Viral Video: ಬ್ಯಾಡ್ಮಿಂಟನ್ ಆಡಿ ಖುಷಿಪಟ್ಟ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್

ಮಧ್ಯಪ್ರದೇಶದ 413 ನಗರಾಡಳಿತ ಸಂಸ್ಥೆಗಳಿಗೆ ನಾಳೆ (ಜುಲೈ 6) ಮತ್ತು ಜುಲೈ 13ರಂದು ಚುನಾವಣೆ ನಡೆಯಲಿದೆ.

Viral Video: ಬ್ಯಾಡ್ಮಿಂಟನ್ ಆಡಿ ಖುಷಿಪಟ್ಟ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್
Edited By:

Updated on: Jul 05, 2022 | 12:10 PM

ಭೋಪಾಲ್: ಮಧ್ಯಪ್ರದೇಶ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivaraj Singh Chouhan) ಸೇರಿದಂತೆ ಸರ್ಕಾರದ ಬಹುತೇಕ ಶಾಸಕರು, ಸಚಿವರು ಚುನಾವಣಾ ಪ್ರಚಾರಣದಲ್ಲಿ ಬ್ಯುಸಿಯಾಗಿದ್ದಾರೆ. ಮಧ್ಯಪ್ರದೇಶ ರಾಜ್ಯದಲ್ಲಿ ಚುನಾವಣೆಯ ಗಾಳಿ ವೇಗವಾಗಿ ಬೀಸುತ್ತಿದ್ದು, ರಾಜಕೀಯ ಚಟುವಟಿಕೆಗಳು ಚುರುಕಾಗಿವೆ. ಸತತ ರಾಜಕೀಯ ಚಟುವಟಿಕೆಗಳ ನಡುವೆ ತುಸು ಬಿಡುವು ಸಿಕ್ಕ ತಕ್ಷಣ ರಿಲ್ಯಾಕ್ಸ್ ಮೋಡ್​ಗೆ ಹೋದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಶಟಲ್ ಬ್ಯಾಡ್ಮಿಂಟನ್ ಆಡಿ ಸಂಭ್ರಮಿಸಿದರು. ಭೋಪಾಲ್​ನ ಭೋಜ್​ಪುರ್ ಕ್ಲಬ್​ಗೆ ಭೇಟ ನೀಡಿದ್ದ ಅವರು, ಬಿಳಿ ಕುರ್ತಾದಲ್ಲಿಯೇ ಶಟಲ್​ಕಾಕ್ ಆಡಿದರು.

ಇಂದು ನನಗೆ ಚುನಾವಣಾ ಪ್ರಚಾರದಿಂದ ತುಸು ಬಿಡುವು ದೊರೆಯಿತು. ತಕ್ಷಣ ಭೋಪಾಲ್​ದ ಅರೆರಾ ಕಾಲೊನಿ ಭೋಜ್​ಪುರ್ ಕ್ಲಬ್​ಗೆ ತೆರಳಿದೆ. ಆಗಾಗ ಕೆಲವು ಕ್ಷಣಗಳನ್ನು ಹೀಗೆ ಅರ್ಥಪೂರ್ಣವಾಗಿ ಕಳೆಯುವುದರಿಂದ ಹಲವು ಅನುಕೂಲಗಳಿವೆ. ನನಗಂತೂ ಇಷ್ಟು ಬಿಡುವು ಸಿಕ್ಕು ಎಷ್ಟೂ ದಿನಗಳಾಗಿತ್ತು. ನನ್ನ ಬಾಲ್ಯವೇ ಮತ್ತೊಮ್ಮೆ ಮರಳಿ ಬಂದಷ್ಟು ಖುಷಿಪಟ್ಟೆ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಮಧ್ಯಪ್ರದೇಶದ 413 ನಗರಾಡಳಿತ ಸಂಸ್ಥೆಗಳಿಗೆ ನಾಳೆ (ಜುಲೈ 6) ಮತ್ತು ಜುಲೈ 13ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಯ ಮೂಲಕ ಇದೇ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಅಸಾದುದ್ದಿನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹದುಲ್ ಮುಸ್ಲಿಮೀನ್ (All India Majlis-e-Ittehadul Muslimeen – AIMIM) ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.

ನಗರಾಡಳಿತ ಚುನಾವಣೆಗಳ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿವಿಧೆಡೆ ರೋಡ್​ ಷೋ ಮತ್ತು ಸಾರ್ವಜನಿಕ ಸಮಾರಂಭಗಳನ್ನು ನಡೆಸುತ್ತಿದ್ದಾರೆ. ಇಂದೋರ್​ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದ ಅವರು, ಉದಯಪುರದಲ್ಲಿ ಟೈಲರ್ ಹತ್ಯೆಗೆ ಕಾಂಗ್ರೆಸ್ ಕಾರಣ ಎಂದು ನೇರ ಆರೋಪ ಮಾಡಿದರು. ಕಾಂಗ್ರೆಸ್ ಸದಾ ತುಷ್ಟೀಕರಣ ರಾಜಕಾರಣ ಮಾಡುತ್ತಿತ್ತು. ಅದರ ಪರಿಣಾಮವಾಗಿ ಉದಯಪುರದಂಥ ಘಟನೆ ನಡೆದಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ ಎಂದು ಅವರು ಹೇಳಿದ್ದರು.

ಬಿಜೆಪಿಯು ಎಲ್ಲ ಧರ್ಮಗಳನ್ನೂ ಗೌರವಿಸುತ್ತದೆ. ಭಯೋತ್ಪಾದಕರನ್ನು ನಾವು ಸಹಿಸುವ ಪ್ರಶ್ನೆಯೇ ಇಲ್ಲ. ಎಲ್ಲ ರೀತಿಯಿಂದಲೂ ಕ್ರಮ ಕೈಗೊಂಡು ಭಯೋತ್ಪಾದನೆಯನ್ನು ದಮನ ಮಾಡುತ್ತೇವೆ. ನಾವು ದೇಶಭಕ್ತರು, ರಾಷ್ಟ್ರವಾದಿಗಳು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ. ಹಲವಾರು ಜನರಿಗೆ ಇದು ಬೇಕಿಲ್ಲ ಎಂದು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.

Published On - 12:10 pm, Tue, 5 July 22