ಬಿಜೆಪಿ ಗೆದ್ದಿದ್ದಕ್ಕೆ ಯೋಗಿ ಆದಿತ್ಯನಾಥ್ರಿಗೆ ಅಭಿನಂದನೆ ಹೇಳಿದ ಸೈನಾ ನೆಹ್ವಾಲ್; ಪ್ರತಿಪಕ್ಷಗಳಿಂದ ಕಟು ಟೀಕೆ
ಸ್ಥಳೀಯ ಸಂಸ್ಥೆ ಚುನಾವಣೆಗಳು ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗಳಿಗಾಗಲೀ, 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗಾಗಲೀ ಸಂಬಂಧಪಡುವುದಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ದೆಹಲಿ: ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಬಿಜೆಪಿ ನಾಯಕರು ಯೋಗಿ ಆದಿತ್ಯನಾಥ್ರಿಗೆ ಅಭಿನಂದನೆ ಸಲ್ಲಿಸಿ, ಅವರನ್ನು ಹೊಗಳಿದ್ದಾರೆ. ಈ ಮಧ್ಯೆ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಯೋಗಿ ಆದಿತ್ಯನಾಥ್ ಅವರಿಗೆ ಅಭಿನಂದನೆ ಸಲ್ಲಿಸಿ ಸಿಕ್ಕಾಪಟೆ ಟ್ರೋಲ್ಗೆ ಗುರಿಯಾಗಿದ್ದಾರೆ. ರಾಷ್ಟ್ರೀಯ ಲೋಕ ದಳದ ಮುಖಂಡ ಜಯಂತ್ ಚೌಧರಿ ಟ್ವೀಟ್ ಮಾಡಿ, ಸೈನಾರನ್ನು ಸರ್ಕಾರಿ ಶಟ್ಲರ್ ಎಂದು ಕರೆದಿದ್ದಾರೆ.
ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳ ಬಗ್ಗೆ ಸಹಜವಾಗಿಯೇ ಕುತೂಹಲ ಇತ್ತು. ಅದರಲ್ಲೀಗ ಯೋಗಿ ನೇತೃತ್ವದ ಬಿಜೆಪಿ ಅಮೋಘ ಜಯ ಗಳಿಸಿದೆ. 75 ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 67 ಸೀಟ್ಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಅಖಿಲೇಶ್ ಯಾದವ್ರ ಸಮಾಜವಾದಿ ಪಕ್ಷ ಕೇವಲ 5 ಸೀಟ್ ಗೆದ್ದರೆ, ರಾಷ್ಟ್ರೀಯ ಲೋಕ ದಳಕ್ಕೆ ಒಂದು ಸ್ಥಾನವಷ್ಟೇ ಲಭ್ಯವಾಗಿದೆ. ಇನ್ನು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಾರ್ಟಿ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. 2016ರಲ್ಲಿ ಜಿಲ್ಲಾಪಂಚಾಯತ್ ಅಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಖಿಲೇಶ್ ಯಾದವ್ರ ಪಕ್ಷ 75 ಸೀಟ್ಗಳಲ್ಲಿ 60 ಸೀಟುಗಳನ್ನು ಗೆದ್ದಿತ್ತು. ಅದಕ್ಕೆ ಹೋಲಿಸಿದರೆ ಇದು ಅತ್ಯಂತ ಕಳಪೆಯಾಗಿದೆ.
ಬಿಜೆಪಿಯ ಈ ಭರ್ಜರಿ ಗೆಲುವಿಗೆ ಸೈನಾ ನೆಹ್ವಾಲ್ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟ್ವಿಟರ್ನಲ್ಲಿ ಟ್ಯಾಗ್ ಮಾಡಿದ ಸೈನಾ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ. ಸೈನಾ ಕಳೆದ ವರ್ಷ ಜನವರಿಯಲ್ಲಿಯೇ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅದೇ ಕಾರಣಕ್ಕೆ ಈಗ ಯೋಗಿ ಆದಿತ್ಯನಾಥ್ರಿಗೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ.
ಆದರೆ ಪ್ರತಿಪಕ್ಷಗಳು ಸೈನಾ ವಿರುದ್ಧ ತಿರುಗಿಬಿದ್ದಿವೆ. ಅವರನ್ನು ಸರ್ಕಾರಿ ಶಟ್ಲರ್ ಎಂದು ರಾಷ್ಟ್ರೀಯ ಲೋಕದಳದ ಜಯಂತ್ ಚೌಧರಿ ಕರೆದಿದ್ದರೆ, ತಮಿಳುನಾಡಿನ ಕಾಂಗ್ರೆಸ್ನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಡಾ. ಅಸ್ಲಾಂ ಭಾಷಾ, ಸೆಕ್ಯೂಲರಿಸಂ ಎಂಬುದು ನಿಮ್ಮ ಅಭಿಮಾನಿಗಳಲ್ಲೇ ವಿಭಜನೆ ಉಂಟು ಮಾಡಬಹುದು ಎಂದಿದ್ದಾರೆ. ಹಾಗೇ, ನೀವ್ಯಾಕೆ ಆಟವನ್ನು ನಿಲ್ಲಿಸಬಾರದು ಎಂದೂ ಕೇಳಿದ್ದಾರೆ. ಇವರ ಹೊರತಾಗಿಯೂ ಕೆಲವು ನೆಟ್ಟಿಗರು ಸೈನಾ ವಿರುದ್ಧ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ ರಾಜಕೀಯ ವಿಶ್ಲೇಷಕರು ಈ ಸ್ಥಳೀಯ ಸಂಸ್ಥೆ ಚುನಾವಣೆಗಳು ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗಳಿಗಾಗಲೀ, 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗಾಗಲೀ ಸಂಬಂಧಪಡುವುದಿಲ್ಲ. ಇಲ್ಲಿ ಗೆದ್ದ ಪಕ್ಷವೇ ಆಗಲೂ ಗೆಲ್ಲುತ್ತದೆ ಎಂದೆಲ್ಲ ಭಾವಿಸುವುದು ಸರಿಯಲ್ಲ ಎಂದಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಗೆದ್ದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಇದು ಜನರು ಅಭಿವೃದ್ಧಿಗೆ ನೀಡಿದ ಆಶೀರ್ವಾದ. ಈ ಗೆಲುವಿನ ಸಂಪೂರ್ಣ ಕ್ರೆಡಿಟ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರಿಗೆ ಸಂದುತ್ತದೆ ಎಂದು ಹೇಳಿದ್ದರು.
Hearty congratulations for thumping victory in Zila Panchayat Chairperson election in UP @myogiadityanath sir ?? #ZilaPanchayatElectionUP2021
— Saina Nehwal (@NSaina) July 3, 2021
सरकारी shuttler recognises BJP skill in smashing peoples’ verdict!
I think voters need to play a subtle drop shot on celebs trying to influence their decisions! https://t.co/6rlxDk5I6L
— Jayant Chaudhary (@jayantrld) July 3, 2021
Secularism has caused division among your fans .. Why are you going to stop playing? @NSaina ?@ShayarImran @vidyarthee @MastanValiINC https://t.co/mVGNR84BGR
— Dr. J Aslam Basha (@JAslamBasha) July 4, 2021
ಇದನ್ನೂ ಓದಿ: ಕೊರೊನಾ ಲಸಿಕೆ ಪಡೆಯದವರ ದೇಹದಲ್ಲೇ ವೈರಾಣು ರೂಪಾಂತರ ಸಾಧ್ಯತೆ: ತಜ್ಞರ ಎಚ್ಚರಿಕೆ
Badminton champion Saina Nehwal congratulated Yogi Adityanath for Victory in local body elections of Uttar Pradesh
Published On - 5:23 pm, Sun, 4 July 21