ದೆಹಲಿಗೆ ಹೊರಟ ಮಮತಾ ಬ್ಯಾನರ್ಜಿ; ಬಿಜೆಪಿಯ ಪ್ರಮುಖ ಸಂಸದರೊಬ್ಬರು ಟಿಎಂಸಿ ಸೇರ್ಪಡೆ
ಸದ್ಯಕ್ಕಂತೂ ದೇಶದಲ್ಲಿ ಬಿಜೆಪಿಗೆ ಕಾಂಗ್ರೆಸ್ಗಿಂತಲೂ ಪ್ರಬಲವಾಗಿ ಸ್ಪರ್ಧೆಯೊಡ್ಡುತ್ತಿರುವುದು ತೃಣಮೂಲ ಕಾಂಗ್ರೆಸ್ ಎಂಬುದರಲ್ಲಿ ಸಂಶಯವಿಲ್ಲ. 2024ರ ಲೋಕಸಭೆಯ ಚುನಾವಣೆಯಲ್ಲೂ ಬಿಜೆಪಿಗೆ ಟಿಎಂಸಿಯೇ ಸವಾಲೊಡ್ಡಬಲ್ಲ ಪಕ್ಷ ಎಂದೂ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಈಗೀಗ ಪಕ್ಷದ ವಿರುದ್ಧ ಕಟುವಾಗಿ ಮಾತನಾಡುತ್ತಿರುವ ವರುಣ್ ಗಾಂಧಿ (BJP MP Varun Gandhi) ಬಿಜೆಪಿಯನ್ನು ಬಿಡಲಿದ್ದಾರೆ ಎಂಬುದೊಂದು ಮಾತುಗಳು ಕೇಳಿಬರುತ್ತಿದೆ. ಉತ್ತರಪ್ರದೇಶದ ಸಂಸದ ವರುಣ್ ಗಾಂಧಿ ಬಿಜೆಪಿಯನ್ನು ತೊರೆದು, ಅದರ ಬದ್ಧ ವಿರೋಧ ಪಕ್ಷ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ. ಇನ್ನು ಟಿಎಂಸಿ ವಿಚಾರಕ್ಕೆ ಬಂದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಗೆದ್ದಿದ್ದೇ ಗೆದ್ದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಹಲವು ನಾಯಕರು ಈಗಾಗಲೇ ಆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಗೋವಾದಲ್ಲಿ, ಖ್ಯಾತ ಟೆನ್ನಿಸ್ ಆಟಗಾರನಾಗಿದ್ದ ಲಿಯಾಂಡರ್ ಪೇಸ್ ಕೂಡ ಇತ್ತೀಚೆಗಷ್ಟೇ ಟಿಎಂಸಿ ಸೇರಿಕೊಂಡಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮುಂದಿನ ವಾರ ದೆಹಲಿಗೆ ತೆರಳಲಿದ್ದಾರೆ. ದೀದಿಯವರ ಮುಂದಿನ ದೆಹಲಿ ಭೇಟಿ ತುಂಬ ಮಹತ್ವದ ವಿಚಾರಕ್ಕೆ ಎಂದು ಟಿಎಂಸಿಯ ನಾಯಕರೊಬ್ಬರು ಹೇಳಿಕೆ ನೀಡಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಬಿಜೆಪಿ ಮತ್ತು ಅದರ ಸಿದ್ಧಾಂತಗಳ ಬಗ್ಗೆ ಬೇಸರ ಗೊಂಡಿರುವ ಆ ಪಕ್ಷದ ನಾಯಕರು ಕಾಂಗ್ರೆಸ್ಗೆ ಹೋಗಲು ಮನಸು ಮಾಡುತ್ತಿಲ್ಲ. ಬದಲಿಗೆ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಬರಲು ಮುಂದಾಗುತ್ತಿದ್ದಾರೆ. ಈ ಸಂಬಂಧ ಮಮತಾ ಬ್ಯಾನರ್ಜಿಯವರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಟಿಎಂಸಿಯ ನಾಯಕರೊಬ್ಬರು ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇನ್ನು ಸದ್ಯಕ್ಕಂತೂ ದೇಶದಲ್ಲಿ ಬಿಜೆಪಿಗೆ ಕಾಂಗ್ರೆಸ್ಗಿಂತಲೂ ಪ್ರಬಲವಾಗಿ ಸ್ಪರ್ಧೆಯೊಡ್ಡುತ್ತಿರುವುದು ತೃಣಮೂಲ ಕಾಂಗ್ರೆಸ್ ಎಂಬುದರಲ್ಲಿ ಸಂಶಯವಿಲ್ಲ. 2024ರ ಲೋಕಸಭೆಯ ಚುನಾವಣೆಯಲ್ಲೂ ಬಿಜೆಪಿಗೆ ಟಿಎಂಸಿಯೇ ಸವಾಲೊಡ್ಡಬಲ್ಲ ಪಕ್ಷ ಎಂದೂ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಇತ್ತ ವರುಣ್ ಗಾಂಧಿ ವಿಷಯಕ್ಕೆ ಬರುವುದಾದರೆ, ಕೇಂದ್ರ ಬಿಜೆಪಿ ಸರ್ಕಾರವನ್ನು ವರುಣ್ ಗಾಂಧಿ ಪದೇಪದೆ ಟೀಕಿಸುತ್ತಲೇ ಇದ್ದಾರೆ. ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ನಿನ್ನೆ ಪ್ರಧಾನಿ ಮೋದಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಬೆನ್ನಲ್ಲೇ ಅವರಿಗೆ ದೀರ್ಘ ಪತ್ರವೊಂದನ್ನು ಬರೆದು, ಈ ಕೆಲಸ ಮೊದಲೇ ಮಾಡಿದ್ದರೆ 700ಕ್ಕೂ ಹೆಚ್ಚು ರೈತರು ಜೀವಬಿಡುವ ಸಂದರ್ಭ ಬರುತ್ತಿರಲಿಲ್ಲ ಎಂದಿದ್ದಾರೆ. ಈಗಾಗಲೇ ವರುಣ್ ಗಾಂಧಿ ಮತ್ತು ಅವರ ತಾಯಿ ಮನೇಕಾ ಗಾಂಧಿಯನ್ನು ಬಿಜೆಪಿ ಕಾರ್ಯಕಾರಿ ಸಮಿತಿಯಿಂದ ಕೈಬಿಡಿಸಲಾಗಿದೆ. ಹೀಗೆಲ್ಲ ಇರುವಾಗ ಅವರು ಬಿಜೆಪಿಯಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ ಎಂಬ ಅನುಮಾನ ಬಾರದೆ ಇರದು. ಇನ್ನು ವರುಣ್ ಗಾಂಧಿಯೊಟ್ಟಿಗೆ, ಜೆಡಿ(ಎಸ್)ನಿಂದ ಬಹುಜನ ಸಮಾಜ ಪಾರ್ಟಿ ಸೇರ್ಪಡೆಯಾಗಿದ್ದ ಕನ್ವರ್ ದನಿಶ್ ಅಲಿ ಕೂಡ ಟಿಎಂಸಿಗೆ ಸೇರಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದೇಶದಲ್ಲೇ ಸ್ವಚ್ಛ ನಗರಗಳಲ್ಲಿ ಮೈಸೂರಿಗೆ ಐದನೇ ಸ್ಥಾನ; ಪ್ರಶಸ್ತಿ ಸ್ವೀಕರಿಸಿದ ಸಚಿವ ಭೈರತಿ ಬಸವರಾಜ್
Published On - 4:36 pm, Sat, 20 November 21