ಪತ್ನಿ ಮೇಲೆ ಸಂಶಯ: ಲೇಡಿ ಕಂಡಕ್ಟರ್ಗೆ ಮೂರು ಬಾರಿ ಇರಿದು ಕೊಲೆ ಮಾಡಿದ ಪೊಲೀಸಪ್ಪ
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಬಸ್ ಕಂಡಕ್ಟರ್ ಕಾಶಮ್ಮ ನೆಲ್ಲಿಗಣಿಯನ್ನು ಆಕೆಯ ಗಂಡನಾದ ಪೊಲೀಸ್ ಪೇದೆ ಸಂತೋಷ್ ಕಾಂಬಳೆ ಹತ್ಯೆ ಮಾಡಿದ ದಾರುಣ ಘಟನೆ. ಪ್ರೇಮವಿವಾಹದ ಬಳಿಕ ಸಂಶಯ, ಕಿರುಕುಳ, ವಿಚ್ಛೇದನದ ನಂತರವೂ ಗಲಾಟೆ ಮುಂದುವರಿದು, ಅಕ್ಟೋಬರ್ 13ರಂದು ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು . ಹಂತಕ ಸಂತೋಷ್ ಪರಾರಿಯಾಗಿದ್ದು, ಪೊಲೀಸರು ಶೋಧ ಆರಂಭಿಸಿದ್ದಾರೆ.

ಬೆಳಗಾವಿ, ಅಕ್ಟೋಬರ್ 18: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಪೊಲೀಸ್ ಕಾನ್ಸ್ಟೇಬಲ್ (Police Constable) ಬರ್ಬರವಾಗಿ ಕೊಲೆ ಮಾಡಿ ಪರಾರಿ ಆಗಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ರಾಮಸೈಟ್ನಲ್ಲಿ ಐದು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಶಮ್ಮ ನೆಲ್ಲಿಗಣಿ (34) ಅನ್ನು ಪಿಸಿ ಸಂತೋಷ್ ಕಾಂಬಳೆ ಹತ್ಯೆ ಗೈದಿದ್ದಾರೆ. ಕೊಲೆಯಾದ ಕಾಶಮ್ಮ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ಪತಿಗಾಗಿ ಸವದತ್ತಿ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಹೆಂಡತಿ ಮೇಲಿನ ಸಂಶಯದಿಂದ ಕಿರುಕುಳ ಕೊಡುತ್ತಿದ್ದ ಪೊಲೀಸ್ ಪೇದೆ
ಸುಮಾರು 13 ವರ್ಷಗಳ ಹಿಂದೆ ಸಂತೋಷ್ ಹಾಗೂ ಕಾಶಮ್ಮ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಸಂತೋಷ್ ಹೆಂಡತಿಯ ಮೇಲೆ ಸಂಶಯ ಪಟ್ಟುಕೊಂಡು ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ದೈಹಿಕ ಹಾಗೂ ಮಾನಸಿಕ ಹಿಂಸೆ ತಾಳಲಾರದೆ ಕಾಶಮ್ಮ ಗಂಡನಿಂದ ದೂರವಾಗಿದ್ದು, ತವರು ಮನೆ ಸೇರಿದ್ದರು. ಬಳಿಕ ಸವದತ್ತಿ ಡಿಪೋಗೆ ವರ್ಗಾವಣೆ ಮಾಡಿಸಿಕೊಂಡು ಅಲ್ಲೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ವಿಚ್ಛೇದನದ ನಂತರವೂ ಹೆಂಡತಿಗೆ ಮಾನಸಿಕ ಕಿರುಕುಳ
ಮದುವೆ ಜೀವನದಲ್ಲಿ ನಿರಂತರ ಕಲಹ ಮುಂದುವರಿದ ಹಿನ್ನೆಲೆಯಲ್ಲಿ ಕಾಶಮ್ಮ ಅವರು ಬೈಲಹೊಂಗಲ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 5, 2025 ರಂದು ಅಧಿಕೃತವಾಗಿ ವಿಚ್ಛೇದನವನ್ನೂ ಪಡೆದಿದ್ದರು. ವಿಚ್ಛೇದನದ ನಂತರವೂ ಸಂತೋಷ್ ಅವರು ಕಾಶಮ್ಮನನ್ನು ನಿರಂತರವಾಗಿ ಕರೆಮಾಡಿ ನಿಂದಿಸುತ್ತಿದ್ದನೆಂದು ಆಕೆಯ ಕುಟುಂಬದವರು ಹೇಳಿದ್ದಾರೆ.
ಅಕ್ಟೋಬರ್ 13ರ ರಾತ್ರಿ 8 ಗಂಟೆಯ ವೇಳೆಗೆ ಸಂತೋಷ್ ಕಾಶಮ್ಮನ ಮನೆಗೆ ತೆರಳಿ ಗಲಾಟೆ ನಡೆಸಿದ್ದ. ಕೋಪದಿಂದ ಕತ್ತು ಕೊಯ್ದು , ಹೊಟ್ಟೆಗೆ ಮೂರು ಬಾರಿ ಇರಿದು ಕ್ರೂರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಮೂರು ದಿನಗಳ ಬಳಿಕ ಮನೆಯೊಳಗಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ ಪ್ರೀತಿ ಒಪ್ಪದಿದ್ದಕ್ಕೆ ವಿದ್ಯಾರ್ಥಿನಿಯ ಕತ್ತು ಕೊಯ್ದು ಹತ್ಯೆ: 24 ಗಂಟೆಗಳಲ್ಲಿ ಹಂತಕನನ್ನು ಹಿಡಿದ ಪೊಲೀಸ್ರು
ಸ್ಥಳಕ್ಕೆ ಧಾವಿಸಿದ ಸವದತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪರಾರಿಯಾಗಿರುವ ಆರೋಪಿ ಸಂತೋಷ್ ಕಾಂಬಳೆಯ ಪತ್ತೆಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:37 am, Sat, 18 October 25



