ಗುಜರಾತ್ನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಗೆ ಒಂದೇ ವರ್ಷ ಬಾಕಿ ಇರುವಂತೆ ಇಂದು (ಸಪ್ಟೆಂಬರ್ 11) ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ದಿಢೀರ್ ಆಗಿ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಯಾವುದೇ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ಕಟು ನಿರ್ಧಾರ ತೆಗೆದುಕೊಳ್ಳುವುದು ಕಳೆದ ಕೆಲವು ಉದಾಹರಣೆಗಳಿಂದ ತಿಳಿದುಬಂದಿದೆ. ಉತ್ತರಾಖಂಡ್, ಕರ್ನಾಟಕದ ಬಳಿಕ ಗುಜರಾತ್ನಲ್ಲಿ ಇಂತಹ ಬೆಳವಣಿಗೆ ಕಂಡುಬಂದಿದೆ. ಬಿಜೆಪಿ ಹೈಕಮಾಂಡ್ ದಿಢೀರ್ ರಾಜಕೀಯ ಸಂಚಲನ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಬಿಜೆಪಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಗುಜರಾತ್ನಲ್ಲಿ ಪ್ರಬಲವಾಗಿರುವ ಪಾಟೀದಾರ್ ಸಮುದಾಯದ ಓಲೈಕೆಗೆ ಅದೇ ಸಮುದಾಯದ ನಾಯಕರನ್ನು ಮುಖ್ಯಮಂತ್ರಿ ಹುದ್ದೆಗೆ ನೇಮಿಸುವ ಚಿಂತನೆಯಲ್ಲಿ ಬಿಜೆಪಿ ಇದೆ. ಜಾತಿ ಆಧಾರಿತ ಮತ ಗಳಿಕೆ, ಸಮುದಾಯದ ನಾಯಕತ್ವ, ಆ ಮೂಲಕ ಚುನಾವಣೆ ಗೆಲ್ಲುವ, ವಿಪಕ್ಷಗಳನ್ನು ಮಟ್ಟಹಾಕುವ ತಂತ್ರವನ್ನು ಬಿಜೆಪಿ ಚುರುಕಾಗಿ ಹೆಣೆಯುತ್ತಿದೆ.
ಬಿಜೆಪಿ ಲೆಕ್ಕಾಚಾರ ಏನು?
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 182 ಸ್ಥಾನಗಳ ಪೈಕಿ ಬಿಜೆಪಿ ಸುಮಾರು 120 ರಷ್ಟು ಸ್ಥಾನಗಳನ್ನು ಗೆಲ್ಲುವ ಉತ್ಸಾಹದಲ್ಲಿತ್ತು. ಆದರೆ, ಅಂತಿಮವಾಗಿ ಬಿಜೆಪಿ ಕೇವಲ 99 ಸ್ಥಾನಗಳನ್ನು ಗೆದ್ದಿತ್ತು. ಎರಡನೇ ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ 78 ಸ್ಥಾನಗಳನ್ನು ಗೆದ್ದಿತ್ತು. ಇದೀಗ, ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗರಿಷ್ಠ ಸ್ಥಾನ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ. ಅದಕ್ಕಾಗಿ ತಯಾರಿ ನಡೆಸುತ್ತಿದೆ.
ಗುಜರಾತ್ನಲ್ಲಿ ಪಾಟೀದಾರ್ ಎಂಬುದು ಅತಿ ಬಲಿಷ್ಠ ಸಮುದಾಯವಾಗಿದೆ. ರಾಜ್ಯಾದ್ಯಂತ ಸುಮಾರು ಶೇಕಡಾ 20 ರಷ್ಟು ಪಾಟೀದಾರ್ ಜನರಿದ್ದಾರೆ. ಹಾಗೂ ಇದುವರೆಗೆ ಮುಖ್ಯಮಂತ್ರಿ ಆಗಿದ್ದ ವಿಜಯ್ ರೂಪಾನಿ ಜೈನ್ ಸಮುದಾಯಕ್ಕೆ ಸೇರಿದವರು. ಜೈನ್ ಸಮುದಾಯದ ಜನರು ಗುಜರಾತ್ನಲ್ಲಿ ಸುಮಾರು ಶೇಕಡಾ 8 ರಷ್ಟು ಮಾತ್ರ ಇದ್ದಾರೆ. ಜೈನ್ ಸಮುದಾಯವು ಬಿಜೆಪಿಗೆ ಪರವಾಗಿ ಇರುತ್ತಾರೆ ಎಂಬ ನಂಬಿಕೆಯಿಂದ ಮತ್ತು ಪಾಟೀದಾರ್ ಸಮುದಾಯ ಬಿಜೆಪಿಗೆ ತಿರುಗಿಬೀಳುವ ಸಾಧ್ಯತೆಯೂ ಇರುವುದರಿಂದ ಬಿಜೆಪಿ ಈ ಜಾಣ ನಡೆ ತೆಗೆದುಕೊಂಡಿದೆ. ಜೈನ್ ಸಮುದಾಯದ ನಾಯಕನನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಮುಂದೆ ಪಾಟೀದಾರ್ ಪಂಗಡದ ನಾಯಕನನ್ನು ಸಿಎಂ ಮಾಡುವ ಸಾಧ್ಯತೆ ದಟ್ಟವಾಗಿ ಕಂಡುಬಂದಿದೆ.
ಅಂಜನಾ, ಕಡವಾ ಮತ್ತು ಲೇವಾ ಎಂಬ ಮೂರು ಉಪಪಂಗಡಗಳನ್ನು ಹೊಂದಿರುವ ಪಾಟೀದಾರ್ ಸಮುದಾಯವು ಗುಜರಾತ್ನ ಪ್ರಬಲ ಮತ ಬ್ಯಾಂಕ್ ಆಗಿದೆ. ಉತ್ತರ ಗುಜರಾತ್ ಭಾಗದಲ್ಲಿ ಕಡವಾ ಹಾಗೂ ರಾಜಕೋಟ್, ಸೌರಾಷ್ಟ್ರ ಭಾಗದಲ್ಲಿ ಲೇವಾ ಪಾಟೀದಾರ್ಗಳು ಪ್ರಬಲರಾಗಿದ್ದಾರೆ. ಈ ಸಮುದಾಯಗಳಿಗೆ ಸೇರಿದ ಕೆಲ ನಾಯಕರ ಹೆಸರುಗಳು ಮುಂದಿನ ಮುಖ್ಯಮಂತ್ರಿ ಎಂದು ಬಲವಾಗಿ ಕೇಳಿಬರುತ್ತಿದೆ.
ಕಾಂಗ್ರೆಸ್ಗೆ ಸೆಡ್ಡು ಹೊಡೆಯಲು ಈ ತಂತ್ರ?
ಗುಜರಾತ್ ರಾಜ್ಯ ರಾಜಕೀಯ ಇತಿಹಾಸ ಗಮನಿಸಿದರೆ ಈ ಮೊದಲಿನ ಅವಧಿಯಲ್ಲಿ ಕೂಡ ಬಹುತೇಕ ಪಟೇಲ್ ಸಮುದಾಯಕ್ಕೆ ಸೇರಿದ ನಾಯಕರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವುದು ಕಂಡುಬರುತ್ತದೆ. ಆನಂದಿಬೆನ್ ಪಟೇಲ್, ಕೆಶುಭಾಯಿ ಪಟೇಲ್ ಸಹಿತ ಹಲವು ಪಾಟೀದಾರ್ ನಾಯಕರು ಆಡಳಿತ ನಡೆಸಿದ್ದಾರೆ. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಸಮುದಾಯ ಇದ್ದಂತೆ ಗುಜರಾತ್ ರಾಜಕೀಯ ವಲಯದಲ್ಲಿ ಪಾಟೀದಾರ್ ಸಮುದಾಯ ಬಲಿಷ್ಠವಾಗಿರುವುದು ತಿಳಿದು ಬರುತ್ತದೆ. ಈ ಪಂಗಡಕ್ಕೆ ಸೇರದೆಯೂ ಗುಜರಾತ್ನ ಪ್ರಮುಖ ನಾಯಕರು ಎನಿಸಿಕೊಂಡವರು ನರೇಂದ್ರ ಮೋದಿ. ಅವರ ಹೊರತಾಗಿ ಮತ್ತೆ ಇತರೆ ಸಮುದಾಯದ ನಾಯಕರು ಅಷ್ಟು ಎತ್ತರಕ್ಕೆ ಬೆಳೆದಿಲ್ಲ.
ಇತ್ತ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರ ವಹಿಸಬೇಕು ಎಂದು ಹೊಂಚುಹಾಕುತ್ತಿದೆ. ಕಾಂಗ್ರೆಸ್ ಪಾಟೀದಾರ್ ಸಮುದಾಯದ ಮತಗಳಿಕೆ ತಂತ್ರ ಹೆಣೆಯುವಲ್ಲಿಯೂ ಹಿಂದೆ ಬಿದ್ದಿಲ್ಲ. ಸುಮಾರು 2015 ನೇ ಇಸವಿಯಿಂದ ಗುಜರಾತ್ ರಾಜ್ಯಾದ್ಯಂತ ಪಾಟೀದಾರ್ ಸಮುದಾಯದ ಪರ ಹೋರಾಟಗಳನ್ನು ನಡೆಸಿ, ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಚಳವಳಿ ನಡೆಸಿದ 28 ವರ್ಷದ ತರುಣನಾಯಕ ಹಾರ್ದಿಕ್ ಪಟೇಲ್ ಸದ್ಯ ಗುಜರಾತ್ ಕಾಂಗ್ರೆಸ್ನ ವರ್ಕಿಂಗ್ ಪ್ರೆಸಿಡೆಂಟ್ ಆಗಿದ್ದಾರೆ. ಅವರ ಇರುವಿಕೆ ಕಾಂಗ್ರೆಸ್ಗೆ ಚುನಾವಣೆ ಎದುರಿಸಲು ಬಹಳಷ್ಟು ಬಲತುಂಬಿದೆ. ಹೀಗಾಗಿ ಚುನಾವಣೆ ಎದುರಿಸಲು ಮತ್ತೊಬ್ಬ ಪಾಟೀದಾರ್ ಸಮುದಾಯದ ನಾಯಕನ ನೇತೃತ್ವ ಬಿಜೆಪಿಗೆ ಅನಿವಾರ್ಯವಾಗಿ ಕಂಡಿದೆ.
ಮುಂದಿನ ಮುಖ್ಯಮಂತ್ರಿ ಯಾರು?
ಗುಜರಾತ್ ಸಿಎಂ ವಿಜಯ್ ರೂಪಾನಿ ರಾಜೀನಾಮೆ ನೀಡಿರುವ ಬೆನ್ನಲ್ಲಿ ಗುಜರಾತ್ ಸಿಎಂ ರೇಸ್ನಲ್ಲಿ ಎರಡು ಹೆಸರು ಮುಂಚೂಣಿಗೆ ಬಂದಿದೆ. ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯಾ, ಪುರುಷೋತ್ತಮ್ ರೂಪಾಲ ಹಾಗೂ ಲೇವಾ ಪಾಟೀದಾರ್ ಸಮುದಾಯದ ಆರ್ಸಿ ಫಾಲ್ಡು ಹೆಸರುಗಳು ಗುಜರಾತ್ ಸಿಎಂ ರೇಸ್ನಲ್ಲಿ ಕೇಳಿಬಂದಿದೆ. ಉಪಮುಖ್ಯಮಂತ್ರಿ ಆಗಿದ್ದ ನಿತಿನ್ ಪಟೇಲ್ ಕೂಡ ಮುಖ್ಯಮಂತ್ರಿ ಆಗಬಹುದು ಎನ್ನಲಾಗುತ್ತಿದೆ. ಇವರೆಲ್ಲರೂ ಪಾಟೀದಾರ್ ಸಮುದಾಯಕ್ಕೆ ಸೇರಿದ ನಾಯಕರು.
ಕರ್ನಾಟಕ ಮಾದರಿಯ ಜಾತಿ ಲೆಕ್ಕಾಚಾರ
ಗುಜರಾತ್ನಲ್ಲೂ ಕರ್ನಾಟಕ ಮಾದರಿಯ ಜಾತಿ ಲೆಕ್ಕಾಚಾರವನ್ನು ಕಾಣಬಹುದು. ಈ ಮೊದಲು ಕರ್ನಾಟಕದಲ್ಲಿ ಅಹಿಂದ ಸಂಘಟನೆ, ಹೋರಾಟದ ಮೂಲಕ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದರು. ಬಳಿಕ, ಬಿಜೆಪಿ ಅಧಿಕಾರ ವಹಿಸಿ ಲಿಂಗಾಯತ ಸಮುದಾಯವನ್ನು ಪ್ರಬಲ ವೋಟ್ ಬ್ಯಾಂಕ್ ಆಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಯಡಿಯೂರಪ್ಪ ನಂತರ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಅದೇ ರೀತಿ ಗುಜರಾತ್ನಲ್ಲಿ ಕಾಂಗ್ರೆಸ್ನ ಮಾಧವ್ ಸಿಂಗ್ ಸೋಲಂಖಿ ನಾಯಕತ್ವದಲ್ಲಿ ಕ್ಷತ್ರಿಯ, ಆದಿವಾಸಿ, ಮುಸ್ಲಿಂ ಸಮುದಾಯದ ವೋಟ್ ಬ್ಯಾಂಕ್ ಮೂಲಕ ಕಾಂಗ್ರೆಸ್ ಅಧಿಕಾರ ವಹಿಸುತ್ತಿತ್ತು. ಈಗ ಮತ್ತೆ ಪಟೇಲ್ ಸಮುದಾಯದ ಮತ ಬ್ಯಾಂಕ್ ವಿಚಾರ ಮುನ್ನೆಲೆಗೆ ಬಂದಿದೆ. ಪಾಟೀದಾರ್ ಜನರ ವೋಟ್ ಕಾಂಗ್ರೆಸ್ ಪಾಲಾಗದಂತೆ ಬಿಜೆಪಿ ಜಾಗ್ರತೆ ವಹಿಸಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಬಿಜೆಪಿ ಹೊಸ ಮುಖ್ಯಮಂತ್ರಿಗೆ ಅಧಿಕಾರ ನೀಡುವ ತಂತ್ರ ಹೆಣೆದಿದೆ.
ಇದನ್ನೂ ಓದಿ: Gujarat CM Resigns: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ
ಇದನ್ನೂ ಓದಿ: Vijay Rupani Profile: ಗುಜರಾತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಜಯ್ ರೂಪಾನಿ ಯಾರು?
Published On - 4:37 pm, Sat, 11 September 21