Vande Bharat Express: ಜಾನುವಾರಿಗೆ ಡಿಕ್ಕಿಯಾದ ಮೈಸೂರು – ಚೆನ್ನೈ ವಂದೇ ಭಾರತ್ ಎಕ್ಸ್​ಪ್ರೆಸ್​; ಹಾನಿ

| Updated By: Ganapathi Sharma

Updated on: Nov 18, 2022 | 11:49 AM

Vande Bharat Express; ಘಟನೆ ಬಳಿಕ ತುಸು ಹೊತ್ತು ಪ್ರಯಾಣ ಸ್ಥಗಿತಗೊಳಿಸಲಾಗಿತ್ತು. ಹಾನಿಯನ್ನು ಪರಿಶೀಲಿಸಿದ ಬಳಿಕ ಪ್ರಯಾಣ ಮುಂದುವರಿಸಿದ ರೈಲು ಚೆನ್ನೈ ತಲುಪಿತು ಎಂದು ಮೂಲಗಳು ಹೇಳಿವೆ.

Vande Bharat Express: ಜಾನುವಾರಿಗೆ ಡಿಕ್ಕಿಯಾದ ಮೈಸೂರು - ಚೆನ್ನೈ ವಂದೇ ಭಾರತ್ ಎಕ್ಸ್​ಪ್ರೆಸ್​; ಹಾನಿ
ವಂದೇ ಭಾರತ್ ಎಕ್ಸ್‌ಪ್ರೆಸ್ (ಸಂಗ್ರಹ ಚಿತ್ರ)
Image Credit source: India.com
Follow us on

ಬೆಂಗಳೂರು: ಚೆನ್ನೈ, ಮೈಸೂರು, ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್​​ ಎಕ್ಸ್​ಪ್ರೆಸ್ ರೈಲು (Vande Bharat Express train) ಜಾನುವಾರಿಗೆ ಡಿಕ್ಕಿ ಹೊಡೆದಿದ್ದು, ಮುಂಭಾಗಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ. ಈ ರೈಲಿಗೆ ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು. ತಮಿಳುನಾಡಿನ ಆರಕೋಣಂನಲ್ಲಿ ಗುರುವಾರ ಜಾನುವಾರು ರೈಲಿಗೆ ಅಡ್ಡ ಬಂದಿದ್ದು, ಡಿಕ್ಕಿಯಾಗಿದೆ. ಪರಿಣಾಮವಾಗಿ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ. ಜಾನುವಾರು ಮೃತಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ಸಂಭವಿಸಿದಾಗ ರೈಲು ಗಂಟೆಗೆ 90 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿತ್ತು ಎನ್ನಲಾಗಿದೆ.

ತಿರುವುಗಳು, ಘಾಟಿ ಪ್ರದೇಶ ಇರುವುದರಿಂದ ವಂದೇ ಭಾರತ್​​ ಎಕ್ಸ್​ಪ್ರೆಸ್ ರೈಲಿನ ಸರಾಸರಿ ವೇಗವನ್ನು ಗಂಟೆಗೆ 75ರಿಂದ 77 ಕಿಲೋ ಮೀಟರ್​​ಗೆ ಅಧಿಕಾರಿಗಳು ನಿಗದಿಪಡಿಸಿದ್ದರು. ಇದರಿಂದಾಗಿ ದೇಶದ ಐದು ಮಾರ್ಗಗಳಲ್ಲಿ ಸಂಚರಿಸುವ ವಂದೇ ಭಾರತ್​​ ಎಕ್ಸ್​ಪ್ರೆಸ್ ರೈಲುಗಳ ಪೈಕಿ ಚೆನ್ನೈ, ಮೈಸೂರು, ಬೆಂಗಳೂರು ಮಾರ್ಗದಲ್ಲಿ ಚಲಿಸುವ ರೈಲೇ ನಿಧಾನಗತಿಯದ್ದು ಎಂದು ಪರಿಗಣಿಸಲಾಗಿದೆ.

ಅಕ್ಟೋಬರ್ ನಂತರ ಐದನೇ ಘಟನೆ

ಘಟನೆ ಬಳಿಕ ತುಸು ಹೊತ್ತು ಪ್ರಯಾಣ ಸ್ಥಗಿತಗೊಳಿಸಲಾಗಿತ್ತು. ಹಾನಿಯನ್ನು ಪರಿಶೀಲಿಸಿದ ಬಳಿಕ ಪ್ರಯಾಣ ಮುಂದುವರಿಸಿದ ರೈಲು ಚೆನ್ನೈ ತಲುಪಿತು ಎಂದು ಮೂಲಗಳು ಹೇಳಿವೆ. ಅಕ್ಟೋಬರ್ ತಿಂಗಳ ಬಳಿಕ ದೇಶದಲ್ಲಿ ಸಂಭವಿಸಿದ ವಂದೇ ಭಾರತ್​​ ಎಕ್ಸ್​ಪ್ರೆಸ್ ರೈಲು ಅಪಘಾತದ ಐದನೇ ಪ್ರಕರಣ ಇದು ಎನ್ನಲಾಗಿದೆ.

ಜಾನುವಾರು ಮಾಲೀಕನ ವಿರುದ್ಧ ಕ್ರಮ ಎಂದ ಇಲಾಖೆ

ಜಾನುವಾರಿನ ಮಾಲೀಕನನ್ನು ಪತ್ತೆ ಮಾಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಭಾರಿ ಮೊತ್ತದ ದಂಡ ವಿಧಿಸಲಾಗುವುದು. ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಇದರಿಂದ ನೆರವಾಗಲಿದೆ ಎಂದು ದಕ್ಷಿಣ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಮುಂದಿನ ಐದಾರು ತಿಂಗಳುಗಳಲ್ಲಿ ರೈಲ್ವೆ ಹಳಿಗಳ ಸುಮಾರು 1,000 ಕಿಲೋ ಮೀಟರ್ ಉದ್ದಕ್ಕೂ ಕಾಂಪೌಂಡ್ ನಿರ್ಮಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಬುಧವಾರ ಘೋಷಿಸಿದ್ದರು. ಅಕ್ಟೋಬರ್ 1ರಿಂದ 9ನೇ ತಾರೀಖಿನ ಅವಧಿಯಲ್ಲಿ 200 ರೈಲುಗಳ ಸಂಚಾರಕ್ಕೆ ಹಳಿಗಳ ಮೇಲೆ ಬಂದ ದನಗಳಿಂದ ತೊಂದರೆಯಾಗಿತ್ತು. ಇದರಲ್ಲಿ ಇತ್ತೀಚೆಗಷ್ಟೇ ಸಂಚಾರ ಆರಂಭಿಸಿರುವ ‘ವಂದೇ ಭಾರತ್’ ಸೆಮಿ ಹೈಸ್ಪೀಡ್ ಎಕ್ಸ್​ಪ್ರೆಸ್​ ಸಹ ಸೇರಿತ್ತು. ಈ ವರ್ಷ ಜನವರಿಯಿಂದ ಈವರೆಗೆ ಸುಮಾರು 4,000 ರೈಲುಗಳಿಗೆ ಜಾನುವಾರುಗಳಿಂದ ತೊಂದರೆಯಾಗಿದೆ ಎಂದು ಇಲಾಖೆ ತಿಳಿಸಿತ್ತು. ಜತೆಗೆ, ಹಳಿಗಳ ಪಕ್ಕದಲ್ಲಿ ಬೇಲಿ ಹಾಕಲು ಚಿಂತನೆ ನಡೆಸಿರುವುದಾಗಿಯೂ ಹೇಳಿತ್ತು. ಇದರ ಬೆನ್ನಲ್ಲೇ ಸಚಿವರು ಹೇಳಿಕೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:47 am, Fri, 18 November 22