ಉತ್ತರಕಾಶಿ, ನ.24: ಉತ್ತರಕಾಶಿ(Uttarkashi) ಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಚರಣೆ ಮುಂದುವರಿದಿದೆ. ಕಳೆದ 13 ದಿನಗಳಿಂದ ಕಾರ್ಯಚರಣೆ ನಡೆಯುತ್ತಿದ್ದು, ನಿನ್ನೆಯೇ ಕಾರ್ಯಚರಣೆ ಮುಕ್ತಾಯಗೊಳ್ಳಬೇಕಿತ್ತು, ಆದರೆ, ಕಡೆಯ ಹಂತದ ಡ್ರೀಲಿಂಗ್ ವೇಳೆ ತಾಂತ್ರಿಕ ಸಮಸ್ಯೆ ಎದುರಾದ ಬಳಿಕ ಕಾರ್ಯಚರಣೆ ನಿಲ್ಲಿಸಲಾಗಿತ್ತು. ಇಂದು(ನ.24) ಬೆಳಗ್ಗೆಯಿಂದ ಮತ್ತೆ ಪುನಾರಂಭಗೊಂಡಿದ್ದು, ಈವರೆಗೂ ರಕ್ಷಣಾ ತಂಡವು 50 ಮೀಟರ್‌ಗಳವರೆಗೆ ಕೊರೆದಿದೆ. ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಇನ್ನೂ 10 ಮೀಟರ್‌ಗಳು ಉಳಿದಿವೆ. ಇನ್ನು ಪೈಪ್ಗಳನ್ನು ಮೃದುವಾಗಿ ಇಳಿಸಲು 6 ಮೀಟರ್ಗಳ ಮೂರು ಪೈಪ್ಗಳನ್ನು ಬಳಸಲಾಗುತ್ತಿದೆ.
ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ನಿರಂತರವಾಗಿ ಶ್ರಮ ಹಾಕಲಾಗುತ್ತಿದೆ. ಕೆಲವೊಮ್ಮೆ ಮೆಷಿನ್ಗಳು ಕೈಕೊಡುತ್ತಿವೆ. ಈ ಮಧ್ಯೆ ಸುರಂಗದೊಳಗೆ ಪೈಪ್ಗಳನ್ನು ಜೋಡಿಸಲು ವೆಲ್ಡಿಂಗ್ ಮಾಡುತ್ತಿರುವ ಹೊಗೆ, ಕಾರ್ಮಿಕರ ಮೂಗಿಗೆ ಬಡಿದಿದೆ. ಇದರಿಂದ ಕಾರ್ಮಿಕರಲ್ಲಿ ಸುರಂಗದಿಂದ ಹೊರಹೋಗುತ್ತೇವೆ ಎಂಬ ಆಶಾಭಾವ ಮೂಡಿದೆ. ಕಾರ್ಮಿಕರರಿಗೆ ವೆಲ್ಡಿಂಗ್ ವಾಸನೆ ತಲುಪಿರುವುದನ್ನು ವಾಕಿಟಾಕಿ ಮೂಲಕ ಕಾರ್ಮಿಕರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಉತ್ತರಕಾಶಿ ಕುಸಿದ ಸುರಂಗದಿಂದ 41 ಕಾರ್ಮಿಕರನ್ನು ಹೊರತೆಗೆಯವುದು ಹೇಗೆ?; ಎನ್‌ಡಿಆರ್‌ಎಫ್ ಪ್ರಾತ್ಯಕ್ಷಿಕೆ
ಇನ್ನು ಮಾಧ್ಯಮಗಳು ರಕ್ಷಣಾ ಕಾರ್ಯದ ಸಮಯದ ಮಿತಿಯ ಬಗ್ಗೆ ಊಹಿಸಬೇಡಿ ಎಂದು ವಿಪತ್ತು ನಿರ್ವಹಣ ಪ್ರಾಧಿಕಾರ ಸಲಹೆ ನೀಡಿದೆ. ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವ ಸಮಯದ ಬಗ್ಗೆ ಊಹಿಸಬೇಡಿ. ಇದು ತಪ್ಪು ಅಭಿಪ್ರಾಯವನ್ನು ಸೃಷ್ಟಿಸುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಾಧ್ಯಮಗಳಿಗೆ ಸಲಹೆ ನೀಡಿದೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿಗೆ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಟನಲ್ ಒಳಗೆ ಇರುವ ಕಾರ್ಮಿಕರ ಪರಿಸ್ಥಿತಿ ಮತ್ತು ರಕ್ಷಣಾ ಕಾರ್ಯಚರಣೆಯಲ್ಲಿರುವ ರಕ್ಷಣಾ ತಂಡಗಳ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಿನ್ನೆಯಷ್ಟೆ ಸಿಎಂ ಧಾಮಿ ಟನಲ್ ಒಳಗಿರುವ ಕಾರ್ಮಿಕರ ಜೊತೆಗೆ ಮಾತುಕತೆ ನಡೆಸಿ ಸಾಧ್ಯವಾದಷ್ಟು ಬೇಗ ಎಲ್ಲರನ್ನು ಹೊರ ಕರೆತರುವ ಭರವಸೆ ನೀಡಿದ್ದಾರೆ.
ಸುರಂಗದೊಳಗೆ ಸಿಲುಕಿರುವ ಕಾರ್ಮಿಕರಿಗೆ ಆಹಾರ ಪಾನೀಯ ತಯಾರಿಸಿ ರವಾನಿಸಲು ಏಳು ಮಂದಿಯನ್ನು ನೇಮಿಸಲಾಗಿದೆ. ಈ ಹಿಂದೆ ಪಫ್ ರೈಸ್ ಸರಬರಾಜು ಮಾಡಲಾಗಿತ್ತು. ಪ್ರತಿ 45 ನಿಮಿಷಗಳಿಗೊಮ್ಮೆ 4 ಇಂಚಿನ ಪೈಪ್ ಮೂಲಕ ಕಳುಹಿದಲಾಗುತ್ತಿತ್ತು. ಹುರಿದ ಬೇಳೆ, ನೆನೆಸಿದ ಬೇಳೆ, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮತ್ತು ಪಾಪ್‌ಕಾರ್ನ್ ಮತ್ತು ಕಡಲೆಕಾಯಿಗಳನ್ನು ನೀಡಲಾಗುತ್ತಿತ್ತು. ಈಗ ಆರು ಇಂಚಿನ ಪೈಪ್ ಮೂಲಕ ಕಾರ್ಮಿಕರಿಗೆ ಬೇಯಿಸಿದ ಆಹಾರ ನೀಡಲಾಗುತ್ತಿದೆ.
ಇನ್ನು ಉತ್ತರಕಾಶಿಯಲ್ಲಿ ನಡೆಯುತ್ತಿರುವ ಆಪರೇಷನ್ ಗಾಗಿ ಬೆಂಗಳೂರಿನ ತಂಡವು ಸೇರಿಕೊಂಡಿದೆ. ಸ್ಕ್ವಾಡ್ರನ್ ಇನ್‌ಫ್ರಾದಿಂದ ಆರು ಸುರಂಗ ಗಣಿಗಾರಿಕೆ ತಜ್ಞ ಎಂಜಿನಿಯರ್‌ಗಳ ತಂಡ ತೆರಳಿದೆ. ತಂಡವು ಡ್ರೋನ್ ಕ್ಯಾಮೆರಾಗಳ ಸಹಾಯದಿಂದ ಸುರಂಗದೊಳಗಿನ ಪರಿಸ್ಥಿತಿಗಳನ್ನು ರೆಕಾರ್ಡ್ ಮಾಡಿ ರಕ್ಷಣಾ ತಂಡದ ಜೊತೆಗೆ ಚಿಕೊಳ್ಳಲಿದೆ. ಮತ್ತು ಕೃತಕ ಬುದ್ದಿಮತ್ತೆ ಸಹಾಯದಿಂದ ಡೇಟಾವನ್ನು ಸಂಗ್ರಹಿಸಿದೆ. ಈ ಡೇಟಾ ರಕ್ಷಣಾ ಕಾರ್ಯಾಚರಣೆಗೆ ಸಾಕಷ್ಟು ಸಹಾಯ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:14 pm, Fri, 24 November 23