ನಾವೋ ರೇಪ್​ ಸಂತ್ರಸ್ತೆಯ ತಾಯಿಯನ್ನು ಚುನಾವಣಾ ಕಣಕ್ಕೆ ಇಳಿಸಿದ ಕಾಂಗ್ರೆಸ್​; ಆರೋಪಿ ಕುಲದೀಪ್​ ಸಿಂಗ್ ಕ್ಷೇತ್ರದಿಂದಲೇ ಟಿಕೆಟ್​
ಪ್ರಿಯಾಂಕಾ ಗಾಂಧಿ

ಈ ಬಾರಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆ (Uttar Pradesh Assembly Election 2022)ಯಲ್ಲಿ ಶೇ.40ರಷ್ಟು ಟಿಕೆಟ್​​ಗಳು ಮಹಿಳೆಯರಿಗೇ ಮೀಸಲು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಈಗಾಗಲೇ ಘೋಷಿಸಿಬಿಟ್ಟಿದ್ದಾರೆ. ಇದೀಗ ಇನ್ನೊಂದು ಮಹತ್ವದ ಘೋಷಣೆಯನ್ನು ಪ್ರಿಯಾಂಕಾ ಗಾಂಧಿ ಮಾಡಿದ್ದಾರೆ. 2017ರಲ್ಲಿ ಉನ್ನಾವೋದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿ ಕೂಡ ಈ ಬಾರಿ ಕಾಂಗ್ರೆಸ್​ನಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಹೇಳಿದ್ದಾರೆ. ಅಂದಹಾಗೇ, ಈ ಉನ್ನಾವೋ ಅತ್ಯಾಚಾರ ಪ್ರಕರಣ ಪ್ರಮುಖ ಆರೋಪಿ ಕುಲದೀಪ್​ ಸಿಂಗ್​ ಸೇಂಗರ್​​. ಈತ ಬಿಜೆಪಿಯ ಶಾಸಕನೇ ಆಗಿದ್ದ. ನಂತರ ಅತ್ಯಾಚಾರ ಆರೋಪ ಕೇಳಿಬರುತ್ತಿದ್ದಂತೆ ಅವನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. 

ಅಂದಾಹಾಗೆ, ಉನ್ನಾವೋದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯ ತಾಯಿಯ ಹೆಸರು ಆಶಾ ಸಿಂಗ್​. ಇವರನ್ನು ಉನ್ನಾವೋದ ಬಂಗಾರ್ಮೌದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಇವರ ಮಗಳನ್ನು ಅತ್ಯಾಚಾರ ಮಾಡಿ, ಉಚ್ಚಾಟಿತಗೊಂಡ ಕುಲ್​ದೀಪ್​ ಸಿಂಗ್​ 2017ರಲ್ಲಿ ಸ್ಪರ್ಧಿಸಿ ಗೆದ್ದಿದ್ದ ಕ್ಷೇತ್ರ ಇದು. ಈತನನ್ನು ಉಚ್ಚಾಟನೆ ಮಾಡಿದ ಬೆನ್ನಲ್ಲೇ ಆ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲಾಗಿತ್ತು. ಅದರಲ್ಲಿ ಕೂಡ ಬಿಜೆಪಿಯೇ ಗೆದ್ದಿತ್ತು.  ಇಂದು ಆಶಾ ಸಿಂಗ್​ ಹೆಸರನ್ನು ಪ್ರಕಟಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಯಾರೇ ಚಿತ್ರಹಿಂಸೆಗೆ ಒಳಗಾಗಿದ್ದರೂ, ಅವರಿಗೆ ಕಾಂಗ್ರೆಸ್​ ನ್ಯಾಯ ಒದಗಿಸುತ್ತದೆ ಎಂಬ ಸಂದೇಶವನ್ನು ಕಾಂಗ್ರೆಸ್​ ತನ್ನ ಚುನಾವಣಾ ಅಭ್ಯರ್ಥಿಗಳ ಪಟ್ಟಿಯ ಮೂಲಕ ನೀಡಲು ಬಯಸುತ್ತದೆ ಎಂದು ಹೇಳಿದ್ದಾರೆ. ಇನ್ನು ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದಲ್ಲಿ ನಾನು ಮಹಿಳೆ..ನಾನೂ ಹೋರಾಡಬಲ್ಲೆ ಎಂಬ ಘೋಷಣೆಯ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಚುನಾವಣೆ ಮೂಲಕ ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸುವುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮ ಪಕ್ಷವನ್ನು ಬಲಪಡಿಸುವುದು ಮತ್ತು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ನಾವು ಯಾವುದೇ ನೆಗೆಟಿವ್​ ಪ್ರಚಾರವನ್ನೂ ನಡೆಸುವುದಿಲ್ಲ. ನಮ್ಮದೇನಿದ್ದರೂ ದಲಿತರು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ, ಬೆಳವಣಿಗೆ ಆಧಾರಿತ ಪ್ರಚಾರ. ನಾನು ಉತ್ತರಪ್ರದೇಶದಲ್ಲಿ  ಏನನ್ನು ಶುರು ಮಾಡಿದ್ದೇನೋ, ಅದನ್ನು ಮುಂದುವರಿಸುತ್ತೇನೆ. ಚುನಾವಣೆ ಮುಗಿದ ಮೇಲೆ ಕೂಡ ಈ ರಾಜ್ಯದಲ್ಲಿ ನಾನಿರುತ್ತೇನೆ. ನಮ್ಮ ಪಕ್ಷವನ್ನು ಇಲ್ಲಿ ಬಲಗೊಳಿಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

ರಾಹುಲ್​ ಗಾಂಧಿ ಟ್ವೀಟ್ ಇನ್ನು ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಟಿಕೆಟ್​ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್​ ಮಾಡಿದ್ದಾರೆ. ಉನ್ನಾವೋದಲ್ಲಿ ಬಿಜೆಪಿಯಿಂದ ಯಾರ ಮಗಳಿಗೆ ಅನ್ಯಾಯವಾಯಿತೋ, ಆ ತಾಯಿ ಈಗ ನ್ಯಾಯದತ್ತ ಮುಖಮಾಡಿ ನಿಂತಿದ್ದಾರೆ. ಅವರು ಹೋರಾಡುತ್ತಾರೆ..ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.

ದೇಶವನ್ನು ನಡುಗಿಸಿದ್ದ ರೇಪ್​ ಕೇಸ್ 2017ರಲ್ಲಿ ಉನ್ನಾವೋದಲ್ಲಿ ನಡೆದಿದ್ದ ಅತ್ಯಾಚಾರಕ್ಕೆ ಇಡೀ ದೇಶವೇ ಮರುಗಿದೆ. ಹೀಗೊಂದು ಅತ್ಯಾಚಾರ ಆಗಿದೆ ಎಂದು ಗೊತ್ತಾಗಿದ್ದು, ಸಂತ್ರಸ್ತೆ ಯೋಗಿ ಆದಿತ್ಯನಾಥ್​ ಅವರ ನಿವಾಸದ ಎದುರು ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ. ಅತ್ಯಾಚಾರ ಸಂತ್ರಸ್ತೆಯ 55ವರ್ಷದ ತಂದೆಯನ್ನು ಕುಲದೀಪ್​ ಸಿಂಗ್​ ಸೇಂಗರ್​ನ ಸಹೋದರ ಮನಬಂದಂತೆ ಥಳಿಸಿದ್ದ. ಅದಾದ ಮರುದಿನವೇ ಅವರು ಮೃತಪಟ್ಟಿದ್ದರು. ಇದು ದೇಶಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆರೋಪಿಗಳ ಕ್ರೌರ್ಯಕ್ಕೆ ದೇಶವೇ ನಡುಗಿತ್ತು. ಅತ್ಯಾಚಾರ ನಡೆಯುವಾಗ ಯುವತಿ ಇನ್ನೂ ಅಪ್ರಾಪ್ತೆಯಾಗಿದ್ದಳು. ಇದರಲ್ಲಿ ಪ್ರಮುಖ ಆರೋಪಿ ಕುಲದೀಪ್​ ಸಿಂಗ್ ಯಾದವ್ ಎಂಬುದು 2019ರಲ್ಲಿ ಸಾಬೀತಾಗಿದ್ದು, ಅಲ್ಲಿಂದಲೂ ಆತ ಜೈಲಿನಲ್ಲಿಯೇ ಇದ್ದಾನೆ.

ಇದನ್ನೂ ಓದಿ: ಅದಿತಿ ಪ್ರಭುದೇವಗೆ ಹುಟ್ಟುಹಬ್ಬದ ಸಂಭ್ರಮ; ಸ್ಯಾಂಡಲ್​ವುಡ್​ ಸುಂದರಿಯ ಕ್ಯೂಟ್​ ಫೋಟೋ ಆಲ್ಬಂ 

Published On - 1:23 pm, Thu, 13 January 22

Click on your DTH Provider to Add TV9 Kannada