ಪತಂಜಲಿ ಸಂಸ್ಥೆಯ 15 ಉತ್ಪನ್ನಗಳ ತಯಾರಿಕೆಗೆ ಲೈಸೆನ್ಸ್ ರದ್ದು ಮಾಡಿದ ಉತ್ತರಾಖಂಡ್ ಸರ್ಕಾರ

|

Updated on: Apr 29, 2024 | 9:35 PM

Patanjali Ayurved loses manufacturing license for 15 products: ನ್ಯಾಯಾಲಯದ ಆದೇಶ ಉಲ್ಲಂಘಿಸಿ ತಪ್ಪಾದ ಮಾಹಿತಿ ಇರುವ ಜಾಹೀರಾತುಗಳನ್ನು ಪದೇ ಪದೇ ಪ್ರಕಟಿಸುತ್ತಿದ್ದ ಪತಂಜಲಿ ಆಯುರ್ವೇದ್ ಸಂಸ್ಥೆ ಕೋರ್ಟ್ ನಿಂದನೆಯ ಸಂಕಷ್ಟ ಎದುರಿಸುತ್ತಿದೆ. ಇದೇ ಜಾಹೀರಾತು ವಿಚಾರವಾಗಿ ಉತ್ತರಾಖಂಡ್ ಸರ್ಕಾರ ಪತಂಜಲಿಯ 15 ಉತ್ಪನ್ನಗಳ ತಯಾರಿಕೆಗೆ ನೀಡಲಾಗಿದ್ದ ಪರವಾನಿಗೆಯನ್ನು ರದ್ದು ಮಾಡಿರುವುದು ಗೊತ್ತಾಗಿದೆ. ಆದರೆ, ರಾಜ್ಯ ಸರ್ಕಾರದ ಈ ಅಧಿಸೂಚನೆ ಇನ್ನೂ ಸಾರ್ವತ್ರಿಕವಾಗಿ ನೀಡಲಾಗಿಲ್ಲ. ಸುಪ್ರೀಂಕೋರ್ಟ್​ನಲ್ಲಿ ನಾಳೆ ಮಂಗಳವಾರ ಏಪ್ರಿಲ್ 30ರಂದು ಪತಂಜಲಿ ವಿರುದ್ಧ ವಿಚಾರಣೆ ಇದೆ.

ಪತಂಜಲಿ ಸಂಸ್ಥೆಯ 15 ಉತ್ಪನ್ನಗಳ ತಯಾರಿಕೆಗೆ ಲೈಸೆನ್ಸ್ ರದ್ದು ಮಾಡಿದ ಉತ್ತರಾಖಂಡ್ ಸರ್ಕಾರ
ಪತಂಜಲಿ ಸಂಸ್ಥೆ
Follow us on

ಡೆಹ್ರಾಡೂನ್, ಏಪ್ರಿಲ್ 29: ಆಧುನಿಕ ಆಲೋಪಥಿ ಚಿಕಿತ್ಸಾ ಪದ್ಧತಿಯನ್ನು ಅವಹೇಳನ ಮಾಡಿ, ಮತ್ತು ದಾರಿ ತಪ್ಪಿಸುವ ಜಾಹೀರಾತುಗಳನ್ನು ನೀಡಿ ಸುಪ್ರೀಂಕೋರ್ಟ್​ನಿಂದ ತರಾಟೆಗೆ ಒಳಗಾಗುತ್ತಿರುವ ಪತಂಜಲಿ ಆಯುರ್ವೇದ್ (Patanjali Ayurved) ಸಂಸ್ಥೆ ಈಗ ಹಲವು ಉತ್ಪನ್ನಗಳಿಗೆ ಲೈಸೆನ್ಸ್ ಕಳೆದುಕೊಂಡಿದೆ. 15 ಉತ್ಪನ್ನಗಳ ತಯಾರಿಕೆಗೆ ಪತಂಜಲಿ ಸಂಸ್ಥೆಗೆ ನೀಡಲಾಗಿದ್ದ ಪರವಾನಿಗೆಯನ್ನು ಉತ್ತರಾಖಂಡ್ ಸರ್ಕಾರ ರದ್ದು ಮಾಡಿದೆ. ಏಪ್ರಿಲ್ 24ರಂದು ಈ ಸಂಬಂಧ ಇಲ್ಲಿನ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವುದು ತಿಳಿದುಬಂದಿದೆ. ಆದರೆ, ಈ ಆದೇಶವನ್ನು ಇನ್ನೂ ಸಾರ್ವತ್ರಿಕವಾಗಿ ಬಿಡುಗಡೆ ಮಾಡಲಾಗಿಲ್ಲ.

ವರದಿ ಪ್ರಕಾರ ಪತಂಜಲಿ ಸಂಸ್ಥೆ ತನ್ನ ಉತ್ಪನ್ನಗಳ ಬಗ್ಗೆ ಸುಳ್ಳು ಮಾಹಿತಿ ನೀಡುವಂತಹ ಜಾಹೀರಾತುಗಳನ್ನು ಪದೇ ಪದೇ ಪ್ರಕಟಿಸುತ್ತಿದ್ದುದರಿಂದ ಮ್ಯಾನುಫ್ಯಾಕ್ಚರಿಂಗ್ ಲೈಸೆನ್ಸ್ ಅನ್ನು ಹಿಂಪಡೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಪತಂಜಲಿ ಆಯುರ್ವೇದ್ ಸಂಸ್ಥೆಯ ಉತ್ಪಾದನಾ ಘಟಕಗಳು ಉತ್ತರಾಖಂಡ್ ರಾಜ್ಯದ ಹರಿದ್ವಾರ್ ನಗರದಲ್ಲಿ ಇವೆ.

ಇದನ್ನೂ ಓದಿ: ಖಲಿಸ್ತಾನ್ ಜಿಂದಾಬಾದ್ ಘೋಷಣೆ ಮಧ್ಯೆ, ಸಿಖ್ಖರಿಗೆ ಸ್ವಾತಂತ್ರ್ಯ ರಕ್ಷಣೆಯ ಭರವಸೆ ಕೊಟ್ಟ ಕೆನಡಾ ಪ್ರಧಾನಿ

ಕೊರೋನಾ ಸಂದರ್ಭದಲ್ಲಿ ಪತಂಜಲಿ ಸಂಸ್ಥೆ ತಾನು ಬಿಡುಗಡೆ ಮಾಡಿದ ಕೊರೋನಿಲ್ ಮಾತ್ರೆ ಕೋವಿಡ್ ಅನ್ನು ಗುಣ ಮಾಡಬಲ್ಲುದು ಎಂದು ಹೇಳುವ ಜಾಹೀರಾತು ಸಾಕಷ್ಟು ಬಾರಿ ಪ್ರಸಾರವಾಗಿತ್ತು. ಅಷ್ಟೇ ಅಲ್ಲ ಅದರ ಇನ್ನೂ ಅನೇಕ ಉತ್ಪನ್ನಗಳ ಬಗ್ಗೆ ಸುಳ್ಳು ಮಾಹಿತಿ ಇರುವ ಜಾಹೀರಾತುಗಳನ್ನು ಬಾಬಾ ರಾಮದೇವ್ ಮಾಲಕತ್ವದ ಸಂಸ್ಥೆ ಪ್ರಕಟಿಸಿದೆ. ಇಂಥ ಜಾಹೀರಾತುಗಳನ್ನು ನಿಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯ ಬಾರಿ ಬಾರಿ ನಿರ್ದೇಶನ ನೀಡಿದರೂ ಅದು ಪ್ರಕಟವಾಗುವುದು ನಿಂತಿರಲಿಲ್ಲ. ವಿಚಾರಣೆಗೆ ಕೋರ್ಟ್​ಗೆ ಹಾಜರಾಗಬೇಕೆಂದು ತಿಳಿಸಿದರೂ ಪತಂಜಲಿ ಸಂಸ್ಥೆಯ ಸಹ-ಸಂಸ್ಥಾಪಕರಾದ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಕೇಳಿರಲಿಲ್ಲ.

ಇತ್ತೀಚೆಗೆ ಇದೇ ವಿಚಾರವಾಗಿ ಸುಪ್ರೀಂಕೋರ್ಟ್ ವ್ಯಗ್ರಗೊಂಡಿತ್ತು. ಸುಳ್ಳು ಜಾಹೀರಾತು ಸಂಬಂಧ ಕ್ಷಮಾಪಣೆ ಕೋರಬೇಕೆಂದು ಕೋರ್ಟ್ ಸೂಚಿಸಿತು. ಕ್ಷಮಾಪಣೆ ಪತ್ರ ಸುಪ್ರೀಂಕೋರ್ಟ್ ತಲುಪುವುದರೊಳಗಾಗಿ ಬಾಬಾ ರಾಮದೇವ್ ಅವರು ಸುದ್ದಿಗೋಷ್ಠಿಯಲ್ಲಿ ಕ್ಷಮಾಪಣೆ ಬಗ್ಗೆ ಹೇಳಿಕೆ ನೀಡಿದ್ದರು. ಇದು ನ್ಯಾಯಮೂರ್ತಿಗಳನ್ನು ಇನ್ನಷ್ಟು ವ್ಯಗ್ರಗೊಳಿಸಿತು. ಬಳಿಕ ಪತ್ರಿಕೆಯಲ್ಲಿ ಕ್ಷಮಾಪಣೆಯ ಜಾಹೀರಾತು ಕೊಡುವಂತೆ ತಿಳಿಸಲಾಯಿತು. ಸಣ್ಣ ಕಾಲಂನಲ್ಲಿ ಕ್ಷಮಾಪಣೆ ಪತ್ರ ಪ್ರಕಟಿಸಲಾಗಿತ್ತು. ಇದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಯಮದ ಕಟ್ಟೆ ಒಡೆಯುವಂತೆ ಮಾಡಿತು. ಕೋರ್ಟ್ ಆದೇಶವನ್ನು ಇಷ್ಟು ಕೇವಲವಾಗಿ ಕಾಣುತ್ತಿರುವುದಕ್ಕೆ ಜಡ್ಜ್​ಗಳು ಸಿಟ್ಟು ಹೊರಹಾಕಿದ್ದಾರೆ.

ಇದನ್ನೂ ಓದಿ: ಮಸೀದಿಯೊಳಗೆ ನುಗ್ಗಿ ಧರ್ಮಗುರುವನ್ನು ಹೊಡೆದು ಕೊಂದ ಮೂವರು ಮುಸುಕುಧಾರಿಗಳು

ಇದೀಗ ಪತಂಜಲಿ ವಿರುದ್ಧದ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ಏಪ್ರಿಲ್ 30, ನಾಳೆಯೂ ವಿಚಾರಣೆ ಇದೆ. ಬಾಬಾ ರಾಮದೇವ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪವನ್ನು ಕೈಗೆತ್ತಿಕೊಳ್ಳುವುದೋ ಬೇಡವೋ ಎಂಬುದು ನಾಳೆ ನಿರ್ಧಾರವಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ