ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಒಂದಲ್ಲ ಒಂದು ಟ್ರೆಂಡ್ ಸೃಷ್ಟಿಸುತ್ತಲೇ ಇದ್ದಾರೆ. ಮೊದಲು ಅವರ ಹೇರ್ಸ್ಟೈಲ್ ಟ್ರೆಂಡ್ ಆಗಿತ್ತು. ನಂತರ ಅವರ ಆಟದ ವಿಭಿನ್ನ ಶೈಲಿಯಿಂದ ಸುದ್ದಿಯಾದರು. ಹಾಗೇ.. ಆಗಸ್ಟ್ 15ರಂದೇ ನಿವೃತ್ತಿ ಘೋಷಿಸಿ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದರು.
ಇದೀಗ ಇನ್ನೊಂದು ಕಾರಣಕ್ಕೆ ಎಂ.ಎಸ್. ಧೋನಿ ಮತ್ತೆ ಸುದ್ದಿಯಾಗಿದ್ದಾರೆ. ನಿವೃತ್ತಿ ಬಳಿಕ ಧೋನಿ ರಾಂಚಿಯ ತಮ್ಮ ಫಾರ್ಮ್ಹೌಸ್ನಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿರುವುದು ಹಳೇ ಸುದ್ದಿ. ಆದರೆ ಈಗ ಅವರು ಬೆಳೆದ ತರಕಾರಿ ಶೀಘ್ರವೇ ದುಬೈಗೆ ರಫ್ತಾಗಲಿದೆ ಎಂಬುದು ಹೊಸ ಸುದ್ದಿ.. !
ರಾಂಚಿಯಲ್ಲಿ 43 ಎಕರೆ ಪ್ರದೇಶದಲ್ಲಿ ಫಾರ್ಮ್ಹೌಸ್ ಹೊಂದಿರುವ ಧೋನಿ, ಸುಮಾರು 10 ಎಕರೆ ಜಾಗದಲ್ಲಿ ವಿವಿಧ ಹಣ್ಣು, ತರಕಾರಿಗಳನ್ನು ಬೆಳೆದಿದ್ದಾರೆ. ಅದರಲ್ಲಿ ಕ್ಯಾಬೇಜ್, ಟೊಮ್ಯಾಟೋ, ಬಟಾಣಿ, ಕೋಸುಗಡ್ಡೆ ಸ್ಟ್ರಾಬೆರಿಹಣ್ಣು, ಪಪ್ಪಾಯಾಗಳು ಪ್ರಮುಖವಾಗಿವೆ. ಧೋನಿ ಫಾರ್ಮ್ಹೌಸ್ನಲ್ಲಿ ಬೆಳೆದ ಕ್ಯಾಬೇಜ್, ಬಟಾಣಿ ಮತ್ತು ಟೊಮ್ಯಾಟೋಗಳಿಗೆ ರಾಂಚಿ ಸ್ಥಳೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ.
ಜಾಗತಿಕ ಮಾರುಕಟ್ಟೆ ಪ್ರವೇಶಕ್ಕೆ ಸಿದ್ಧತೆ
ಇಷ್ಟುದಿನ ಸ್ಥಳೀಯವಾಗಿ ತಮ್ಮ ತರಕಾರಿ, ಹಣ್ಣು ಮಾರಾಟ ಮಾಡುತ್ತಿದ್ದ ಧೋನಿ ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಧೋನಿ ಬೆಳೆದ ಸಾವಯವ ತರಕಾರಿಗಳು ದುಬೈಗೆ ರಫ್ತಾಗಲಿವೆ.. ಫಾರ್ಮ್ ಫ್ರೆಶ್ ಏಜೆನ್ಸಿ (Farm Fresh Agency) ಧೋನಿ ಫಾರ್ಮ್ಹೌಸ್ನ ತರಕಾರಿ, ಹಣ್ಣುಗಳನ್ನು ಯುಎಇದಲ್ಲಿ ಮಾರಾಟ ಮಾಡಲು ಒಪ್ಪಿಕೊಂಡಿದೆ. ಬರೀ ದುಬೈ ಮಾತ್ರವಲ್ಲ.. ಇನ್ನಿತರ ಗಲ್ಫ್ ರಾಷ್ಟ್ರಗಳಿಗೂ ಮಾರಾಟ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ವೈರಲ್ ಆಗುತ್ತಿದೆ.
ಅಷ್ಟೇ ಅಲ್ಲ, ಧೋನಿ ಫಾರ್ಮ್ಹೌಸ್ನ ತಾಜಾ ತರಕಾರಿ, ಹಣ್ಣುಗಳನ್ನು ರಾಂಚಿಯಿಂದ ಯುಎಇಗೆ ಕಳಿಸುವ ಹೊಣೆಯನ್ನು ಝಾರ್ಕಂಡ್ ಕೃಷಿ ಇಲಾಖೆ ವಹಿಸಿಕೊಂಡಿದ್ದಾಗಿಯೂ ಮಾಹಿತಿ ಲಭ್ಯವಾಗಿದ್ದು, ಕೆಲವು ಮಾಧ್ಯಮಗಳೂ ವರದಿ ಮಾಡಿವೆ. ಮಹೇಂದ್ರ ಸಿಂಗ್ ಧೋನಿ ಫಾರ್ಮ್ ಹೌಸ್ ರಾಂಚಿಯ ಸೆಂಬೋ ಗ್ರಾಮದ ರಿಂಗ್ರೋಡ್ನಲ್ಲಿ ಇದೆ.