
ಕಾನ್ಪುರ, ನವೆಂಬರ್ 28: ಪತಿ, ಪತ್ನಿ ಜಗಳ ಉಂಡು ಮಲಗೋ ತನಕ ಎಂಬ ಗಾದೆ ಇದೆ. ಏನೇ ಸಮಸ್ಯೆಗಳಿದ್ದರೂ ಜತೆಗಿದ್ದೇ ಬಗೆಹರಿಸಿಕೊಳ್ಳಬೇಕು ಇಲ್ಲವಾದರೆ ಏನಾಗುತ್ತೆ ಎಂಬುದಕ್ಕೆ ಈ ಘಟನೆ ನಿದರ್ಶನ. ಪತಿಯೊಬ್ಬ ಪತ್ನಿ(Wife) ಜತೆ ಜಗಳವಾಡಿಕೊಂಡು ಆಕೆಗೆ ಥಳಿಸಿ ಮನೆಬಿಟ್ಟು ಹೋಗಿದ್ದ. ತುಂಬಾ ಸಮಯಗಳ ಕಾಲ ಕಾದಿದ್ದ ಆಕೆ ಆತನಿಗೆ ಮನೆಗೆ ವಾಪಸಾಗುವಂತೆ ಮನವಿ ಮಾಡಿದ್ದಾಳು. ಆದರೆ ಆತ ಸ್ಪಂದಿಸಿರಲಿಲ್ಲ. ಕೊನೆಗೆ ಆತನಿಗೆ ವಿಡಿಯೋ ಕಾಲ್ ಮಾಡಿ ಆಕೆ ನೇಣಿಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಶುಭಂ ದಿವಾಕರ್ ಎಂಬಾತ ಮದ್ಯವ್ಯಸನಿಯಾಗಿದ್ದ, ಬುಧವಾರ ಸಂಜೆ ಕೆಲಸ ಮುಗಿಸಿ ರಾವತ್ಪುರದಲ್ಲಿರುವ ಮನೆಗೆ ಬಂದು ಪತ್ನಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆಕೆ ನಿರಾಕರಿಸಿದಾಗ ಕೋಪಗೊಂಡು ದಿವಾಕರ್ ಆಕೆಯನ್ನು ಕ್ರೂರವಾಗಿ ಥಳಿಸಿದ್ದ. ಆಕೆಯಿಂದ ಹಣ ತೆಗೆದುಕೊಂಡು ಮದ್ಯ ಖರೀದಿಸಲು ಹೊರಟುಹೋಗಿದ್ದ.
ಸ್ವಲ್ಪ ಸಮಯದ ಬಳಿಕ ಮೋನಾ ಅಳುತ್ತಾ ಆತನಿಗೆ ವಾಟ್ಸಾಪ್ನಲ್ಲಿ ವಿಡಿಯೋ ಕರೆ ಮಾಡಿದ್ದಾಳೆ, ಆತನ ಮುಂದೆಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ದಿವಾಕರ್ ಆಕೆಯನ್ನು ಉಳಿಸಲು ಕೂಡಲೇ ಮನೆ ಕಡೆಗೆ ಓಡಿ ಬಂದಿದ್ದ. ಆದರೆ ಮನೆ ಒಳಗಿನಿಂದ ಲಾಕ್ ಆಗಿತ್ತು. ವಿಷಯ ತಿಳಿದು ಅಕ್ಕಪಕ್ಕದ ಮನೆಯವರು ಬಂದು ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಆಕೆಗೆ ಕೂಡಲೇ ಸಿಪಿಆರ್ ನೀಡಲಾಯಿತು ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಮತ್ತಷ್ಟು ಓದಿ: ಪತ್ನಿ ಮೇಲೆ ಸಂಶಯ: ಲೇಡಿ ಕಂಡಕ್ಟರ್ಗೆ ಮೂರು ಬಾರಿ ಇರಿದು ಕೊಲೆ ಮಾಡಿದ ಪೊಲೀಸಪ್ಪ
ಮೋನಾ ಹಾಗೂ ಶುಭಂ ಏಳು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಇಬ್ಬರು ಮಕ್ಕಳು ಕೂಡಾ ಇದ್ದಾರೆ. ದಿವಾಕರ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬವನ್ನು ಪೋಷಿಸಲು ಮದುವೆ ಸಮಾರಂಭಗಳಲ್ಲಿ ಅತಿಥಿಗಳನ್ನು ಸ್ವಾಗತಿಸುವ ‘ವೆಲ್ಕಮ್ ಗರ್ಲ್’ ಆಗಿ ಮೋನಾ ಕೆಲಸ ಮಾಡುತ್ತಿದ್ದರು.
ಆಕೆಯ ಜತೆ ಕೆಲಸ ಮಾಡುತ್ತಿದ್ದವರು ಕೂಡ ಸಾವಿನ ಸುದ್ದಿ ಕೇಳಿ ಮನೆಗೆ ಓಡಿ ಬಂದಿದ್ದಾರೆ. ಕೋಪಗೊಂಡ ಮಹಿಳೆಯರು ಮೋನಾಳ ಗಂಡನನ್ನು ಸುತ್ತುವರೆದು ಥಳಿಸಿದ್ದಾರೆ.ಗಲಾಟೆ ಸುಮಾರು ಎರಡು ಗಂಟೆಗಳ ಕಾಲ ಮುಂದುವರೆಯಿತು. ಸಾಕ್ಷ್ಯಗಳನ್ನು ನಾಶಮಾಡಲು ದಿವಾಕರ್ ಮೋನಾಳ ಮೊಬೈಲ್ ಫೋನ್‌ನಿಂದ ಎಲ್ಲಾ ಕಾಲ್ ಹಿಸ್ಟರಿಗಳನ್ನು ಅಳಿಸಿಹಾಕಿದ್ದಾನೆಂದು ಮೋನಾಳ ಸ್ನೇಹಿತರು ಆರೋಪಿಸಿದ್ದಾರೆ.
ಮೋನಾ ಕುಟುಂಬ ಇಲ್ಲಿಯವರೆಗೆ ಯಾವುದೇ ದೂರು ದಾಖಲಿಸಿಲ್ಲ.ಯಾವುದೇ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾವತ್ಪುರ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಮಿಶ್ರಾ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ