Vice President Election: ಸೆಪ್ಟೆಂಬರ್ 9ರಂದು ಉಪ ರಾಷ್ಟ್ರಪತಿ ಚುನಾವಣೆ, ಮತದಾನ ಪ್ರಕ್ರಿಯೆ ಬಗ್ಗೆ ತರಬೇತಿ

ಉಪರಾಷ್ಟ್ರಪತಿ ಚುನಾವಣೆ(Vice President Election)ಯು ಸೆಪ್ಟೆಂಬರ್ 09ರಂದು ನಡೆಯಲಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಹಾಗೂ ಇಂಡಿ ಒಕ್ಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾ. ಬಿ ಸುದರ್ಶನ್ ರೆಡ್ಡಿ ಕಣದಲ್ಲಿದ್ದಾರೆ. ರಾಧಾಕೃಷ್ಣನ್ ತಮಿಳುನಾಡಿನವರಾಗಿದ್ದರೆ, ರೆಡ್ಡಿ ತೆಲಂಗಾಣದವರಾಗಿರುವುದರಿಂದ ಉಪರಾಷ್ಟ್ರಪತಿ  ಸ್ಥಾನಕ್ಕೆ ದಕ್ಷಿಣದವರ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ. ಇಂದು ಮತದಾನ ಪ್ರಕ್ರಿಯೆ ಕುರಿತು ತರಬೇತಿ ನೀಡಲಾಗುತ್ತಿದೆ

Vice President Election: ಸೆಪ್ಟೆಂಬರ್ 9ರಂದು ಉಪ ರಾಷ್ಟ್ರಪತಿ ಚುನಾವಣೆ, ಮತದಾನ ಪ್ರಕ್ರಿಯೆ ಬಗ್ಗೆ ತರಬೇತಿ
ರಾಧಾಕೃಷ್ಣನ್ -ಸುದರ್ಶನ್

Updated on: Sep 08, 2025 | 11:48 AM

ನವದೆಹಲಿ, ಸೆಪ್ಟೆಂಬರ್ 08: ಉಪರಾಷ್ಟ್ರಪತಿ ಚುನಾವಣೆ(Vice President Election)ಯು ಸೆಪ್ಟೆಂಬರ್ 09ರಂದು ನಡೆಯಲಿದೆ.  ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಹಾಗೂ ಇಂಡಿ ಒಕ್ಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾ. ಬಿ ಸುದರ್ಶನ್ ರೆಡ್ಡಿ ಕಣದಲ್ಲಿದ್ದಾರೆ. ರಾಧಾಕೃಷ್ಣನ್ ತಮಿಳುನಾಡಿನವರಾಗಿದ್ದರೆ, ರೆಡ್ಡಿ ತೆಲಂಗಾಣದವರಾಗಿರುವುದರಿಂದ ಉಪರಾಷ್ಟ್ರಪತಿ  ಸ್ಥಾನಕ್ಕೆ ದಕ್ಷಿಣದವರ ನಡುವೆಯೇ ಪೈಪೋಟಿ ಏರ್ಪಟ್ಟಿದೆ. ಇಂದು ಮತದಾನ ಪ್ರಕ್ರಿಯೆ ಕುರಿತು ತರಬೇತಿ ನೀಡಲಾಗುತ್ತಿದೆ.

ಬಿಜೆಪಿ ನಾಯಕ ಮತ್ತು ಪ್ರಸ್ತುತ ಮಹಾರಾಷ್ಟ್ರದ ರಾಜ್ಯಪಾಲರಾಗಿರುವ ರಾಧಾಕೃಷ್ಣನ್, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನೊಂದಿಗೆ ದೀರ್ಘಕಾಲದಿಂದ ಸಂಬಂಧ ಹೊಂದಿದ್ದಾರೆ ಮತ್ತು 2004 ರಿಂದ 2007 ರವರೆಗೆ ತಮಿಳುನಾಡಿನಲ್ಲಿ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಸುದರ್ಶನ್ ರೆಡ್ಡಿ, ನೈತಿಕ ಜವಾಬ್ದಾರಿ ಮತ್ತು ರಾಷ್ಟ್ರದ ಮೇಲಿನ ಪ್ರೀತಿಯಿಂದ ವರ್ತಿಸುವಂತೆ ಸಂಸದರಿಗೆ ಮನವಿ ಮಾಡಿದ್ದಾರೆ. ಉಪರಾಷ್ಟ್ರಪತಿಯನ್ನು ಲೋಕಸಭೆ ಮತ್ತು ರಾಜ್ಯಸಭೆ ಎರಡರ ಸದಸ್ಯರೂ ಆಯ್ಕೆ ಮಾಡುತ್ತಾರೆ.

ಸಂಸದರು ತಮ್ಮ ಮತಗಳನ್ನು ಸರಿಯಾಗಿ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ತಾಂತ್ರಿಕ ದೋಷಗಳನ್ನು ತಪ್ಪಿಸಲು ತರಬೇತಿ ನೀಡಲು ಪ್ರಾರಂಭಿಸಿದೆ. ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದವರಿಗೆ ಮತದಾನ ಪ್ರಕ್ರಿಯೆಯಲ್ಲಿ ಸಂಪೂರ್ಣ ತರಬೇತಿ ನೀಡಲಾಗುತ್ತದೆ ಮತ್ತು ರಹಸ್ಯ ಮತಪತ್ರಗಳನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಕಲಿಸಲಾಗುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ಓದಿ:  ಉಪರಾಷ್ಟ್ರಪತಿ ಚುನಾವಣೆಗೆ ಸಿಪಿ ರಾಧಾಕೃಷ್ಣನ್​​ ಎನ್​ಡಿಎ ಅಭ್ಯರ್ಥಿ

ಚುನಾವಣಾ ಕಾಲೇಜು ಲೋಕಸಭೆ ಹಾಗೂ ರಾಜ್ಯಸಭೆ ಸೇರಿ ಸಂಸತ್ತಿನ ಎರಡೂ ಸದನಗಳ ಸದಸ್ಯರನ್ನು ಹೊಂದಿದೆ. ಏಕ ವರ್ಗಾವಣೆ ಮತದ ಮೂಲಕ ಪ್ರಮಾಣಾನುಗುಣ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಗುಣವಾಗಿ ಚುನಾವಣೆಯನ್ನು ನಡೆಸಲಾಗುತ್ತದೆ. ಈ ವೇಳೆ ಗುಪ್ತ ಮತದಾನದ ಮೂಲಕ ಮತದಾನ ನಡೆಯುತ್ತದೆ. ರಾಜ್ಯಸಭೆಯ 233 ಚುನಾಯಿತ ಸದಸ್ಯರು, ರಾಜ್ಯಸಭೆಯ 12 ನಾಮನಿರ್ದೇಶಿತ ಸದಸ್ಯರು ಮತ್ತು ಲೋಕಸಭೆಯ 543 ಚುನಾಯಿತ ಸದಸ್ಯರು. ಚುನಾವಣಾ ಕಾಲೇಜು ಸಂಸತ್ತಿನ ಉಭಯ ಸದನಗಳ ಒಟ್ಟು 788 ಸದಸ್ಯರನ್ನು ಒಳಗೊಂಡಿದೆ.

ಆಗಸ್ಟ್ 17 ರಂದು ನಡೆದ ಉಪ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಮೊದಲು ಘೋಷಿಸಿದ ಎನ್‌ಡಿಎ, ಅಂದಿನಿಂದ ತನ್ನ ಅಭ್ಯರ್ಥಿ ಸಿ ಪಿ ರಾಧಾಕೃಷ್ಣನ್ ಅವರ ಗೆಲುವಿಗೆ ತನ್ನ ಸಂಸದರೊಂದಿಗೆ ಮಾತುಕತೆಯಲ್ಲಿ ತೊಡಗಿದೆ.

ಎಲ್ಲಾ ಮತದಾರರು ಸಂಸತ್ತಿನ ಉಭಯ ಸದನಗಳ ಸದಸ್ಯನಾಗಿ ಇರುವುದರಿಂದ, ಪ್ರತಿಯೊಬ್ಬ ಸದಸ್ಯರ ಮತದ ಮೌಲ್ಯವು ಒಂದೇ ಆಗಿರುತ್ತದೆ. ಅಂದರೆ 1 (ಒಂದು) ಎಂದು ಚುನಾವಣಾ ಆಯೋಗ ಹೇಳಿದೆ. ಸಂವಿಧಾನದ ಪರಿಚ್ಛೇದ 66 (1) ರ ಪ್ರಕಾರ, ಒಂದೇ ಬಾರಿ ವರ್ಗಾವಣೆ ಮಾಡಬಹುದಾದ ಮತದ ಮೂಲಕ ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಗುಣವಾಗಿ ಚುನಾವಣೆಯನ್ನು ನಡೆಸಬೇಕು. ಅಂತಹ ಚುನಾವಣೆಯಲ್ಲಿ ಮತದಾನವು ರಹಸ್ಯ ಮತದಾನದ ಮೂಲಕ ನಡೆಯುತ್ತದೆ.

ಜುಲೈ 21ರಂದು ಜಗದೀಪ್ ಧನ್ಖರ್ ಹಠಾತ್ ರಾಜೀನಾಮೆ ನೀಡಿದ್ದರು. ಒಬ್ಬ ವ್ಯಕ್ತಿಯು ಕೇಂದ್ರ ಸರ್ಕಾರ ಅಥವಾ ರಾಜ್ಯಗಳ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿದ್ದರೆ ಅವರು ಸ್ಪರ್ಧಿಸಲು ಅರ್ಹರಾಗಿರುವುದಿಲ್ಲ. ಒಂದು ವೇಳೆ ಮರಣ, ರಾಜೀನಾಮೆ ಅಥವಾ ತೆಗೆದುಹಾಕುವಿಕೆ ಅಥವಾ ಇನ್ಯಾವುದೇ ಕಾರಣಗಳಿಂದ ಖಾಲಿ ಹುದ್ದೆ ಇದ್ದರೆ, ಆ ಖಾಲಿ ಸ್ಥಾನವನ್ನು ತುಂಬಲು ಚುನಾವಣೆ ನಡೆಯುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ