ಡೆಹ್ರಾಡೂನ್: ಉತ್ತರಾಖಂಡ್ ಚಮೋಲಿ ಜಿಲ್ಲೆಯ ರೈಣಿ ಗ್ರಾಮದಲ್ಲಿ ಹಿಮಸ್ಫೋಟ ಸಂಭವಿಸಿದೆ. ಇದರಿಂದಾಗಿ ಧೌಲಿಗಂಗಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ನದಿಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಹರಿದ್ವಾರ, ಋಷಿಕೇಶ, ರುದ್ರಪ್ರಯಾಗ, ಕರ್ಣಪ್ರಯಾಗ ಮತ್ತು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಹೈಅಲರ್ಟ್ ಘೋಷಣೆಯಾಗಿದೆ.
ಪ್ರವಾಹಕ್ಕೆ ಸಿಲುಕಿರುವ ಜನರು ಸಹಾಯಕ್ಕಾಗಿ ವಿಪತ್ತು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸುವಂತೆ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸೂಚಿಸಿದ್ದಾರೆ. ವಿಪತ್ತು ನಿರ್ವಹಣಾ ಕೇಂದ್ರ ಸಂಪರ್ಕ ಸಂಖ್ಯೆ: 1070 ಅಥವಾ 95574 44486
ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಟ್ವೀಟ್
अगर आप प्रभावित क्षेत्र में फंसे हैं, आपको किसी तरह की मदद की जरूरत है तो कृपया आपदा परिचालन केंद्र के नम्बर 1070 या 9557444486 पर संपर्क करें। कृपया घटना के बारे में पुराने वीडियो से अफवाह न फैलाएं।
— Trivendra Singh Rawat (@tsrawatbjp) February 7, 2021
ಈ ಬಗ್ಗೆ, ಉತ್ತರಾಖಂಡ್ ಮುಖ್ಯಮಂತ್ರಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆ ನಡೆಸಿದ್ದಾರೆ. ಹಿಮಸ್ಫೋಟವಾದ ಪ್ರದೇಶಗಳಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯ ಹಾಗೂ ಸದ್ಯದ ಪರಿಸ್ಥಿತಿ ಬಗ್ಗೆ ಅಮಿತ್ ಶಾ ಮಾಹಿತಿ ಪಡೆದಿದ್ದಾರೆ.
ಐಟಿಬಿಪಿಯ ಎರಡು ತಂಡಗಳು ಘಟನಾ ಸ್ಥಳಕ್ಕೆ ತೆರಳಿವೆ. 3 ಎನ್‌ಡಿಆರ್‌ಎಫ್ ತಂಡಗಳು ಡೆಹ್ರಾಡೂನ್‌ನಿಂದ ಆಗಮಿಸುತ್ತಿವೆ. ಹೆಚ್ಚುವರಿ 3 ತಂಡಗಳು ಸಂಜೆಯ ವೇಳೆಗೆ ಆಗಮಿಸಲಿವೆ. ಸದ್ಯ ಘಟನಾ ಸ್ಥಳದಲ್ಲಿ ಎನ್‌ಡಿಆರ್‌ಎಫ್ ಹಾಗೂ ಸ್ಥಳೀಯ ಸಿಬ್ಬಂದಿಗಳಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆ ಬಗ್ಗೆ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಮಾಹಿತಿ ನೀಡಿದ್ದಾರೆ.
ಉತ್ತರಾಖಂಡ್ನಲ್ಲಿ ಹಿಮಕುಸಿತದಿಂದ ದಿಢೀರ್ ಪ್ರವಾಹ ಉಂಟಾಗಿದೆ. ಋಷಿ ಗಂಗಾ ಯೋಜನೆಯ ಪವರ್ ಪ್ರಾಜೆಕ್ಟ್ಗೂ ಹಾನಿಯಾಗಿದೆ. ಅಲಕಾನಂದಾ ನದಿ ಪಾತ್ರದ ಗ್ರಾಮಗಳು ಮುಳುಗುವ ಭೀತಿ ಎದುರಿಸುತ್ತಿವೆ. ನದಿ ಪಾತ್ರದ ಗ್ರಾಮಸ್ಥರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ. ಚಮೋಲಿ ಪೊಲೀಸರಿಂದ ಗ್ರಾಮಸ್ಥರ ಸ್ಥಳಾಂತರ ಕಾರ್ಯ ನಡೆಯುತ್ತಿದೆ.
ಉತ್ತರಾಖಂಡ್ ಚಮೋಲಿಯಲ್ಲಿ ವ್ಯಾಪಕ ಹಿಮಕುಸಿತ; ನದಿಪಾತ್ರದ ಜನತೆಗೆ ಆಡಳಿತದಿಂದ ಎಚ್ಚರಿಕೆ
Published On - 2:09 pm, Sun, 7 February 21