ಉತ್ತರಕಾಶಿ ನವೆಂಬರ್ 23: ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarkashi)ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ-ಬಾರ್ಕೋಟ್ ಸುರಂಗದೊಳಗೆ (Uttarakhand tunnel collapse) ಸಿಲುಕಿರುವ 41 ಕಟ್ಟಡ ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಗಳು ಭರದಿಂದ ನಡೆಯುತ್ತಿವೆ. ಈ ಹೊತ್ತಿನಲ್ಲೇ ಸಮೀಪದ ಗ್ರಾಮಗಳ ಸ್ಥಳೀಯರು ಸ್ಥಳೀಯ ದೇವತೆಯ ‘ಡೋಲಿ’ (ಪಲ್ಲಕ್ಕಿ) ಅನ್ನು ಹೊತ್ತುಕೊಂಡು ಬಂದು ಸಂತ್ರಸ್ತರ ಸುರಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಸ್ಥಳೀಯರ ಗುಂಪು ‘ಡೋಲಿ’ಯನ್ನು ಹೊತ್ತುಕೊಂಡು ‘ಧೋಲ್’ ಮತ್ತು ಘಂಟೆ ಬಾರಿಸುತ್ತಾ ರಕ್ಷಣಾ ಸ್ಥಳದ ಕಡೆಗೆ ನಡೆಯುವುದನ್ನು ತೋರಿಸುತ್ತದೆ. ಅವರು ದೇವರಿಗೆ ಘೋಷಣೆಗಳನ್ನು ಕೂಗುವುದನ್ನು ಸಹ ಕೇಳಬಹುದು. ರಕ್ಷಣಾ ಕಾರ್ಯ ನಡೆಯುವ ಸ್ಥಳದಲ್ಲಿ ಸ್ಥಳೀಯ ದೇವತೆ ಬಾಬಾ ಬೌಖ್‌ನಾಗ್‌ನ ದೇವಾಲಯವನ್ನು ಸ್ಥಳೀಯರು ಸ್ಥಾಪಿಸುತ್ತಿರುವುದನ್ನು ಮತ್ತೊಂದು ವಿಡಿಯೊ ತೋರಿಸುತ್ತದೆ.
VIDEO | Uttarakhand tunnel collapse UPDATE: Villagers carry ‘doli’ of a local deity to the rescue site. pic.twitter.com/TngEYvzNCe
— Press Trust of India (@PTI_News) November 23, 2023
ಕಳೆದ 11 ದಿನಗಳಿಂದ ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಮುಂದಿನ ಕೆಲವು ಗಂಟೆಗಳಲ್ಲಿ ಅಥವಾ ನಾಳೆಯೊಳಗೆ ರಕ್ಷಿಸುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಸದಸ್ಯ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೇನ್ ಗುರುವಾರ ಸಂಜೆ ಹೇಳಿದ್ದಾರೆ. ಆದಾಗ್ಯೂ, ಸಿಕ್ಕಿಬಿದ್ದ ಕಾರ್ಮಿಕರು ಮತ್ತು ರಕ್ಷಕರು ಸಮಾನ ಅಪಾಯದಲ್ಲಿದ್ದಾರೆ. ತಮ್ಮ ನಿರೀಕ್ಷೆಗಳೊಂದಿಗೆ ರಕ್ಷಣಾ ತಂಡಗಳ ಮೇಲೆ ಒತ್ತಡ ಹೇರುವುದು ಬೇಡ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ರಕ್ಷಣಾ ಸ್ಥಳಕ್ಕೆ ಭೇಟಿ ನೀಡಿ, ಸಿಕ್ಕಿಬಿದ್ದ ಕಾರ್ಮಿಕರೊಂದಿಗೆ ಮಾತನಾಡಿದ್ದಾರೆ. “ನಾವು ಸುಮಾರು 45 ಮೀಟರ್ (ಅವಶೇಷಗಳ ಮೂಲಕ) ಬಂದಿದ್ದೇವೆ. ನಾವೀಗ ನಿಮಗೆ ತುಂಬಾ ಹತ್ತಿರವಾಗಿದ್ದೇವೆ ಎಂದು ಸಿಎಂ ಅವರಿಗೆ ತಿಳಿಸಿದರು.
ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಷನ್ (THDC) ಬಾರ್ಕೋಟ್ ತುದಿಯಿಂದ ರಕ್ಷಣಾ ಸುರಂಗದ ನಿರ್ಮಾಣವನ್ನು ಪ್ರಾರಂಭಿಸಿದೆ. ಈಗಾಗಲೇ ನಾಲ್ಕು ಸ್ಫೋಟಗಳು ಪೂರ್ಣಗೊಂಡಿವೆ, ಇದರ ಪರಿಣಾಮವಾಗಿ 9.10 ಮೀಟರ್ ಡ್ರಿಫ್ಟ್ ಆಗಿದೆ. ಅಧಿಕಾರಿಗಳ ಪ್ರಕಾರ, ದಿನಕ್ಕೆ ಮೂರು ಸ್ಫೋಟಗಳನ್ನು ನಡೆಸಲು ಪ್ರಯತ್ನಿಸಲಾಗುತ್ತಿದೆ.
ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಲು ಹಾರಿಜಾಂಟಲ್ ಡ್ರಿಲ್ಲಿಂಗ್‌ಗೆ ಅಗತ್ಯವಾದ ಮೈಕ್ರೋ ಟನೆಲಿಂಗ್‌ನ ಉಪಕರಣಗಳು ಗುರುವಾರ ಸ್ಥಳಕ್ಕೆ ತಲುಪಿವೆ. ಶುಕ್ರವಾರದೊಳಗೆ ಪ್ಲಾಟ್‌ಫಾರ್ಮ್ ಪೂರ್ಣಗೊಳ್ಳುವ ಸಾಧ್ಯತೆಯಿದೆ ಮತ್ತು ಶನಿವಾರದೊಳಗೆ ಉಪಕರಣಗಳನ್ನು ಹೊಂದಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಉತ್ತರಕಾಶಿ ಆಡಳಿತವು ರಕ್ಷಣಾ ಸ್ಥಳದ ಬಳಿ 41 ಆಂಬ್ಯುಲೆನ್ಸ್‌ಗಳನ್ನು ವ್ಯವಸ್ಥೆಗೊಳಿಸಿದೆ.
ಇದನ್ನೂ ಓದಿ: ಉತ್ತರಾಖಂಡ ಸುರಂಗ ಕುಸಿತ: ರಕ್ಷಣಾ ತಂಡಗಳ ಮೇಲೆ ಒತ್ತಡ ಹೇರದಂತೆ NDMA ಎಚ್ಚರಿಕೆ
ಆಗರ್ ಡ್ರಿಲ್ಲಿಂಗ್ ಮೆಷಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೊರೆಯುವ ಕೆಲಸ ಸ್ಥಗಿತಗೊಂಡಿದೆ. ಇಲ್ಲಿಯವರೆಗೆ, ರಕ್ಷಕರು ಸಿಲ್ಕ್ಯಾರಾ ಸುರಂಗದಲ್ಲಿ 46.8 ಮೀಟರ್ ವರೆಗೆ ಕೊರೆದಿದ್ದಾರೆ.
ಕಳೆದ 11 ದಿನಗಳಿಂದ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಮುಂದಿನ ಕೆಲವು ಗಂಟೆಗಳಲ್ಲಿ ಅಥವಾ ನಾಳೆಯೊಳಗೆ ರಕ್ಷಿಸುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಸದಸ್ಯ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೇನ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ