ನವದೆಹಲಿ: ನವರಾತ್ರಿಯ (Navaratri) ಕೊನೆಯ ದಿನ ರಾವಣನ ಸಂಹಾರ ಮಾಡುವುದು ಪದ್ಧತಿ. ವಿಜಯದಶಮಿಯಂದು (Vijayadashami) ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಿ ಜನರು 9 ದಸರಾ (Dasara) ಉತ್ಸವ ಆಚರಿಸುತ್ತಾರೆ. ಆದರೆ, ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಬುಧವಾರ ದಸರಾ ಕಾರ್ಯಕ್ರಮದ ವೇಳೆ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚುತ್ತಿದ್ದಂತೆ ವಿಚಿತ್ರವಾದ ಘಟನೆಯೊಂದು ನಡೆದಿದೆ. ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಿದಾಗ ಆ ಬೆಂಕಿಯ ಕಿಡಿಗಳು ಹಾರಿಹೋಗಿ ಅಲ್ಲಿ ಸೇರಿದ್ದ ಜನರು, ಪೊಲೀಸರ ಮೇಲೆ ಬಿದ್ದಿವೆ. ಇದರಿಂದ ಜನರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ.
ಉತ್ತರ ಪ್ರದೇಶದ ಮುಜರಾಯಿ ಸರ್ಕಾರಿ ಇಂಟರ್ ಕಾಲೇಜು ಮೈದಾನದಲ್ಲಿ ವಿಜಯದಶಮಿ ನಿಮಿತ್ತ ರಾವಣನ ಪ್ರತಿಕೃತಿ ದಹಿಸುವಾಗ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಾವಣನ ಪ್ರತಿಕೃತಿಗಳನ್ನು ದಹಿಸುವ ಮೂಲಕ ಆಚರಿಸಲಾಗುವ ದಸರಾವನ್ನು ವೀಕ್ಷಿಸಲು ನೆರೆದಿದ್ದ ದೊಡ್ಡ ಜನಸಮೂಹದ ಮೇಲೆ ರಾವಣನ ಪ್ರತಿಕೃತಿಯಿಂದ ಬೆಂಕಿ ಹಾರಿ ಬೀಳುವುದನ್ನು ವಿಡಿಯೋದಲ್ಲಿ ನೋಡಬಹುದು.
मुज़फ़्फ़रनगर में अपने को जलाए जाने से क्रुद्ध रावण ने मौक़े पर मौजूद लोगों पर अग्नि-वाण चलाए ? pic.twitter.com/zuDmH3dKXa
— Umashankar Singh उमाशंकर सिंह (@umashankarsingh) October 5, 2022
ಇದನ್ನೂ ಓದಿ: ಐತಿಹಾಸಿಕ ಕುಲು ದಸರಾದಲ್ಲಿ ಪಾಲ್ಗೊಂಡ ಮೊದಲ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಿ ನರೇಂದ್ರ ಮೋದಿ
ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲದೆ ಪೊಲೀಸ್ ಅಧಿಕಾರಿಗಳು ಕೂಡ ರಕ್ಷಣೆಗಾಗಿ ಓಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ರಾವಣನ ಪ್ರತಿಕೃತಿಯಿಂದ ಬೆಂಕಿ ಹಾರುತ್ತಿರುವುದು ಕಡಿಮೆಯಾದ ಬಳಿಕ ಗೂಳಿಯೊಂದು ಮೈದಾನಕ್ಕೆ ನುಗ್ಗಿ ಮತ್ತಷ್ಟು ಆತಂಕ ಮೂಡಿಸಿತು. ಕೂಡಲೇ ಅಧಿಕಾರಿಗಳು ಆ ಗೂಳಿಯನ್ನು ಎಳೆದುಕೊಂಡು ಹೋಗಿದ್ದಾರೆ.
ಹರಿಯಾಣದ ಯಮುನಾನಗರದಲ್ಲಿ ಇದೇ ರೀತಿಯ ಘಟನೆ ವರದಿಯಾಗಿದ್ದು, ರಾವಣನ ದಹನ ಪ್ರತಿಕೃತಿ ಪ್ರೇಕ್ಷಕರ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಯಮುನಾನಗರ ಪೊಲೀಸರು ತಿಳಿಸಿದ್ದಾರೆ.