Viral Video: ಹಿಂದೂ ದೇವರನ್ನು ಪೂಜಿಸುವುದಿಲ್ಲ; ಸಾಮೂಹಿಕ ಮತಾಂತರ ಸಭೆಯಲ್ಲಿ ಪಾಲ್ಗೊಂಡು ಪ್ರತಿಜ್ಞೆ ಮಾಡಿದ ಆಪ್ ಸಚಿವ

| Updated By: ಸುಷ್ಮಾ ಚಕ್ರೆ

Updated on: Oct 07, 2022 | 4:43 PM

ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಪ್ ಸಚಿವ ರಾಜೇಂದ್ರ ಪಾಲ್ ಗೌತಮ್, ನನಗೆ ಬೌದ್ಧ ಧರ್ಮದಲ್ಲಿ ನಂಬಿಕೆ ಇದೆ. ಸಂವಿಧಾನವು ನಮಗೆ ಯಾವುದೇ ಧರ್ಮವನ್ನು ಅನುಸರಿಸಲು ಸ್ವಾತಂತ್ರ್ಯ ನೀಡಿದೆ ಎಂದಿದ್ದಾರೆ.

Viral Video: ಹಿಂದೂ ದೇವರನ್ನು ಪೂಜಿಸುವುದಿಲ್ಲ; ಸಾಮೂಹಿಕ ಮತಾಂತರ ಸಭೆಯಲ್ಲಿ ಪಾಲ್ಗೊಂಡು ಪ್ರತಿಜ್ಞೆ ಮಾಡಿದ ಆಪ್ ಸಚಿವ
ಸಾಮೂಹಿಕ ಮತಾಂತರ ಸಭೆಯಲ್ಲಿ ಭಾಗವಹಿಸಿದ್ದ ಆಮ್ ಆದ್ಮಿ ಪಕ್ಷದ ಸಚಿವ ರಾಜೇಂದ್ರ ಪಾಲ್ ಗೌತಮ್
Follow us on

ನವದೆಹಲಿ: ಇತ್ತೀಚೆಗೆ ಸಾಮೂಹಿಕ ಮತಾಂತರ ಸಭೆಯಲ್ಲಿ ಭಾಗವಹಿಸಿದ್ದ ಆಮ್ ಆದ್ಮಿ ಪಕ್ಷದ (AAP) ಸಚಿವ ರಾಜೇಂದ್ರ ಪಾಲ್ ಗೌತಮ್ ಅಲ್ಲಿ ಸೇರಿದ್ದ ಜನರ ಜೊತೆ “ಹಿಂದೂ ದೇವರು ಮತ್ತು ದೇವತೆಗಳನ್ನು ಪೂಜಿಸುವುದಿಲ್ಲ” ಎಂದು ಪ್ರತಿಜ್ಞೆ ಮಾಡಿದ್ದರು. ಅಕ್ಟೋಬರ್ 5ರಂದು ಬೌದ್ಧ ಧರ್ಮಕ್ಕೆ (Buddhism) ಮತಾಂತರಗೊಳ್ಳುವ ದೀಕ್ಷೆಯಲ್ಲಿ ಪಾಲ್ಗೊಳ್ಳಲು ಬುಧವಾರ 10,000ಕ್ಕೂ ಹೆಚ್ಚು ಜನರು ರಾಷ್ಟ್ರ ರಾಜಧಾನಿ ದೆಹಲಿಯ (Delhi) ಅಂಬೇಡ್ಕರ್ ಭವನದಲ್ಲಿ ಜಮಾಯಿಸಿದ್ದರು.

ಇದೀಗ ವೈರಲ್ ಆಗಿರುವ ಈ ಘಟನೆಯ ವೀಡಿಯೊದಲ್ಲಿ, ಆಪ್ ಸಚಿವರು ಮತ್ತು ಇತರರು ಪ್ರತಿಜ್ಞೆ ಸ್ವೀಕರಿಸುವುದನ್ನು ಕಾಣಬಹುದು. “ನನಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಲ್ಲಿ ನಂಬಿಕೆ ಇಲ್ಲ. ನಾನು ಅವರನ್ನು ಪೂಜಿಸುವುದಿಲ್ಲ. ನನಗೆ ರಾಮನಲ್ಲಿ ನಂಬಿಕೆ ಇಲ್ಲ. ಕೃಷ್ಣನನ್ನು ದೇವರ ಅವತಾರವೆಂದು ನಂಬಲಾಗಿದೆ ಆದರೆ, ನಾನು ಅವರನ್ನು ಪೂಜಿಸುವುದಿಲ್ಲ” ಎಂದು ಹೇಳಲಾಗಿದೆ.

ಇದನ್ನೂ ಓದಿ: Arun Singh: ಕೋರ್​ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರ ವಿರುದ್ದ ಉಸ್ತುವಾರಿ ಅರುಣ್ ಸಿಂಗ್ ಫುಲ್ ಗರಂ!

ಈ ಬಗ್ಗೆ ಸಚಿವ ರಾಜೇಂದ್ರ ಪಾಲ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಬುದ್ಧನ ಕಡೆಗಿನ ಈ ಮಿಷನ್ ಅನ್ನು ಜೈ ಭೀಮ್ ಎಂದು ಕರೆಯೋಣ. ಇಂದು ವಿಜಯದಶಮಿಯಂದು “ಮಿಷನ್ ಜೈ ಭೀಮ್” ಅಡಿಯಲ್ಲಿ 10,000ಕ್ಕೂ ಹೆಚ್ಚು ಬುದ್ಧಿಜೀವಿಗಳು ಜಾತಿ ಮತ್ತು ಅಸ್ಪೃಶ್ಯ ಮುಕ್ತ ಭಾರತವನ್ನು ಮಾಡುವ ಪ್ರತಿಜ್ಞೆ ಮಾಡಿದ್ದೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬಿಜೆಪಿಯಿಂದ ತಿರುಗೇಟು:
ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಬಿಜೆಪಿ ಇದನ್ನು “ಬ್ರೇಕಿಂಗ್ ಇಂಡಿಯಾ” ಯೋಜನೆ ಎಂದು ಕರೆದಿದೆ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿಯ ಅಮಿತ್ ಮಾಳವಿಯಾ, ಅರವಿಂದ್ ಕೇಜ್ರಿವಾಲ್ ಅವರ ಸಂಪುಟದ ಸಚಿವ ರಾಜೇಂದ್ರ ಪಾಲ್ ಬ್ರೇಕಿಂಗ್ ಇಂಡಿಯಾ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದಾರೆ. ಕೇಜ್ರಿವಾಲ್ ಈ ಹಿಂದೂ ದ್ವೇಷದ ಪ್ರಚಾರದ ಪ್ರಧಾನ ಪ್ರಾಯೋಜಕರು ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಬೌದ್ಧ, ಲಿಂಗಾಯತ, ಸಿಖ್, ಜೈನ ಇವೆಲ್ಲವೂ ಹಿಂದೂ ಧರ್ಮದ ಭಾಗವೆಂದು ಬಿಂಬಿಸಲಾಗುತ್ತಿದೆ: ಸಿದ್ದರಾಮಯ್ಯ

ಇದು ಹಿಂದೂ ಮತ್ತು ಬೌದ್ಧ ಧರ್ಮಕ್ಕೆ ಮಾಡಿದ ಅವಮಾನ. ಎಎಪಿ ಸಚಿವರು ಗಲಭೆ ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಕೂಡಲೇ ಸಚಿವ ರಾಜೇಂದ್ರ ಪಾಲ್ ಅವರನ್ನು ಆಪ್ ಪಕ್ಷದಿಂದ ತೆಗೆದು ಹಾಕಬೇಕು. ನಾವು ಅವರ ವಿರುದ್ಧ ದೂರು ಸಲ್ಲಿಸುತ್ತಿದ್ದೇವೆ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಪ್ ಸಚಿವ ರಾಜೇಂದ್ರ ಪಾಲ್ ಗೌತಮ್, ಬಿಜೆಪಿ ದೇಶ ವಿರೋಧಿಯಾಗಿದೆ. ನನಗೆ ಬೌದ್ಧ ಧರ್ಮದಲ್ಲಿ ನಂಬಿಕೆ ಇದೆ. ಯಾರಿಗಾದರೂ ಇದರಿಂದ ತೊಂದರೆ ಯಾಕಾಗಬೇಕು? ಅವರು ದೂರು ನೀಡಲಿ. ಸಂವಿಧಾನವು ನಮಗೆ ಸ್ವಾತಂತ್ರ್ಯ ನೀಡಿದೆ. ಯಾವುದೇ ಧರ್ಮವನ್ನು ಅನುಸರಿಸಲು ನಮಗೆ ಸ್ವಾತಂತ್ರ್ಯವಿದೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ