‘ದಿ ರೈಸ್ ಆಫ್ ಅಶೋಕ’ ಸಿನಿಮಾದಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೋಷನ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಸತೀಶ್ ನೀನಾಸಂ ಹೀರೋ ಆಗಿ ನಟಿಸುತ್ತಿದ್ದಾರೆ. ಬಿ. ಸುರೇಶ, ಅಚ್ಯುತ್ ಕುಮಾರ್, ಸಂಪತ್ ಮೈತ್ರೀಯಾ, ಗೋಪಾಲಕೃಷ್ಣ ದೇಶಪಾಂಡೆ, ಯಶ್ ಶೆಟ್ಟಿ ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಶೂಟಿಂಗ್ ಬಗ್ಗೆ ಇಲ್ಲಿದೆ ಮಾಹಿತಿ.
ಸ್ಯಾಂಡಲ್ವುಡ್ನ ಖ್ಯಾತ ನಟ ನೀನಾಸಂ ಸತೀಶ್ ಅವರು ಈ ಮೊದಲು ‘ಅಶೋಕ ಬ್ಲೇಡ್’ ಸಿನಿಮಾ ಘೋಷಿಸಿದ್ದರು. ಆದರೆ ಆ ಸಿನಿಮಾದ ಶೀರ್ಷಿಕೆ ಬದಲಾವಣೆ ಆಗಿದೆ. ಟೈಟಲ್ ಬದಲಾಯಿಸಿಕೊಂಡು ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದೆ ಚಿತ್ರತಂಡ. ಆ ಬಗ್ಗೆ ಚಿತ್ರತಂಡದಿಂದ ಮಾಹಿತಿ ಹಂಚಿಕೊಳ್ಳಲಾಗಿದೆ. ಅಶೋಕ್ ಬ್ಲೇಡ್ ಎಂಬ ಟೈಟಲ್ ಬದಲು, ‘ದಿ ರೈಸ್ ಆಫ್ ಅಶೋಕ’ ಎಂದು ಈಗ ಶೀರ್ಷಿಕೆ ಇಡಲಾಗಿದೆ!
ನಿರ್ದೇಶಕ ವಿನೋದ್ ದೊಂಡಾಲೆ ನಿಧನದ ನಂತರ ‘ಅಶೋಕ ಬ್ಲೇಡ್’ ಸಿನಿಮಾ ನಿಂತೇ ಹೋಯಿತು ಎಂದು ಸುದ್ದಿ ಹರಡಿತ್ತು. ಆದರೆ ನಟ ಸತೀಶ್ ನೀನಾಸಂ ಅವರು ‘ದಿ ರೈಸ್ ಆಫ್ ಅಶೋಕ’ ಹೆಸರಿನಲ್ಲಿ ಆ ಪ್ರಾಜೆಕ್ಟ್ ಅನ್ನು ಮತ್ತೆ ಕೈಗೆತ್ತಿಕೊಂಡಿದ್ದಾರೆ. ವಿನೋದ್ ದೊಂಡಾಲೆ ಅವರು ಶೇಕಡ 80ರಷ್ಟು ಚಿತ್ರೀಕರಣ ಮುಗಿಸಿದ್ದರು. ಮಾತಿನ ಭಾಗದ ಒಂದಷ್ಟು ದೃಶ್ಯಗಳು ಹಾಗೂ ಹಾಡುಗಳ ಶೂಟಿಂಗ್ ಬಾಕಿ ಉಳಿದುಕೊಂಡಿತ್ತು.
‘ಚಮಕ್’, ‘ಕ್ಷೇತ್ರಪತಿ’, ‘ಅವತಾರ ಪುರುಷ’ ಮಂತಾದ ಸಿನಿಮಾಗಳಲ್ಲಿ ಸಂಕಲನಕಾರರಾಗಿ ಕೆಲಸ ಮಾಡಿದ ಮನು ಶೇಡ್ಗಾರ್ ಅವರು ಈಗ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಉಳಿದ ದೃಶ್ಯಗಳಿಗೆ ನಿರ್ದೇಶನ ಮಾಡುತ್ತಿದ್ದಾರೆ.
ಈ ಸುದ್ದಿಯೊಂದಿಗೆ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮಚ್ಚು ಹಿಡಿದು ತುಂಬ ರಗಡ್ ಆದಂತಹ ಲುಕ್ನಲ್ಲಿ ನೀನಾಸಂ ಸತೀಶ್ ಅವರು ಕಾಣಿಸಿಕೊಂಡಿರುವುದು ವಿಶೇಷ. ಈ ಸಿನಿಮಾದಲ್ಲಿ ರೆಟ್ರೋ ಕಾಲದ ಕಹಾನಿ ಇರಲಿದೆ ಎಂಬುದು ಪೋಸ್ಟರ್ ಮೂಲಕ ಗೊತ್ತಾಗಿದೆ. ಬಂಡಾಯದ ಕಥೆಯನ್ನು ಹೇಳಲು ‘ದಿ ರೈಸ್ ಆಫ್ ಅಶೋಕ’ ಟೀಮ್ ಸಜ್ಜಾಗುತ್ತಿದೆ.
View this post on Instagram
ಲವಿತ್ ಅವರು ‘ದಿ ರೈಸ್ ಆಫ್ ಅಶೋಕ’ ಸಿನಿಮಾಗೆ ಛಾಯಾಗ್ರಹಣ ಮಾಡುತ್ತಿದ್ದಾರೆ. ವರದರಾಜ್ ಕಾಮತ್ ಅವರು ಕಲಾ ನಿರ್ದೇಶನ ಮಾಡುತ್ತಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕೆ ಇರಲಿದೆ. ರವಿವರ್ಮಾ ಹಾಗೂ ವಿಕ್ರಮ್ ಮೋರ್ ಅವರು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಸಂತೋಷ್ ಶೇಖರ್ ಅವರ ನೃತ್ಯ ನಿರ್ದೇಶನ, ಮನು ಶೆಡ್ಗಾರ್ ಅವರ ಸಂಕಲನ ಈ ಸಿನಿಮಾಗೆ ಇರಲಿದೆ.
ಇದನ್ನೂ ಓದಿ: ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ಫೆ15ರಂದು ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಶೂಟಿಂಗ್ ಪುನಃ ಆರಂಭ ಆಗಲಿದೆ. ಸತೀಶ್ ವೃತ್ತಿಜೀವನದ ಅತ್ಯುತ್ತಮ ಸಿನಿಮಾವಾಗಿ ಇದು ಮೂಡಿಬರಲಿದ್ದು, ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ. ‘ವೃದ್ಧಿ ಕ್ರಿಯೇಷನ್’ ಮತ್ತು ‘ಸತೀಶ್ ಪಿಕ್ಚರ್ಸ್ ಹೌಸ್’ ಬ್ಯಾನರ್ ಮೂಲಕ ವರ್ಧನ್ ನರಹರಿ, ಜೈಷ್ಣವಿ, ನೀನಾಸಂ ಸತೀಶ್ ಅವರು ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.