ಲಖಿಂಪುರ ಖೇರಿ ಹಿಂಸಾಚಾರ (Lakhimpur Kheri Violence)ದಲ್ಲಿ ಮೃತಪಟ್ಟ ನಾಲ್ವರು ರೈತರ ಕುಟುಂಬಕ್ಕೆ ತಲಾ 45 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಉತ್ತರಪ್ರದೇಶ ಸರ್ಕಾರ (UP Government)ಘೋಷಿಸಿದೆ. ಹಾಗೇ, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಇನ್ನು ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ತಲಾ 10 ಲಕ್ಷ ರೂಪಾಯಿ ನೀಡುವುದಾಗಿಯೂ ಹೇಳಿದೆ. ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ನ್ಯಾಯಾಂಗ ತನಿಖೆ ನಡೆಸಲಾಗುವುದು ಮತ್ತು ಮೃತರ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ಕೊಡಲಾಗುವುದು ಎಂಬ ಭರವಸೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಉತ್ತರ ಪ್ರದೇಶ ಪೊಲೀಸ್ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್, ಘಟನೆಗೆ ಸಂಬಂಧಪಟ್ಟಂತೆ ರೈತರು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರೊಬ್ಬರು ಘಟನೆಯ ತನಿಖೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಹಾಗೇ, ಯಾವುದೇ ರಾಜಕೀಯ ನಾಯಕರಿಗೂ ಲಖಿಂಪುರ ಖೇರಿಗೆ ಭೇಟಿ ನೀಡಲು ಅವಕಾಶ ನೀಡುವುದಿಲ್ಲ. ಇಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ರೈತ ಸಂಘಟನೆಗಳ ಮುಖಂಡರು ಮಾತ್ರ ಇಲ್ಲಿಗೆ ಬರಬಹುದು ಎಂದೂ ಹೇಳಿದ್ದಾರೆ. ಮೃತ ಎಂಟು ಮಂದಿಯಲ್ಲಿ ನಾಲ್ವರು ರೈತರಾಗಿದ್ದು, ಮೂವರು ಬಿಜೆಪಿ ಕಾರ್ಯಕರ್ತರು, ಮತ್ತೊಬ್ಬ ಪತ್ರಕರ್ತ ಎನ್ನಲಾಗಿದೆ. ಸದ್ಯ ಮೃತ ರೈತರ ಕುಟುಂಬಕ್ಕಷ್ಟೇ ಪರಿಹಾರ ಘೋಷಣೆಯಾಗಿದ್ದು, ಉಳಿದವರ ಬಗ್ಗೆ ಮಾಹಿತಿ ಇಲ್ಲ.
ಹಿಂಸಾಚಾರ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರನ್ನು ಬಿಜೆಪಿ ಸರ್ಕಾರ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಸದಾ ಆರೋಪಿಸುವ ಕಾಂಗ್ರೆಸ್ ಈಗ ಲಖಿಂಪುರ ಖೇರಿಯಲ್ಲಿ ನಡೆದ ರೈತರ ಮೇಲಿನ ದಾಳಿಯನ್ನೂ ಖಂಡಿಸಿದೆ. ದೇಶದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರು ಪ್ರತಿಭಟನೆ ಶುರು ಮಾಡಿದ್ದಾರೆ. ಲೇಖಿಂಪುರಕ್ಕೆ ಭೇಟಿ ನೀಡಲು ಮುಂದಾಗಿದ್ದ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ತಡೆಯಲಾಗಿದ್ದರೂ, ಅವರು ಅಲ್ಲಿಯೇ ಗೆಸ್ಟ್ಹೌಸ್ನಲ್ಲಿ ತಂಗಿದ್ದಾರೆ. ಇನ್ನು ಚಂಡಿಗಢ್ನ ರಾಜಭವನದ ಬಳಿ ಪ್ರತಿಭಟನೆ ಶುರುವಿಟ್ಟುಕೊಂಡಿದ್ದ ನವಜೋತ್ ಸಿಂಗ್ ಸಿಧು ಅವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಉತ್ತರಾಖಂಡ್ನ ಡೆಹ್ರಾಡೂನ್ನಲ್ಲಿಯೂ ಕೂಡ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕಾಂಗ್ರೆಸ್ ಮಾತ್ರವಲ್ಲದೆ ಇನ್ನುಳಿದ ಕೆಲ ಪ್ರತಿಪಕ್ಷಗಳೂ ಕೂಡ ಲಖಿಂಪುರ ಹಿಂಸಾಚಾರವನ್ನು ವಿರೋಧಿಸಿವೆ. ಸಂಜೆ 5ಗಂಟೆಗೆ ಆಪ್ ದೆಹಲಿಯ ಜಂತರ್ ಮಂತರ್ನಲ್ಲಿ ಕ್ಯಾಂಡಲ್ ಮಾರ್ಚ್ಪಾಸ್ಟ್ ನಡೆಸಲಿದೆ.
ಇದನ್ನೂ ಓದಿ: Karnataka Rain: ಮಳೆ: ಯಾವ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್? ಯಾವ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್?
Published On - 2:51 pm, Mon, 4 October 21