ಉತ್ತರಾಖಂಡ ಹೊಸ ಸಿಎಂ ಪುಷ್ಕರ್​ ಸಿಂಗ್​ ದಾಮಿ ಟ್ವೀಟ್ ಮಾಡಿದ್ದ ಅಖಂಡ ಭಾರತದ ಭೂಪಟದಲ್ಲಿ ಲಡಾಖ್, ಪಿಒಕೆ ಇರಲಿಲ್ಲ

| Updated By: guruganesh bhat

Updated on: Jul 04, 2021 | 6:22 PM

ಇಂದಷ್ಟೇ ಉತ್ತರಾಖಂಡ್‌ನ 11ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕಟಿಮಾ ವಿಧಾನಸಭಾ ಕ್ಷೇತ್ರದ ಶಾಸಕ ಪುಷ್ಕರ್‌ಸಿಂಗ್ ದಾಮಿ ಅವರ 2015ರ ಸ್ವಾತಂತ್ರ್ಯ ದಿನಕ್ಕೂ ಒಂದು ದಿನ ಮೊದಲಿನ ‘ಅಖಂಡ ಭಾರತ’ ಟ್ವೀಟ್ ವೈರಲ್ ಆಗುತ್ತಿದೆ.

ಉತ್ತರಾಖಂಡ ಹೊಸ ಸಿಎಂ ಪುಷ್ಕರ್​ ಸಿಂಗ್​ ದಾಮಿ ಟ್ವೀಟ್ ಮಾಡಿದ್ದ ಅಖಂಡ ಭಾರತದ ಭೂಪಟದಲ್ಲಿ ಲಡಾಖ್, ಪಿಒಕೆ ಇರಲಿಲ್ಲ
ಪುಶ್ಕರ್ ಸಿಂಗ್ ದಾಮಿ
Follow us on

ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿ  ಪುಷ್ಕರ್​ ಸಿಂಗ್​ ದಾಮಿ ಅಧಿಕಾರಕ್ಕೆ ಬರುವ ಹೊತ್ತಲ್ಲೇ ವಿವಾದದ ಸುಳಿಗೆ ಸಿಲುಕಿದ್ದಾರೆ. 2015ರಲ್ಲಿ ಅವರು ಮಾಡಿದ್ದ ಟ್ವೀಟ್ ಒಂದು ಸದ್ಯ ಅವರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಬಾರಿ ಪ್ರಸ್ತಾಪವಾಗುವಂತೆ ಮಾಡಿದೆ. 2015ರ ಸ್ವಾತಂತ್ರ್ಯ ದಿನಕ್ಕೂ ಒಂದು ದಿನ ಮೊದಲು ಪುಷ್ಕರ್​ ಸಿಂಗ್​ ದಾಮಿ ‘ಅಖಂಡ ಭಾರತ’ ಎಂಬ ಭೂಪಟದ ಚಿತ್ರವನ್ನು ಟ್ವಿಟರ್​ನಲ್ಲಿ ಲಗ್ಗತ್ತಿಸಿದ್ದರು. ಸದ್ಯ ಆ ಟ್ವೀಟ್ ಇಟ್ಟುಕೊಂಡು ಟ್ವಿಟ್ಟಿಗರು ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿ  ಪುಷ್ಕರ್​ ಸಿಂಗ್​ ದಾಮಿ ಅವರ ಕಾಲೆಳೆಯುತ್ತಿದ್ದಾರೆ. ಇಂದಷ್ಟೇ ಉತ್ತರಾಖಂಡ್‌ನ 11ನೇ ಮುಖ್ಯಮಂತ್ರಿಯಾಗಿ ಕಟಿಮಾ ವಿಧಾನಸಭಾ ಕ್ಷೇತ್ರದ ಶಾಸಕ ಪುಷ್ಕರ್‌ಸಿಂಗ್ ದಾಮಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 

ಅಖಂಡ ಭಾರತದ ಪರಿಕಲ್ಪನೆಯಲ್ಲಿ ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿ  ಪುಷ್ಕರ್​ ಸಿಂಗ್​ ದಾಮಿ 2015ರಲ್ಲಿ ಈ ಟ್ವೀಟ್ ಮಾಡಿದ್ದರು. ಅವರು ಹಂಚಿಕೊಂಡಿದ್ದ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಲಡಾಕ್ ಮಿಸ್ ಆಗಿತ್ತು. ಜತೆಗೆ ನಿಖರವಾಗಿ ಗಡಿಗಳನ್ನು ಗುರುತಿಸರಾಗಿರಲಿಲ್ಲ. ಅಖಂಡ ಭಾರತ- ಪ್ರತಿಯೊಬ್ಬ ದೇಶಭಕ್ತನ ಕನಸು ಎಂದು ಅವರು ಟ್ವೀಟ್​ನಲ್ಲಿ ಬರೆದುಕೊಂಡಿದ್ದರು.

ಮಾಜಿ ಐಎಎಸ್ ಅಧಿಕಾರಿ, ಪ್ರಸಾರ ಭಾರತಿಯ ಮಾಜಿ ಸಿಇಒ ಜವಾಹರ್ ಸಿರ್ಕಾ, 2015ರ ಪುಷ್ಕರ್​ ಸಿಂಗ್​ ದಾಮಿ ಅವರ ಟ್ವೀಟ್​ನ ಸ್ಕ್ರೀನ್​ಶಾಟ್ ಹಂಚಿಕೊಂಡು ಇವರನ್ನು ಉತ್ತರಾಖಂಡದ ಮುಖ್ಯಮಂತ್ರಿ ಮಾಡುವ ಬದಲು ಭಾರತದ ವಿದೇಶಾಂಗ ಸಚಿವರನ್ನಾಗಿ ಮಾಡಬೇಕಿತ್ತು ಎಂದು ಕಾಲೆಳೆದಿದ್ದಾರೆ. ಆಗ ಮೂರನೇ ವಿಶ್ವಯುದ್ಧವೂ ನಡೆಯಬಹುದಿತ್ತೇನೋ ಎಂದು ಅವರು ಟಾಂಗ್ ನೀಡಿದ್ದಾರೆ.

4 ತಿಂಗಳಲ್ಲಿ ಎರಡು ಬಾರಿ ಸಿಎಂ ಬದಲಾವಣೆ
ಉತ್ತರಾಖಂಡ್​​ನಲ್ಲಿ ಇನ್ನೇನು ವರ್ಷದೊಳಗೇ ವಿಧಾನಸಭೆ ಚುನಾವಣೆ ಬರಲಿದೆ. ಆದರೆ ಬಿಜೆಪಿ ಕೇವಲ ನಾಲ್ಕೇ ತಿಂಗಳಲ್ಲಿ ಇದು ಎರಡನೇ ಬಾರಿಗೆ ಮುಖ್ಯಮಂತ್ರಿಯನ್ನು ಬದಲಿಸುತ್ತಿದೆ. 2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದ ತ್ರಿವೇಂದ್ರ ಸಿಂಗ್​ ರಾವತ್​ ಮಾರ್ಚ್​ನಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಇವರ ಆಡಳಿತದ ಬಗ್ಗೆ ಸ್ವಪಕ್ಷೀಯರಿಂದಲೇ ಅಸಮಾಧಾನ ವ್ಯಕ್ತವಾಗಿತ್ತು. ಕೆಲವರು ಹೈಕಮಾಂಡ್​ಗೂ ದೂರು ನೀಡಿದ್ದರು. ರಾಜಕೀಯ ಬಿಕ್ಕಟ್ಟು ಹೆಚ್ಚಾದ ಬೆನ್ನಲ್ಲೇ, ಮುಂಬರುವ ವಿಧಾನಸಭಾ ಚುನಾವಣೆಗೆ ಯಾವುದೇ ತೊಂದರೆಯಾಗಬಾರದು, ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ತ್ರಿವೇಂದ್ರ ಸಿಂಗ್​ ರಾವತ್​ ರಾಜೀನಾಮೆ ಕೊಟ್ಟಿದ್ದರು. ಬಳಿಕ ತೀರಥ್​ ಸಿಂಗ್​ ರಾವತ್ ಆ ಹುದ್ದೆಗೆ ಏರಿದ್ದರು.

ಮುಖ್ಯಮಂತ್ರಿಯಾದ ಬಳಿಕ ತೀರಥ್ ಸಿಂಗ್​ ಒಂದೆರಡು ವಿಚಾರಗಳಲ್ಲಿ ತೀವ್ರವಾದ ವಿವಾದ ಸೃಷ್ಟಿಸಿದ್ದರು. ಮೊದಲು ಕುಂಭಮೇಳಕ್ಕೆ ಕೊವಿಡ್​ 19 ಟೆಸ್ಟ್ ರಿಪೋರ್ಟ್ ಅಗತ್ಯವಿಲ್ಲ ಎಂದು ಘೋಷಿಸಿ ಟೀಕೆಗೆ ಗುರಿಯಾದರು. ಎರಡನೆಯದಾಗಿ ಮಹಿಳೆಯರು ಹರಿದ ಜೀನ್ಸ್​ ಧರಿಸುವ ಬಗ್ಗೆ ಮಾತನಾಡಿ, ವಿವಾದ ಸೃಷ್ಟಿಸಿ ಕಟು ವಿರೋಧಕ್ಕೆ ಗುರಿಯಾದರು. ಹಾಗೇ, ಭಾರತವನ್ನು ಆಳಿದ್ದವರು ಬ್ರಿಟಿಷರಲ್ಲ, ಅಮೆರಿಕನ್ನರು ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದರು.  ನಾಲ್ಕೇ ತಿಂಗಳ ಮಟ್ಟಿಗೆ ಮುಖ್ಯಮಂತ್ರಿಯಾಗಿದ್ದವರು ಇದೀಗ ರಾಜೀನಾಮೆ ನೀಡುವಂತಾಗಿತ್ತು.

ಇದನ್ನೂ ಓದಿ: 

ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ; ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಆಪ್ತ ಇವರು

ಇದು ನಮ್ಮ ಸರ್ಕಾರ ಎಂಬ ಭಾವನೆಯೇ ಬರುತ್ತಿಲ್ಲ; ಡಿ ಕೆ ಶಿವಕುಮಾರ್, ಕುಮಾರಸ್ವಾಮಿ ಜತೆ ಯಡಿಯೂರಪ್ಪ ಹೊಂದಾಣಿಕೆ ಸದಾ ಇದೆ: ಸಚಿವ ಯೋಗೇಶ್ವರ್

(Uttarakhand new CM Pushkar Singh Damar 2015 Akhand Bharat tweet goes viral)