ಇಂಫಾಲ್: ಮಣಿಪುರದಲ್ಲಿ ಜಾತಿ ವಿಚಾರವಾಗಿ ಹಿಂಸಾಚಾರ ಭುಗಿಲೆದ್ದಿದ್ದು, ರಾಜ್ಯದಲ್ಲಿ ಭಾರಿ ಪ್ರಮಾಣದ ಸಾರ್ವಜನಿಕ ಆಸ್ತಿಗಳಿಗೆ ಹಾಗೂ ಅನೇಕ ಸಾವು – ನೋವುಗಳು ಸಂಭವಿಸಿದೆ, ಈ ಬಗ್ಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸೇನೆಯನ್ನು ಇಲ್ಲಿಗೆ ಕಳುಹಿಸಿತ್ತು. ಸೇನೆ ಮತ್ತು ಮಣಿಪುರ್ ಪೊಲೀಸ್ ಇಲಾಖೆಯ ಜಂಟಿ ಕಾರ್ಯಚರಣೆಯಿಂದ ರಾಜ್ಯದ ನಡೆಯುತ್ತಿರುವ ಹಿಂಸಾಚಾರ ನಿಯಂತ್ರಣಕ್ಕೆ ತರಲಾಗಿತ್ತು. ಆದರೆ ಇದೀಗ ಇಂದು (ಮೇ22) ಮತ್ತೆ ಹಿಂಸಾಚಾರದ ನಂತರ ಸೇನೆ ಮತ್ತು ಅರೆಸೇನಾ ಪಡೆಗಳು ಮಣಿಪುರಕ್ಕೆ ಧಾವಿಸಿವೆ. ರಾಜ್ಯದ ರಾಜಧಾನಿ ಇಂಫಾಲ್‌ನ ನ್ಯೂ ಚೆಕ್‌ಕಾನ್ ಪ್ರದೇಶದಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಸ್ಥಳಾವಕಾಶದ ಬಗ್ಗೆ ಮೈಟೆಯಿ ಮತ್ತು ಕುಕಿ ಸಮುದಾಯದ ನಡುವೆ ಹೊಡೆದಾಟ ನಡೆದಿದೆ.
ಮಣಿಪುರವು ಒಂದು ತಿಂಗಳಿಗೂ ಹೆಚ್ಚು ಕಾಲ ಹಲವಾರು ಸಮಸ್ಯೆಗಳಿಗೆ ಸಂಬಂಧಿಸಿದ ಜನಾಂಗೀಯ ಘರ್ಷಣೆಗಳಿಗೆ ಸಾಕ್ಷಿಯಾಗಿತ್ತು. ಮೇ 3 ರಂದು ಪರಿಶಿಷ್ಟ ಪಂಗಡದ ಸ್ಥಾನಮಾನದ ಬೇಡಿಕೆಗಾಗಿ ಪ್ರತಿಭಟಿಸಲು ಬುಡಕಟ್ಟು ಜನಾಂಗದವರು ಒಗ್ಗಟ್ಟಿನ ಮೆರವಣಿಗೆಯನ್ನು ಆಯೋಜಿಸಿದ ನಂತರ ಗುಡ್ಡಗಾಡು ರಾಜ್ಯದಲ್ಲಿ ಘರ್ಷಣೆಗಳು ಪ್ರಾರಂಭವಾದವು. ಒಂದು ವಾರಕ್ಕೂ ಹೆಚ್ಚು ಕಾಲ ನಡೆದ ಹಿಂಸಾಚಾರದಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಕೋಟಿಗಟ್ಟಲೆ ಮೌಲ್ಯದ ಆಸ್ತಿಯನ್ನು ಸುಟ್ಟುಹಾಕಲಾಯಿತು ಮತ್ತು ಸರ್ಕಾರ-ಸಂಘಟಿತ ಶಿಬಿರಗಳಲ್ಲಿ ಸುರಕ್ಷತೆಯನ್ನು ಪಡೆಯಲು ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು.
ಮೀಸಲು ಅರಣ್ಯ ಭೂಮಿಯಿಂದ ಕುಕಿ ಗ್ರಾಮಸ್ಥರನ್ನು ಹೊರಹಾಕುವ ಬಗ್ಗೆ ಘರ್ಷಣೆಗಳು ನಡೆದು, ಒಂದು ಸಣ್ಣ ಆಂದೋಲದಿಂದ ಆರಂಭವಾಗಿ, ಇದೀಗ ದೊಡ್ಡ ಘರ್ಷಣೆಗೆ ಕಾರಣವಾಗಿದೆ. ಮೇಟಿ ಜನಾಂಗ ರಾಜ್ಯದಲ್ಲಿ 64 ಪ್ರತಿಶತ ಜನಸಂಖ್ಯೆ ಹೊಂದಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿ ಬುಡಕಟ್ಟು ಅಲ್ಲದವರಿಗೆ ಭೂಮಿಯನ್ನು ಖರೀದಿಸಲು ಅವಕಾಶವಿಲ್ಲದ ಕಾರಣ ಅವರು ರಾಜ್ಯದ 10 ಪ್ರತಿಶತ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ. ಅವರನ್ನು ಎಸ್ಟಿ ವರ್ಗಕ್ಕೆ ಸೇರಿಸುವುದರಿಂದ ಅವರು ಬೆಟ್ಟಗಳಲ್ಲಿ ಭೂಮಿ ಖರೀದಿಸಲು ಸಾಧ್ಯವಾಗುತ್ತದೆ. ಇದು ಬುಡಕಟ್ಟು ಜನಾಂಗದ ಅಸಮಾಧಾನಕ್ಕೆ ಕಾರಣವಾಗಿತ್ತು.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವು ಅವರನ್ನು ಕಾಡುಗಳಿಂದ ಮತ್ತು ಬೆಟ್ಟಗಳಲ್ಲಿರುವ ಮನೆಗಳಿಂದ ಹೊರಹಾಕುವ ವ್ಯವಸ್ಥಿತ ಕಾರ್ಯಯೋಜನೆಯನ್ನು ಮಾಡಿದೆ ಎಂದು ಕುಕಿಗಳು ಆರೋಪಿಸಿದ್ದಾರೆ. ಸೇನೆ ಮತ್ತು ಅರೆಸೇನಾ ಪಡೆಗಳು ರಾಜ್ಯಕ್ಕೆ ಬಂದಿದ್ದು, ನಾಗರಿಕರಿಗೆ ಸಹಾಯ ಮಾಡುತ್ತಿವೆ. ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದು, ಎರಡೂ ಸಮುದಾಯಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Mon, 22 May 23