ಯಾರ ವಿರುದ್ಧ ನಿಮ್ಮ ಪ್ರತಿಭಟನೆ: ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆಯ ಔಚಿತ್ಯವನ್ನೇ ಪ್ರಶ್ನಿಸಿದ ಸುಪ್ರೀಂಕೋರ್ಟ್

ಯಾರ ವಿರುದ್ಧ ನಿಮ್ಮ ಪ್ರತಿಭಟನೆ: ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆಯ ಔಚಿತ್ಯವನ್ನೇ ಪ್ರಶ್ನಿಸಿದ ಸುಪ್ರೀಂಕೋರ್ಟ್
ನ್ಯಾಯಮೂರ್ತಿ ಎ.ಎಂ.ಖಾನ್​ವಿಲ್ಕರ್ ಮತ್ತು ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್

ವಿಚಾರಣೆ ನಡೆಯುತ್ತಿರುವಾಗ ರಸ್ತೆ ಮೇಲೆ ಪ್ರತಿಭಟನೆ ನಡೆಸುವ ಔಚಿತ್ಯವಾದರೂ ಏನು ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Oct 04, 2021 | 3:55 PM

ದೆಹಲಿ: ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿದ್ದ ಕೃಷಿ ಕಾಯ್ದೆಗಳಿಗೆ ಪ್ರಸ್ತುತ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಾಲಯವು ಕಾಯ್ದೆಗಳ ಸಿಂಧುತ್ವ ನಿರ್ಣಯಿಸದೇ ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ಜಾರಿಗಳಿಸಲು ಆಗುವುದಿಲ್ಲ. ಕಾಯ್ದೆಗಳನ್ನು ಪ್ರಶ್ನಿಸಿ ಒಂದೆಡೆ ನೀವು ನ್ಯಾಯಾಲಯದ ಮೆಟ್ಟಿಲು ಏರಿದ್ದೀರಿ, ಮತ್ತೊಂದೆಡೆ ರಸ್ತೆ ಮೇಲೆ ಕುಳಿತು ಪ್ರತಿಭಟನೆಗಳನ್ನು ನಡೆಸುತ್ತಿದ್ದೀರಿ. ವಿಚಾರಣೆ ನಡೆಯುತ್ತಿರುವಾಗ ರಸ್ತೆ ಮೇಲೆ ಪ್ರತಿಭಟನೆ ನಡೆಸುವ ಔಚಿತ್ಯವಾದರೂ ಏನು ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

ಕಿಸಾನ್ ಮಹಾಪಂಚಾಯತ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಾದ ಎ.ಎಂ.ಖಾನ್​ವಿಲ್ಕರ್ ಮತ್ತು ಸಿ.ಟಿ.ರವಿಕುಮಾರ್ ನ್ಯಾಯಾಲಯಕ್ಕೆ ಬಂದ ಮೇಲೆ ಹೇಗೆ ಪ್ರತಿಭಟನೆಯ ಹಕ್ಕು ಸಿಗಲು ಸಾಧ್ಯ ಎಂದು ಪ್ರಶ್ನಿಸಿದರು.

ದೆಹಲಿಯ ಜಂತರ್ ಮಂತರ್​ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕು ಎಂದು ಕಿಸಾನ್ ಮಹಾಪಂಚಾಯತ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ನೀವು ನ್ಯಾಯಾಲಯದಲ್ಲಿ ಕಾಯ್ದೆಗಳ ಸಿಂಧುತ್ವ ಪ್ರಶ್ನಿಸಿದ್ದೀರಿ. ನಾವು ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಹೀಗಿರುವಾಗ ಅದೇ ವಿಷಯದ ಬಗ್ಗೆ ಹೇಗೆ ರಸ್ತೆಗಳಲ್ಲಿ ಪ್ರತಿಭಟಿಸುವಿರಿ ಎಂದು ಕೇಳಿದರು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅಜಯ್ ಚೌಧರಿ, ‘ನನ್ನ ಕಕ್ಷಿದಾರರು ಈ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿಲ್ಲ. ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವವರೂ ಕಿಸಾನ್ ಮಹಾಪಂಚಾಯತ್ ಸದಸ್ಯರಲ್ಲ. ಎಲ್ಲಿಯೂ ನಾವು ಟ್ರಾಫಿಕ್​ಗೆ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಧಕ್ಕೆ ತಂದಿಲ್ಲ’ ಎಂದು ಮಾಹಿತಿ ನೀಡಿದರು.

ರಾಜಸ್ಥಾನ್ ಹೈಕೋರ್ಟ್​ನಲ್ಲಿಯೂ ಇಂಥದ್ದೇ ಪ್ರಕರಣ ದಾಖಲಾಗಿರುವ ವಿಚಾರ ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ಆ ಪ್ರಕರಣವನ್ನೂ ಸುಪ್ರೀಂಕೋರ್ಟ್​ಗೆ ವರ್ಗಾಯಿಸಿಕೊಂಡು ಎರಡೂ ಪ್ರಕರಣಗಳನ್ನು ಒಟ್ಟಿಗೆ ಆಲಿಸುತ್ತೇವೆ. ಒಮ್ಮೆ ನೀವು ನ್ಯಾಯಾಲಯದ ಮೆಟ್ಟಿಲು ಹತ್ತಿದ ಮೇಲೆ ಪ್ರತಿಭಟನೆ ನಡೆಸಿದರೆ ಅದು ನ್ಯಾಯಾಂಗ ನಿಂದನೆ ಎನಿಸಿಕೊಳ್ಳುತ್ತದೆ ಎಂದರು.

ಕೃಷಿ ಕಾನೂನುಗಳ ಸಿಂಧುತ್ವದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡುವವರೆಗೆ ಪ್ರತಿಭಟನೆ ಮುಂದುವರಿಸುವಂತಿಲ್ಲ ಎಂಬ ನ್ಯಾಯಮೂರ್ತಿಗಳ ಅಭಿಪ್ರಾಯಕ್ಕೆ ಕೇಂದ್ರ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸಹಮತ ವ್ಯಕ್ತಪಡಿಸಿದರು.

ಪ್ರಕರಣದ ಹಿನ್ನೆಲೆ ಕೇಂದ್ರ ಸರ್ಕಾರದ ಪ್ರಸ್ತಾವಿತ ಕೃಷಿ ಉತ್ಪನ್ನಗಳು ಮತ್ತು ವಾಣಿಜ್ಯ ಕಾಯ್ದೆ (Farmers’ Produce Trade and Commerce (Promotion and Facilitation) Act), ಕೃಷಿ ಬೆಲೆ ಒಪ್ಪಂದ ಹಾಗೂ ಬೆಲೆ ಖಾತ್ರಿ ಕಾಯ್ದೆ (Farmers (Empowerment and Protection) Agreement of Price Assurance Act and Farm Services Act) ಮತ್ತು ಅಗತ್ಯ ವಸ್ತುಗಳ ಕಾಯ್ದೆ (Essential Commodities (Amendment) Act) ವಿರೋಧಿಸಿ ರೈತರು ಸುದೀರ್ಘ ಅವಧಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹರ್ಯಾಣ, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶಗಳಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ.

(Supreme Court Questions Farmers Protest over Farm Laws)

ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಹರಿಯಾಣ ಸರ್ಕಾರ

ಇದನ್ನೂ ಓದಿ: ಕೃಷಿ ಕಾಯ್ದೆ ವಿರೋಧಿ ಹೋರಾಟಕ್ಕೆ ಒಂದು ವರ್ಷ; 35 ಕೃಷಿ ತಳಿ ಸೇರಿ ಮೋದಿ ಸರ್ಕಾರ ರೈತರಿಗೆ ಕೊಟ್ಟ ಕೊಡುಗೆಗಳೇನು? ಇಲ್ಲಿದೆ ಒಂದು ಅವಲೋಕನ

Follow us on

Related Stories

Most Read Stories

Click on your DTH Provider to Add TV9 Kannada