ನ್ಯಾಯಾಂಗ ಸೇವಾ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳು ಕನಿಷ್ಠ 3 ವರ್ಷಗಳ ಪ್ರಾಯೋಗಿಕ ಅನುಭವ ಹೊಂದಿರಬೇಕು: BCI ಅಭಿಪ್ರಾಯ
ಪ್ರಾಯೋಗಿಕ ಅನುಭವ ಹೊಂದಿರದ ನ್ಯಾಯಾಂಗ ಅಧಿಕಾರಿಗಳು ಕಾನೂನು ವಿಚಾರಗಳನ್ನು ನಿರ್ವಹಿಸಲು ಅಸಮರ್ಥರಾಗಿರುತ್ತಾರೆ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದೆ.
ದೆಹಲಿ: ಹೊಸದಾಗಿ ಕಾನೂನು ಪದವಿ ಪಡೆದ ವಿದ್ಯಾರ್ಥಿಗಳು ನ್ಯಾಯಾಂಗ ಅಧಿಕಾರಿಗಳಾಗುವ ಅವಕಾಶ ನೀಡಿರುವ ಆದೇಶದಲ್ಲಿ ತಿದ್ದುಪಡಿ ತರಬೇಕು ಎಂದು ಕೋರಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸುವುದಾಗಿ ಹೇಳಿಕೆ ನೀಡಿದೆ. ನ್ಯಾಯಾಂಗ ಸೇವಾ ಪರೀಕ್ಷೆ ಎದುರಿಸಲು ಕಾನೂನು ಪದವಿ ಪಡೆದ ವಿದ್ಯಾರ್ಥಿಗಳು ಕನಿಷ್ಠ ಮೂರು ವರ್ಷಗಳ ವೃತ್ತಿ ಅನುಭವ ಹೊಂದಿರಬೇಕು ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಹಾಗೂ ರಾಜ್ಯ ಬಾರ್ ಕೌನ್ಸಿಲ್ಗಳು ಅಭಿಪ್ರಾಯಪಟ್ಟಿವೆ.
ಪ್ರಾಯೋಗಿಕ ಅನುಭವ ಹೊಂದಿರದ ನ್ಯಾಯಾಂಗ ಅಧಿಕಾರಿಗಳು ಕಾನೂನು ವಿಚಾರಗಳನ್ನು ನಿರ್ವಹಿಸಲು ಅಸಮರ್ಥರಾಗಿರುತ್ತಾರೆ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದೆ. ಅಂತಹ ನ್ಯಾಯಾಂಗ ಅಧಿಕಾರಿಗಳು, ನ್ಯಾಯವಾದಿಗಳ ಹಾಗೂ ದಾವೆದಾರರ ನಿರೀಕ್ಷೆ ಮತ್ತು ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಒರಟಾದ ಹಾಗೂ ಅಪ್ರಾಯೋಗಿಕ ವರ್ತನೆ ತೋರುತ್ತಾರೆ ಎಂದು BCI ವಿವರಿಸಿದೆ. ನ್ಯಾಯಾಂಗ ಅಧಿಕಾರಿಗಳ ಅನುಭವದ ಕೊರತೆಯೇ ನ್ಯಾಯಾಂಗ ಪ್ರಕರಣಗಳ ವಿಳಂಬಕ್ಕೆ ಮುಖ್ಯ ಕಾರಣ ಎಂದೂ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿದೆ.
ಈ ಮೂಲಕ, ಸುಪ್ರೀಂ ಕೋರ್ಟ್ 2002ರಲ್ಲಿ ಹೊರಡಿಸಿದ ಆದೇಶದಲ್ಲಿ ತಿದ್ದುಪಡಿ ತರುವಂತೆ, BCI ಮನವಿ ಮಾಡುವುದಾಗಿ ಹೇಳಿದೆ. ನ್ಯಾಯಾಂಗ ಸೇವಾ ಪರೀಕ್ಷೆಗೆ ಕಾನೂನು ವಿದ್ಯಾರ್ಥಿಗಳು ಹಾಜರಾಗಲು, 3 ವರ್ಷದ ಅನುಭವ ಪಡೆದಿರಬೇಕು ಎಂಬ ನಿಯಮವನ್ನು ಭಾರತದ ಸರ್ವೋಚ್ಛ ನ್ಯಾಯಾಲಯ 2002ರಲ್ಲಿ ತೆಗೆದುಹಾಕಿತ್ತು. ಈಗ ಮತ್ತೆ ಆ ನಿಯಮ ಅಳವಡಿಸಬೇಕೆಂದು BCI ಹೇಳಿದೆ.
ಇತ್ತೀಚೆಗೆ, ಆಂಧ್ರಪ್ರದೇಶ ಸಾರ್ವಜನಿಕ ಸೇವಾ ಆಯೋಗವು ಜೂನಿಯರ್ ಡಿವಿಶನ್ನ ಸಿವಿಲ್ ಜಡ್ಜ್ ಹುದ್ದೆಗೆ ಅರ್ಜಿ ಸಲ್ಲಿಸಲು, ಕನಿಷ್ಠ ಮೂರು ವರ್ಷಗಳ ಕಾಲ ನ್ಯಾಯವಾದಿಯಾಗಿ ಕೆಲಸ ಮಾಡಿದ ಅನುಭವ ಹೊಂದಿರಬೇಕು ಎಂದು ಸೂಚಿಸಿತ್ತು.
ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆ: ಸುಪ್ರೀಂ ಕೋರ್ಟ್ ಕೊಲೆಜಿಯಂ ಶಿಫಾರಸು
Published On - 11:34 am, Sun, 3 January 21