ಸಂಕ್ರಾಂತಿ ಹೊಸ್ತಿಲಲ್ಲಿ ಸಿನಿಪ್ರಿಯರಿಗೆ ಹಬ್ಬ; ರಿಲೀಸ್ ಆಗ್ತಿದೆ ಹಲವು ಸಿನಿಮಾ
ಸಂಕ್ರಾಂತಿಯ ಹಬ್ಬದ ಸಂದರ್ಭದಲ್ಲಿ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಹಲವು ಹೊಸ ಚಿತ್ರಗಳು ತೆರೆ ಕಾಣುತ್ತಿವೆ. 'ಛೂ ಮಂತರ್', 'ಸಂಜು ವೆಡ್ಸ್ ಗೀತಾ 2', ಮತ್ತು 'ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು' ಮುಂತಾದ ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ತೆಲುಗು ಚಿತ್ರ 'ಗೇಮ್ ಚೇಂಜರ್' ಕೂಡ ಈ ಸಮಯದಲ್ಲಿ ಬಿಡುಗಡೆಯಾಗುತ್ತಿದೆ. ವಿಭಿನ್ನ ಪ್ರಕಾರಗಳ ಚಿತ್ರಗಳು ಈ ಹಬ್ಬದಲ್ಲಿ ಪ್ರೇಕ್ಷಕರನ್ನು ರಂಜಿಸಲಿವೆ.
ಹಬ್ಬಗಳು ಬರುತ್ತಿವೆ ಎಂದರೆ ಸಿನಿಪ್ರಿಯರ ಪಾಲಿಗೂ ಸಖತ್ ವಿಶೇಷ. ಈ ಸಂದರ್ಭದಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತವೆ. ಈಗ ಸಂಕ್ರಾಂತಿ ಸಂದರ್ಭದಲ್ಲೂ ಹಾಗೆಯೇ ಆಗಿದೆ. ಈ ಹಬ್ಬ ದಕ್ಷಿಣದವರ ಪಾಲಿಗೆ ಸಾಕಷ್ಟು ವಿಶೇಷ. ಈ ಕಾರಣಕ್ಕೆ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕ್ಲ್ಯಾಶ್ ಏರ್ಪಡುತ್ತಿದೆ. ಕನ್ನಡದ ಜೊತೆಗೆ ಪರಭಾಷೆಗಳಲ್ಲೂ ಹಲವು ಸಿನಿಮಾಗಳು ತೆರೆಗೆ ಬರುತ್ತಿವೆ. ಈ ಬಾರಿ ವಿವಿಧ ಜಾನರ್ಗಳ ಚಿತ್ರಗಳು ರಿಲೀಸ್ ಆಗುತ್ತಿವೆ ಅನ್ನೋದು ವಿಶೇಷ.
ಛೂ ಮಂತರ್
ಕನ್ನಡದಲ್ಲಿ ಹಾರರ್ ಸಿನಿಮಾಗಳಿಗೇನು ಕೊರತೆ ಇಲ್ಲ. ಈಗ ಈ ಸಾಲಿಗೆ ‘ಛೂ ಮಂತರ್’ ಸಿನಿಮಾ ಕೂಡ ಸೇರ್ಪಡೆ ಆಗುತ್ತಿದೆ. ಹಾರರ್, ಥ್ರಿಲ್ಲರ್, ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಜನವರಿ 10ರಂದು ರಿಲೀಸ್ ಆಗುತ್ತಿರುವ ಈ ಚಿತ್ರದಲ್ಲಿ ಶರಣ್, ಅದಿತಿ ಪ್ರಭುದೇವ, ಮೇಘನಾ ಗಾಂವಕರ್, ಮಧು ಮುಂಡ್ಕೂರ್ ನಟಿಸಿದ್ದಾರೆ. ಕರ್ವ ನವನೀತ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ತರುಣ್ ಶಿವಪ್ಪ ನಿರ್ಮಾಣ ಮಾಡಿದ್ದಾರೆ. ಹಾರರ್ ಕಾಮಿಡಿ ಇಷ್ಟ ಆಗುವವರು ಈ ಸಿನಿಮಾ ನೋಡಬಹುದು.
ಸಂಜು ವೆಡ್ಸ್ ಗೀತಾ 2
‘ಸಂಜು ವೆಡ್ಸ್ ಗೀತಾ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದರ ಸೀಕ್ವೆಲ್ ಆಗಿ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ರಿಲೀಸ್ ಆಗುತ್ತಿದೆ. ಜನವರಿ 10ರಂದು ಈ ಚಿತ್ರ ತೆರೆಗೆ ಬರುತ್ತಿದೆ. ಶ್ರೀನಗರ ಕಿಟ್ಟಿ, ರಚಿತಾ ರಾಮ್, ರಾಗಿಣಿ ದ್ವಿವೇದಿ, ಸಾಧು ಕೋಕಿಲ ಮೊದಲಾದವರು ನಟಿಸಿದ್ದಾರೆ. ನಾಗಶೇಖರ್ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇದು ರೊಮ್ಯಾಂಟಿಕ್ ಡ್ರಾಮಾ ಶೈಲಿಯಲ್ಲಿ ಮೂಡಿ ಬಂದಿದೆ.
‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’
‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸಿನಿಮಾ ಕಥಾ ಸಂಕಲನದ ವರ್ಗಕ್ಕೆ ಸೇರುತ್ತದೆ. ಮೂರು ಕಥೆಗಳ ಗುಚ್ಚವೇ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸಿನಿಮಾ. ಒಂದೇ ಚಿತ್ರದಲ್ಲಿ ವಿವಿಧ ರೀತಿಯ ಜಾನರ್ಗಳ ಕಥೆ ನೋಡಬಹುದು. ದಿಲೀಪ್ ರಾಜ್, ಶಿಲ್ಪಾ ಮಂಜುನಾಥ್, ಅಪೂರ್ವ ಬಾರಧ್ವಾಜ್, ಮಧುಸೂದನ್ ಗೋವಿಂದ ಸಿನಿಮಾದಲ್ಲಿ ನಟಿಸಿದ್ದಾರೆ. ಕೇಶವ್ ಮೂರ್ತಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಗೇಮ್ ಚೇಂಜರ್
ತೆಲುಗಿನಲ್ಲಿ ಗೇಮ್ ಚೇಂಜರ್ ಸಿನಿಮಾ ರಿಲೀಸ್ ಆಗುತ್ತಿದೆ. ರಾಮ್ ಚರಣ್, ಕಿಯಾರಾ ಅಡ್ವಾಣಿ, ವೆನ್ನೆಲ್ಲ ಕಿಶೋರ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಟ್ರೇಲರ್ ರಿಲೀಸ್ ಆಗಿ ಈಗಾಗಲೇ ಗಮನ ಸೆಳೆದಿದೆ. ಈ ಚಿತ್ರಕ್ಕೆ ಶಂಕರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಕಮರ್ಷಿಯಲ್ ಅಂಶಗಳನ್ನು ಹೊಂದಿದ್ದು, ಸಖತ್ ಎಂಟರ್ಟೇನಿಂಗ್ ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ‘ಪುಷ್ಪ 2’ ಘಟನೆಯಿಂದ ಎಚ್ಚೆತ್ತ ಸರ್ಕಾರ; ‘ಗೇಮ್ ಚೇಂಜರ್’ ಚಿತ್ರಕ್ಕೆ ಸಂಕಷ್ಟ
ಇನ್ನೂ ಇವೆ
ಇದಲ್ಲದೆ ಕನ್ನಡದ ‘ಟೆಡ್ಡಿ ಬೇರ್’, ತೆಲುಗಿನ ಬಾಲಯ್ಯ ನಟನೆಯ ‘ಡಾಕು ಮಹರಾಜ್’ (ಜನವರಿ 12), ‘ಸಂಕ್ರಾಂತಿಕಿ ವಸ್ತುನಾಮ್’ (ಜನವರಿ 14) ಚಿತ್ರಗಳು ಕೂಡ ತೆರೆಗೆ ಬರುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.