ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಕಾಲ್ತುಳಿತ ಪ್ರಕರಣ; ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್​ ಗವರ್ನರ್​

| Updated By: Lakshmi Hegde

Updated on: Jan 01, 2022 | 3:32 PM

ಗೃಹ ಸಚಿವ ಅಮಿತ್​ ಶಾ ಸೇರಿ, ಹಲವು ಗಣ್ಯರು ಈ ದುರಂತದ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್​ ಅವರು ಕತ್ರಾದಲ್ಲಿರುವ ನರೈನಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಕಾಲ್ತುಳಿತ ಪ್ರಕರಣ; ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್​ ಗವರ್ನರ್​
ವೈಷ್ಣೋ ದೇವಿ ದೇಗುಲ ಆವರಣದಲ್ಲಿಂದು ಕಾಲ್ತುಳಿತ
Follow us on

ಇತಿಹಾಸ ಪ್ರಸಿದ್ಧ, ಜಮ್ಮು-ಕಾಶ್ಮೀರದ ವೈಷ್ಣೋದೇವಿ ದೇಗುಲ(Vaishno Devi Temple)ದಲ್ಲಿ ಇಂದು ಬೆಳಗ್ಗೆ ಕಾಲ್ತುಳಿತ ಉಂಟಾಗಿ 12 ಭಕ್ತರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ದೇಗುಲದ ಗರ್ಭಗುಡಿಯ ಹೊರಭಾಗದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಪೊಲೀಸರು, ಇತರ ರಕ್ಷಣಾ ಪಡೆಗಳು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಇಂದು ಬೆಳಗ್ಗೆ ಸಾವಿರಾರು ಭಕ್ತರು ದೇಗುಲದಲ್ಲಿ ನೆರೆದಿದ್ದರು. ದೇವರ ದರ್ಶನಕ್ಕಾಗಿ ನಾ ಮುಂದು-ತಾ ಮುಂದು ಎಂದು ಮುನ್ನುಗ್ಗಲು ಯತ್ನಿಸಿದಾಗಿ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. ಅದಕ್ಕೆ ಸಂಬಂಧಪಟ್ಟ ಎರಡು ವಿಡಿಯೋಗಳೂ ವೈರಲ್ ಆಗುತ್ತಿವೆ. 

ಉನ್ನತ ಮಟ್ಟದ ತನಿಖೆಗೆ ಆದೇಶ
ವೈಷ್ಣೋದೇವಿ ದೇಗುಲದಲ್ಲಿ ನಡೆದ ಕಾಲ್ತುಳಿತ ಪ್ರಕರಣವನ್ನು ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್​ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಇದರ ತನಿಖೆ ಮಾಡಲು ಜಮ್ಮುವಿನ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ವಿಚಾರಣಾ ಸಮಿತಿ ರಚಿಸಲಾಗಿದ್ದು, ಎಡಿಜಿಪಿ, ಜಮ್ಮು ಮತ್ತು ವಿಭಾಗೀಯ ಆಯುಕ್ತರು ಇರಲಿದ್ದಾರೆ. ಘಟನೆ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಲೆಫ್ಟಿನಂಟ್ ಗವರ್ನರ್​, ವೈಷ್ಣೋದೇವಿ ದೇಗುಲದಲ್ಲಿ ನಡೆದ ದುರಂತದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿ ಮಾತನಾಡಿದ್ದೇನೆ. ನಮ್ಮ ಆಡಳಿತದಿಂದ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ನೀಡಲಾಗುತ್ತದೆ. ಹಾಗೇ, ಗಾಯಗೊಂಡವರ ಚಿಕಿತ್ಸೆಗೆ 2 ಲಕ್ಷ ರೂ.ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್​, ಗೃಹ ಸಚಿವ ಅಮಿತ್​ ಶಾ ಸೇರಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಹಲವು ಗಣ್ಯರು ಈ ದುರಂತದ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್​ ಅವರು ಕತ್ರಾದಲ್ಲಿರುವ ನರೈನಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ವೈಷ್ಣೋದೇವಿ ದೇಗುಲ ದುರಂತದಲ್ಲಿ ಗಾಯಗೊಂಡವರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನೆಲ್ಲ ಮಾತನಾಡಿಸಿದ್ದಾರೆ. ಈ ಆಸ್ಪತ್ರೆಗೆ ದಾಖಲಾಗಿರುವವರ ಆರೋಗ್ಯ ಸ್ಥಿರವಾಗಿದೆ. ಆರು ಮಂದಿ ಐಸಿಯುನಲ್ಲಿ ದಾಖಲಾಗಿದ್ದಾರೆ. ಇಬ್ಬರು ಈಗಾಗಲೇ ಡಿಸ್​ಚಾರ್ಜ್ ಆಗಿದ್ದಾರೆ. 4 ಮಂದಿ ಜನರಲ್​ ವಾರ್ಡ್​​ನಲ್ಲಿ ಇದ್ದಾರೆ. ಅವರು ನಾಳೆ-ನಾಡಿದ್ದು ಅಷ್ಟರಲ್ಲಿ ಡಿಸ್​ಚಾರ್ಜ್​ ಆಗಬಹುದು ಎಂದು ತಿಳಿಸಿದ್ದಾರೆ.  ಹಾಗೇ, ಮುಂದಿನ ದಿನಗಳಲ್ಲಿ ಇಂಥ ಅವಘಡಗಳು ಆಗದಂತೆ ತಡೆಯಲು, ಕೆಲವು ತಾಂತ್ರಿಕ ಕ್ರಮಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದೂ ಹೇಳಿದ್ದಾರೆ. ಹಾಗೇ, ಮೃತಪಟ್ಟವರು ಮತ್ತು ಗಾಯಗೊಂಡವರ ಹೆಸರಿನ ಪಟ್ಟಿಯನ್ನೂ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Vaishno Devi Temple Stampede: ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತ, 12 ಭಕ್ತರ ಸಾವು

Published On - 3:22 pm, Sat, 1 January 22