ನವದೆಹಲಿ: ಕೊರೊನಾ ಲಸಿಕೆ ಯಾವಾಗ ಬಳಕೆಗೆ ಸಿಗಬಹುದು ಎಂಬ ನಿರೀಕ್ಷೆಗೆ ಅಂತೂ ತೆರೆ ಬಿದ್ದಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಆಕ್ಸ್ಫರ್ಡ್ ವಿವಿ) ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ಬಳಕೆ ಮಾಡಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI-ಭಾರತೀಯ ಪ್ರಧಾನ ಔಷಧ ನಿಯಂತ್ರಣ ಇಲಾಖೆ) ಇಂದು ಅಧಿಕೃತವಾಗಿ ಅನುಮೋದನೆ ನೀಡಿದೆ.
DCGI ಅಧ್ಯಕ್ಷ ವಿ.ಜಿ. ಸೋಮಾನಿ ಇಂದು, ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಘೋಷಿಸಿದ್ದಾರೆ. ಇವೆರಡೂ ಲಸಿಕೆ ತಯಾರಿಕಾ ಸಂಸ್ಥೆಗಳು ತಮ್ಮ ವ್ಯಾಕ್ಸಿನ್ನ ಕ್ಲಿನಿಕಲ್ ಪ್ರಯೋಗದ ಸಮಗ್ರ ಮಾಹಿತಿಯನ್ನೂ ಸಲ್ಲಿಸಿದ್ದಾರೆ. ಎರಡೂ ಕಂಪನಿಗಳ ಲಸಿಕೆಗಳ ತುರ್ತು ನಿರ್ಬಂಧಿತ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಗಳು ಶೇ.100ರಷ್ಟು ಸುರಕ್ಷಿತವಾಗಿವೆ. ಅದರ ಸುರಕ್ಷತೆ ಬಗ್ಗೆ ಸ್ವಲ್ಪ ಅನುಮಾನ ಇದ್ದಿದ್ದರೂ ನಾವು ಅನುಮೋದನೆ ನೀಡುತ್ತಿರಲಿಲ್ಲ. ಇನ್ನು ಸಣ್ಣ ಜ್ವರ, ಮೈಕೈ ನೋವು ಮತ್ತು ಅಲರ್ಜಿಗಳು ಎಲ್ಲ ರೀತಿ ಲಸಿಕೆಗಳ ಸಾಮಾನ್ಯ ಅಡ್ಡಪರಿಣಾಮಗಳು. ಈ ಬಗ್ಗೆ ಯಾರೂ ಹೆದರುವುದು ಬೇಡ ಎಂದು ಹೇಳಿದ್ದಾರೆ.
Published On - 12:14 pm, Sun, 3 January 21