ವಿಜಯ್ ರ್ಯಾಲಿ ಕಾಲ್ತುಳಿತದಿಂದ 36 ಜನ ಸಾವು; ನ್ಯಾಯಾಂಗ ತನಿಖೆಗೆ ತಮಿಳುನಾಡು ಸರ್ಕಾರ ಆದೇಶ

ತಮಿಳುನಾಡಿನ ಕರೂರ್​​ನಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ರ್ಯಾಲಿ ನಡೆಸುತ್ತಿದ್ದಾಗ ಕಾಲ್ತುಳಿತ ಉಂಟಾಗಿ 36 ಜನರು ಮೃತಪಟ್ಟಿದ್ದಾರೆ. ಈ ಪ್ರಕರಣದ ಕುರಿತು ತಮಿಳುನಾಡು ಸಿಎಂ ಸ್ಟಾಲಿನ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಹಾಗೇ, ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂ. ನೆರವು ಘೋಷಿಸಿದ್ದಾರೆ. ಇಂದು ರಾತ್ರಿ ಸಿಎಂ ಸ್ಟಾಲಿನ್ ಕರೂರ್​​ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.

ವಿಜಯ್ ರ್ಯಾಲಿ ಕಾಲ್ತುಳಿತದಿಂದ 36 ಜನ ಸಾವು; ನ್ಯಾಯಾಂಗ ತನಿಖೆಗೆ ತಮಿಳುನಾಡು ಸರ್ಕಾರ ಆದೇಶ
Cm Stalin

Updated on: Sep 27, 2025 | 11:28 PM

ಕರೂರ್, ಸೆಪ್ಟೆಂಬರ್ 27: ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ಬೃಹತ್ ರ್ಯಾಲಿಯಲ್ಲಿ ಕಾಲ್ತುಳಿತ (Tamil Nadu Stampede) ಸಂಭವಿಸಿ 8 ಮಕ್ಕಳು ಮತ್ತು 16 ಮಹಿಳೆಯರು ಸೇರಿದಂತೆ 36 ಜನರು ಸಾವನ್ನಪ್ಪಿದ್ದಾರೆ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ. ಈ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಸಿಎಂ ಸ್ಟಾಲಿನ್ ಆದೇಶಿಸಿದ್ದಾರೆ. ಹಾಗೇ ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಸಹಾಯಧನವನ್ನು ಘೋಷಿಸಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರ ಕೂಡ ಈ ಘಟನೆಯ ವಿವರವಾದ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಕರೂರಿನಲ್ಲಿ ತಮಿಳಗಾ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಮತ್ತು ನಟ ವಿಜಯ್ ಅವರ ರಾಜಕೀಯ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ರೂ. ಮತ್ತು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಜನರಿಗೆ 1 ಲಕ್ಷ ರೂ. ಪರಿಹಾರವನ್ನು ಅವರು ಘೋಷಿಸಿದ್ದಾರೆ. ಎಲ್ಲಾ ಆಸ್ಪತ್ರೆಗಳು ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ಒದಗಿಸುವಂತೆ ಸ್ಟಾಲಿನ್ ನಿರ್ದೇಶನ ನೀಡಿದ್ದಾರೆ. ಸಚಿವರು ಮತ್ತು ಜಿಲ್ಲಾ ಅಧಿಕಾರಿಗಳು ಕರೂರ್‌ಗೆ ಧಾವಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನ ಕಾಲ್ತುಳಿತ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ; ಕರೂರಿಗೆ ನಾಳೆ ಸಿಎಂ ಸ್ಟಾಲಿನ್ ಭೇಟಿ

ಈ ದುರಂತ ಘಟನೆಯ ತನಿಖೆಗಾಗಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶೆ ಅರುಣಾ ಜಗದೀಶನ್ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದರು. “ಈ ಆಘಾತಕಾರಿ ಸುದ್ದಿ ಕೇಳಿ ನನಗೆ ತೀವ್ರ ನೋವು ಮತ್ತು ದುಃಖವಾಗಿದೆ. ಜೀವಹಾನಿ ನಮ್ಮ ರಾಜ್ಯದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿದೆ. ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ವಿಜಯ್ ರ್ಯಾಲಿ ವೇಳೆ ಕಾಲ್ತುಳಿತ; 31 ಜನ ಸಾವು

“ದುಃಖಿತ ಕುಟುಂಬಗಳಿಗೆ ಸಾಂತ್ವನ ಹೇಳಲು ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಲು ನಾನು ಇಂದು ರಾತ್ರಿ ಕರೂರ್‌ಗೆ ವೈಯಕ್ತಿಕವಾಗಿ ಭೇಟಿ ನೀಡುತ್ತೇನೆ” ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ