ಕೇರಳದಲ್ಲಿ ಜಿಯೋ ನೆಟ್ವರ್ಕ್ ನಿಷೇಧವಾಗಲಿದೆಯಾ? ವೈರಲ್ ಪೋಸ್ಟ್ ಹಿಂದಿನ ಸತ್ಯವೇನು?
ಈ ಬಗ್ಗೆ ಕೇರಳ ರಾಜ್ಯ ಐಟಿ ಕಾರ್ಯದರ್ಶಿ ಮೊಹಮ್ಮದ್ ವೈ ಸಫಿರುಲ್ಲಾ ಅವರನ್ನು ಸಂಪರ್ಕಿಸಿದಾಗ ಇನ್ನೂ ಸ್ಪಷ್ಟವಾದ ಮಾಹಿತಿ ಲಭ್ಯವಾಗಿದೆ. ರಾಜ್ಯ ಸರ್ಕಾರ ಯಾವುದೇ ಟೆಲಿಕಾಂ ನೆಟ್ವರ್ಕ್ನ್ನೂ ನಿಷೇಧಿಸುತ್ತಿಲ್ಲ. ಎಲ್ಲ ನೆಟ್ವರ್ಕ್ಗಳ ಸೇವೆಯೂ ಹಾಗೇ ಇರಲಿದೆ ಎಂದಿದ್ದಾರೆ.
ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಕೇರಳ ಸರ್ಕಾರ ಬೆಂಬಲ ನೀಡಿದೆ. ಅದರ ಭಾಗವಾಗಿ ಡಿ.31ರಂದು ವಿಧಾನಸಭೆಯಲ್ಲಿ, ಕೇಂದ್ರದ 3 ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದೆ. ಆದರೆ ಇದರ ಹೊರತಾಗಿ ಒಂದು ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಕೇರಳ ಸರ್ಕಾರ 2021ರಿಂದ ರಾಜ್ಯದಲ್ಲಿ ಜಿಯೋ ನೆಟ್ವರ್ಕ್ನ್ನು ನಿಷೇಧಿಸುತ್ತದೆ ಎಂಬುದು ವೈರಲ್ ಪೋಸ್ಟ್ ಸಾರಾಂಶ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಂಬಾನಿಗೆ ತಕ್ಕ ಉತ್ತರ ನೀಡುವ ಸಲುವಾಗಿ, ಕೇರಳ ಸರ್ಕಾರ 2021ರಿಂದ ಜಿಯೋ ನೆಟ್ವರ್ಕ್ನ್ನು ರಾಜ್ಯದಲ್ಲಿ ನಿಷೇಧಿಸಲಿದೆ. ಹಾಗೇ ಕೇರಳ ಫೈಬರ್ ನೆಟ್ ಎಂಬ ಹೊಸ ನೆಟ್ವರ್ಕ್ನ್ನು ಪರಿಚಯಿಸಲಿದೆ. ಹಾಗೇ, ಜಿಯೋ ಫೋನ್ನ ಅರ್ಧ ಬೆಲೆಗೆ ಕೇರಳ ಫೈಬರ್ ನೆಟ್ನ ಫೋನ್ಗಳು ಸಿಗಲಿವೆ ಎಂಬ ಅರ್ಥವನ್ನೊಳಗೊಂಡ ಹಿಂದಿ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದು ಪಕ್ಕಾ ಫೇಕ್ ಸುದ್ದಿ ಆದರೆ ಈ ಸುದ್ದಿಯಲ್ಲಿ ಸತ್ಯವಿಲ್ಲ ಎಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ನ ಫ್ಯಾಕ್ಟ್ಚೆಕ್ನಲ್ಲಿ ತಿಳಿದುಬಂದಿದೆ. ಜಿಯೋವನ್ನು ನಿಷೇಧಿಸುವ ಬಗ್ಗೆಯಾಗಲಿ, ಸ್ವಂತ ನೆಟ್ವರ್ಕ್ ನೀಡುವ ಬಗ್ಗೆಯಾಗಲೀ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.. ನಿರ್ಣಯವನ್ನೂ ಅಂಗೀಕಾರ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.
ಕೇರಳ ಸರ್ಕಾರ ಜಿಯೋ ನಿಷೇಧಿಸುವ ಬಗ್ಗೆ ಸ್ಥಳೀಯ ಮಾಧ್ಯಮಗಳೂ ವರದಿ ಪ್ರಕಟಿಸಿಲ್ಲ. ಇನ್ನು ಸರ್ಕಾರ ತನ್ನ ಸ್ವಾಮ್ಯದ ಕೇರಳ ಫೈಬರ್ ಆಪ್ಟಿಕ್ ನೆಟ್ವರ್ಕ್ (KFON) ಮೂಲಕ, ಸರ್ಕಾರಿ ಸಂಸ್ಥೆಗಳಿಗೆ ಮತ್ತು ಬಡತನ ರೇಖೆಗಿಂತ ಕೆಳಗೆ ಇರುವ 2ದಶಲಕ್ಷ ಕುಟುಂಬಗಳಿಗೆ ಉಚಿತ ಇಂಟರ್ನೆಟ್ ಒದಗಿಸಲು ಯೋಜನೆ ರೂಪಿಸಿದೆ ಎಂದು ನವೆಂಬರ್ 2ರಂದು ಮಿಂಟ್ ಪ್ರಕಟಿಸಿದೆ. ಆದರೆ ಯಾವುದೇ ಖಾಸಗಿ ನೆಟ್ವರ್ಕ್ ನಿಷೇಧದ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ ಎಂದು ಇಂಡಿಯಾ ಟುಡೆ ಸ್ಪಷ್ಟಪಡಿಸಿದೆ.
ಐಟಿ ಕಾರ್ಯದರ್ಶಿ ಹೇಳಿದ್ದೇನು? ಈ ಬಗ್ಗೆ ಕೇರಳ ರಾಜ್ಯ ಐಟಿ ಕಾರ್ಯದರ್ಶಿ ಮೊಹಮ್ಮದ್ ವೈ ಸಫಿರುಲ್ಲಾ ಅವರನ್ನು ಸಂಪರ್ಕಿಸಿದಾಗ ಇನ್ನೂ ಸ್ಪಷ್ಟವಾದ ಮಾಹಿತಿ ಲಭ್ಯವಾಗಿದೆ. ರಾಜ್ಯ ಸರ್ಕಾರ ಯಾವುದೇ ಟೆಲಿಕಾಂ ನೆಟ್ವರ್ಕ್ನ್ನೂ ನಿಷೇಧಿಸುತ್ತಿಲ್ಲ. ಎಲ್ಲ ನೆಟ್ವರ್ಕ್ಗಳ ಸೇವೆಯೂ ಹಾಗೇ ಇರಲಿದೆ. KFON ಯೋಜನೆಯನ್ನು ರಾಜ್ಯದಲ್ಲಿ ಅತಿ ವೇಗದ ನೆಟ್ವರ್ಕ್ ಒದಗಿಸುವ ಸಲುವಾಗಿ ಜಾರಿಗೊಳಿಸಲಾಗಿದೆ. ಇದು ಖಾಸಗಿ ನೆಟ್ವರ್ಕ್ಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.