ಕೊನೇ ಕ್ಷಣದಲ್ಲಿ ‘ಸಂಜು ವೆಡ್ಸ್ ಗೀತಾ 2’ ಬಿಡುಗಡೆ ಕ್ಯಾನ್ಸಲ್; ಏನಿದು ಕಿರಿಕ್?
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಶುಕ್ರವಾರ (ಜನವರಿ 10) ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಬಿಡುಗಡೆ ಆಗುತ್ತಿತ್ತು. ಅಭಿಮಾನಿಗಳು ಈ ಸಿನಿಮಾ ನೋಡಲು ಕಾದಿದ್ದರು. ಆದರೆ ಚಿತ್ರತಂಡದೊಳಗಿನ ಜಗಳದಿಂದಾಗಿ ಬಿಡುಗಡೆಗೆ ಅಡ್ಡಿ ಉಂಟಾಗಿದೆ. ಕೊನೇ ಕ್ಷಣದಲ್ಲಿ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ರಿಲೀಸ್ ಮುಂದಕ್ಕೆ ಹೋಗಿದೆ.
ಶ್ರೀನಗರ ಕಿಟ್ಟಿ, ರಚಿತಾ ರಾಮ್ ಮುಂತಾದವರು ನಟಿಸಿರುವ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಬಿಡುಗಡೆ ಕ್ಯಾನ್ಸಲ್ ಆಗಿದೆ. ಜನವರಿ 10ರಂದು ಬಿಡುಗಡೆ ಮಾಡಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಅಂತಿಮ ಹಂತದಲ್ಲಿ ಸಿನಿಮಾದ ಬಿಡುಗಡೆಗೆ ವಿಘ್ನ ಎದುರಾಗಿದೆ. ಈ ಸಿನಿಮಾಗೆ ನಾಗಶೇಖರ್ ಅವರು ನಿರ್ದೇಶನ ಮಾಡಿದ್ದು, ಚಿತ್ರತಂಡದಲ್ಲಿನ ಜಟಾಪಟಿಯಿಂದಾಗಿ ಸಿನಿಮಾದ ರಿಲೀಸ್ ಮುಂದಕ್ಕೆ ಹೋಗುವಂತಾಗಿದೆ. ಹಾಗಾಗಿ, ಶುಕ್ರವಾರ (ಜ.10) ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಬಿಡುಗಡೆ ಆಗುತ್ತಿಲ್ಲ.
ಟೈಟಲ್ ಕಾರಣದಿಂದಲೇ ‘ಸಂಜು ವೆಡ್ಸ್ ಗೀತಾ 2’ ಚಿತ್ರ ನಿರೀಕ್ಷೆ ಮೂಡಿಸಿತ್ತು. ಹಾಗಾಗಿ ಈ ಸಿನಿಮಾವನ್ನು ನೋಡಬೇಕು ಎಂದು ರಚಿತಾ ರಾಮ್, ಶ್ರೀನಗರ ಕಿಟ್ಟಿ ಫ್ಯಾನ್ಸ್ ಕಾಯುತ್ತಿದ್ದರು. ಇನ್ನೇನು ಜನವರಿ 10 ಬಂದೇ ಬಿಡ್ತು, ಚಿತ್ರಮಂದಿರದಲ್ಲಿ ಸಿನಿಮಾ ನೋಡೋಣ ಎಂದುಕೊಂಡಿದ್ದ ಎಲ್ಲ ಅಭಿಮಾನಿಗಳಿಗೆ ನಿರಾಸೆ ಆಗಿದೆ. ‘ಕ್ಷಮಿಸಿ, ಸಿನಿಮಾದ ರಿಲೀಸ್ ದಿನಾಂಕ ಮುಂದೂಡಲಾಗಿದೆ’ ಎಂದು ಚಿತ್ರತಂಡದವರು ಮಾಹಿತಿ ನೀಡಿದ್ದಾರೆ.
ನಿರ್ದೇಶಕ ನಾಗಶೇಖರ್ ಮತ್ತು ಟಾಲಿವುಡ್ ನಿರ್ಮಾಪಕ ರಾಮರಾವ್ ನಡುವಿನ ಜಟಾಪಟಿಯೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಬಿಡುಗಡೆಗೆ ಹೈದಾರಾಬಾದ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಕಾರಣದಿಂದ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕುವುದು ಅನಿವಾರ್ಯ ಆಗಿದೆ.
ಇದನ್ನೂ ಓದಿ: ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ ರಾಮ್
ಇತ್ತೀಚೆಗಷ್ಟೇ ‘ಸಂಜು ವೆಡ್ಸ್ ಗೀತಾ 2’ ಸುದ್ದಿಗೋಷ್ಠಿ ನಡೆಸಿತ್ತು. ಬಿಡುಗಡೆ ಸಲುವಾಗಿ ರಚಿತಾ ರಾಮ್ ಅವರು ಮಾಧ್ಯಮಗಳಿಗೆ ಸಂದರ್ಶನ ಕೂಡ ನೀಡಿದ್ದರು. ಕೊನೇ ಕ್ಷಣದಲ್ಲಿ ಬಿಡುಗಡೆ ಕ್ಯಾನ್ಸಲ್ ಆಗಿರುವುದರಿಂದ ಪ್ರೇಕ್ಷಕರಿಗೆ ಬೇಸರ ಆಗಿದೆ. 2011ರಲ್ಲಿ ‘ಸಂಜು ವೆಡ್ಸ್ ಗೀತಾ’ ಸಿನಿಮಾ ಬಂದಿತ್ತು. ಆದರೆ ಈಗ ರಿಲೀಸ್ಗೆ ಸಿದ್ಧವಾಗಿರುವ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಕಥೆಯೇ ಬೇರೆ. ಇದು ಸೀಕ್ವೆಲ್ ಅಲ್ಲ. ಈ ಬಾರಿ ನಿರ್ದೇಶಕ ನಾಗಶೇಖರ್ ಅವರು ಸಂಪೂರ್ಣ ಬೇರೆಯದೇ ಕಹಾನಿಯನ್ನು ಪ್ರೇಕ್ಷಕರಿಗೆ ತೋರಿಸಲು ಸಜ್ಜಾಗಿದ್ದರು. ಆದರೆ ರಿಲೀಸ್ ಡೇಟ್ ಮುಂದೂಡಿಕೆ ಆಗಿದ್ದು, ಹೊಸ ರಿಲೀಸ್ ಡೇಟ್ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ಈ ವಾರ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’, ‘ಛೂ ಮಂತರ್’, ‘ಗೇಮ್ ಚೇಂಜರ್’ ಮುಂತಾದ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಲವು ಸಿನಿಮಾಗಳು ತೆರೆಕಾಣುತ್ತಿವೆ. ಈ ರೇಸ್ನಿಂದ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಹಿಂದಕ್ಕೆ ಸರಿದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.