ತಿರುವನಂತಪುರಂ: ಮನೆಯಿಂದ ಆಸ್ಪತ್ರೆಗೆ ಹೋಗಿದ್ದ 59 ವರ್ಷದ ವ್ಯಕ್ತಿಯೊಬ್ಬರು 2 ದಿನವಾದರೂ ಮನೆಗೆ ಬಂದಿರಲಿಲ್ಲ. ಇತ್ತ ಆಸ್ಪತ್ರೆಗೆ ಹೋಗಿದ್ದ ಆ ವ್ಯಕ್ತಿ ಶನಿವಾರ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರು. ಎಷ್ಟೇ ಬಾರಿ ಕಿರುಚಿದರೂ ಅವರ ಕೂಗು ಹೊರಗಿನವರಿಗೆ ಗೊತ್ತಾಗಲೇ ಇಲ್ಲ. ವಾರಾಂತ್ಯವಾಗಿದ್ದರಿಂದ ಶನಿವಾರ ಮತ್ತು ಭಾನುವಾರ ಬಹುತೇಕ ಸಿಬ್ಬಂದಿ ರಜೆಯಲ್ಲಿದ್ದುದರಿಂದ ಅವರು ಲಿಫ್ಟ್‌ನಲ್ಲಿ ಸಿಲುಕಿರುವ ಸಂಗತಿ ಆಸ್ಪತ್ರೆಯವರಿಗೂ ತಿಳಿಯಲಿಲ್ಲ. 2 ದಿನ ಹಸಿವಿನಲ್ಲೇ ಲಿಫ್ಟ್‌ನೊಳಗೆ ಒದ್ದಾಡುತ್ತಿದ್ದ ಆ ವ್ಯಕ್ತಿಗೆ ಸೋಮವಾರ ಬೆಳಗ್ಗೆ ಕೊನೆಗೂ ಲಿಫ್ಟ್ನಿಂದ ಬಿಡುಗಡೆ ಸಿಕ್ಕಿದೆ. ಸೋಮವಾರ ಬೆಳಗ್ಗೆ ನಿತ್ಯದ ಕೆಲಸಕ್ಕಾಗಿ ಬಂದ ಸಿಬ್ಬಂದಿಗೆ ಲಿಫ್ಟ್‌ನೊಳಗೆ ಯಾರೋ ಸಿಲುಕಿರುವುದು ಗೊತ್ತಾಗಿದೆ. ನಂತರ ಲಿಫ್ಟ್‌ನ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಲ್ಲೂರು ನಿವಾಸಿ ರವೀಂದ್ರನ್ ನಾಯರ್ (59) ಶನಿವಾರದಿಂದ ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನ ಒಪಿ ಬ್ಲಾಕ್‌ನ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರು. “ಅವರು ಮೊದಲ ಮಹಡಿಗೆ ಹೋಗಲು ಲಿಫ್ಟ್‌ಗೆ ಹತ್ತಿದರು. ಆದರೆ ಲಿಫ್ಟ್ ಕೆಳಗೆ ಹೋಗಿದ್ದು ಮತ್ತೆ ತೆರೆಲೇ ಇಲ್ಲ. ಇದರಿಂದ ಗಾಬರಿಯಾದ ಅವರು ಸಹಾಯಕ್ಕಾಗಿ ಕೂಗಿದರೂ ಯಾರೂ ಬರಲಿಲ್ಲ. ಅವರ ಫೋನ್ ಸಹ ಸ್ವಿಚ್ ಆಫ್ ಆಗಿತ್ತು” ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: Viral Video: ಚರಂಡಿಗೆ ಇಳಿದು ಕುಡುಕನ ಜೀವ ಕಾಪಾಡಿದ ಪೊಲೀಸರು; ವಿಡಿಯೋ ವೈರಲ್
ಸೋಮವಾರ ಬೆಳಗ್ಗೆ ಲಿಫ್ಟ್ ನಿರ್ವಾಹಕರು ನಿತ್ಯದ ಕೆಲಸ ಆರಂಭಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ರಾತ್ರಿ ಆ ವ್ಯಕ್ತಿಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆ ವ್ಯಕ್ತಿ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಆಸ್ಪತ್ರೆಯ ಲಿಫ್ಟ್ ಆಪರೇಟರ್ ಲಿಫ್ಟ್ ಅನ್ನು ತೆರೆದಾಗ ಅವರು ಲಿಫ್ಟ್ ಒಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. 2 ದಿನಗಳಿಂದ ಆಹಾರ ಸೇವಿಸದ ಹಿನ್ನೆಲೆಯಲ್ಲಿ ಮತ್ತು ಆಘಾತದಿಂದ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Shocking News: ಶಾಲೆಯಲ್ಲೇ 16 ವರ್ಷದ ವಿದ್ಯಾರ್ಥಿಗೆ ಹೃದಯಾಘಾತ; ಶಾಕಿಂಗ್ ವಿಡಿಯೋ ವೈರಲ್
ಪೊಲೀಸರ ಪ್ರಕಾರ, ರವೀಂದ್ರನ್ ಶನಿವಾರ ಬೆಳಿಗ್ಗೆ ತನ್ನ ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಎಂಸಿಎಚ್‌ನ ಮೂಳೆಚಿಕಿತ್ಸೆ ವಿಭಾಗಕ್ಕೆ ಭೇಟಿ ನೀಡಿದ್ದರು. ವೈದ್ಯರೊಂದಿಗೆ ಸಮಾಲೋಚಿಸಿದ ನಂತರ ಮತ್ತು ಪರೀಕ್ಷೆಗಳಿಗೆ ಒಳಗಾದ ನಂತರ, ಅವರು ತಮ್ಮ ಕೆಲವು ವೈದ್ಯಕೀಯ ದಾಖಲೆಗಳನ್ನು ಹಿಂಪಡೆಯಲು ಮನೆಗೆ ತೆರಳಿದ್ದರು. ಶನಿವಾರ ಮಧ್ಯಾಹ್ನದ ಸುಮಾರಿಗೆ ಹಿಂತಿರುಗಿದ ರವೀಂದ್ರನ್ ಆಸ್ಪತ್ರೆಯ ನೆಲ ಮಹಡಿಯಿಂದ ಮೊದಲ ಮಹಡಿಗೆ ಲಿಫ್ಟ್‌ನಲ್ಲಿ ಹೊರಟರು. ಆದರೆ, ಲಿಫ್ಟ್ ಹಠಾತ್ತನೆ ಮಧ್ಯದಲ್ಲೇ ಸಿಲುಕಿಕೊಂಡಿತು. ಈ ಘಟನೆಯ ವೇಳೆ ರವೀಂದ್ರನ್ ಅವರ ಕೈಯಿಂದ ಜಾರಿದ ಮೊಬೈಲ್ ಫೋನ್ ಮುರಿದು ಬಿದ್ದಿದ್ದು, ಅವರು ಒಳಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿಸಲು ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ.
“ನಾನು ಎಚ್ಚರಿಕೆಯ ಗುಂಡಿಯನ್ನು ಒತ್ತಿದೆ, ಆದರೆ ಯಾರೂ ಬರಲಿಲ್ಲ. ನಾನು ಎಲಿವೇಟರ್‌ನಲ್ಲಿ ತುರ್ತು ದೂರವಾಣಿಯನ್ನು ಸಹ ಪ್ರಯತ್ನಿಸಿದೆ, ಆದರೆ ಯಾರೂ ಉತ್ತರಿಸಲಿಲ್ಲ” ಎಂದು ಅವರು ತಿಳಿಸಿರುವುದಾಗಿ ಮನೋರಮಾ ನ್ಯೂಸ್ ವರದಿ ಮಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ