ಬೌದ್ಧ, ಲಿಂಗಾಯತ, ಸಿಖ್, ಜೈನ ಇವೆಲ್ಲವೂ ಹಿಂದೂ ಧರ್ಮದ ಭಾಗವೆಂದು ಬಿಂಬಿಸಲಾಗುತ್ತಿದೆ: ಸಿದ್ದರಾಮಯ್ಯ
ಸ್ವಾತಂತ್ರ್ಯದ ಹಕ್ಕು ಚಲಾಯಿಸಿದರೆ ದೇಶದ್ರೋಹಿ, ಉಗ್ರ ಅಂತಾರೆ. ಸಮಾಜಮುಖಿ ಪ್ರಗತಿಪರ ಚಿಂತಕರು ಖಂಡಿಸದೇ ಹೋದರೆ ಸಮಾಜದಲ್ಲಿ ಬದಲಾವಣೆ ತರುವುದು ಸಾಧ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಏನು ತಪ್ಪು ಮಾಡಿದ್ರು? ಎಂ.ಎಂ.ಕಲಬುರ್ಗಿಯವರು ಸತ್ಯ ಹೇಳಲು ಪ್ರಯತ್ನ ಮಾಡಿದರು. ಕೋಮುವಾದಿ ಮನೋಭಾವದಿಂದ ಬಳಲುವವರು ಕೊಂದರು. ಡಾ.ಎಂ.ಎಂ.ಕಲಬುರ್ಗಿ, ಗೌರಿಲಂಕೇಶ್ರನ್ನು ಕೊಂದುಹಾಕಿದರು. ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯವರನ್ನೇ ಕೊಂದುಹಾಕಿದ್ದರು. ಗಾಂಧಿ ಕೊಂದವರ ಫೋಟೋವನ್ನು ದೇಗುಲದಲ್ಲಿಟ್ಟು ಪೂಜಿಸ್ತಾರೆ. ಖಂಡಿಸದಿದ್ದರೆ ಯಾವ ರೀತಿ ಸಮಾಜ ನಿರ್ಮಾಣವಾಗಬಹುದು ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಹಂಸಲೇಖ ಏನಾದ್ರೂ ದೊಡ್ಡ ಅಪರಾಧದ ಹೇಳಿಕೆ ಕೊಟ್ಟಿದ್ರಾ? ಸಂಗೀತ ನಿರ್ದೇಶಕ ವಾಸ್ತವಾಂಶವನ್ನು ತೆರೆದಿಟ್ಟಿದ್ದರು ಅಷ್ಟೇ. ಹಂಸಲೇಖ ಹೇಳಿಕೆಯ ಬಗ್ಗೆ ದೊಡ್ಡ ರಂಪ ಮಾಡಿಬಿಟ್ಟರು. ಅದ್ಯಾವ ಸೆಕ್ಷನ್, ಪೀನಲ್ ಕೋಡ್ನಲ್ಲಿ ಬರುತ್ತೋ ಗೊತ್ತಿಲ್ಲ. ಐಪಿಸಿ ಸೆಕ್ಷಕ್ 295ಕ್ಕೂ ಹಂಸಲೇಖ ಹೇಳಿಕೆಗೂ ಸಂಬಂಧವಿಲ್ಲ. ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡಿಸಿದ್ರು. ಐಪಿಸಿ ಸೆಕ್ಷನ್ 295ರಲ್ಲಿ ಬಲವಂತದ ಮತಾಂತರ ನಿಷೇಧವಿದೆ. ಇದೀಗ ಮತ್ತೆ ಹೊಸದಾಗಿ ವಿಧೇಯಕ ತರುವ ಅಗತ್ಯವೇನಿತ್ತು? ಬಲವಂತದ ಮತಾಂತರಕ್ಕೆ ನಾನು ಕೂಡ ವಿರೋಧಿಸುತ್ತೇನೆ. ಈಗಾಗಲೇ ಜಾರಿಯಲ್ಲಿರುವ ಕಾಯ್ದೆ ಪ್ರಯೋಗಮಾಡಬಹುದು ಎಂದು ಹೇಳಿದ್ದಾರೆ.
ಯಾಕಪ್ಪ ಸಂವಿಧಾನ ಬುಡಮೇಲು ಮಾಡುವ ಕೆಲಸ ಮಾಡ್ತೀರಿ? ಇದನ್ನು ವಿರೋಧ ಮಾಡಬೇಕಾಗಿರುವುದು ಎಲ್ಲರ ಕರ್ತವ್ಯ. ಅದನ್ನು ಹೇಳಿದರೆ ಒಂದು ಧರ್ಮದ ವಿರೋಧಿ ಎನ್ನುತ್ತಾರೆ. ಧರ್ಮ ಅಂದ್ರೇನು? ಮನುಷ್ಯತ್ವವೇ ಇಲ್ಲದ ಧರ್ಮ ಇದೆಯಾ? ಮತಾಂತರಕ್ಕೆ ಯಾವ ಸ್ಥಿತಿ ಕಾರಣ ಎನ್ನೋದನ್ನು ಪತ್ತೆಹಚ್ಚಬೇಕು. ಅದನ್ನು ಬಿಟ್ಟು ಸ್ವಯಂಪ್ರೇರಿತವಾಗಿ ಮತಾಂತರ ಆಗುವವರಿಗೆ ದೌರ್ಜನ್ಯ ಮಾಡುವುದನ್ನು ಹೇಗೆ ಸಹಿಸಿಕೊಂಡು ಸುಮ್ಮನಿರಬೇಕು. ಮತಾಂತರ ತಡೆ ಹೆಸರಿನಲ್ಲಿ ದೌರ್ಜನ್ಯದ ಬಗ್ಗೆ ಚರ್ಚೆಯಾಗಬೇಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಗಜ್ಯೋತಿ ಬಸವೇಶ್ವರರು ವೈದಿಕ ಧರ್ಮ ಒಪ್ಪಿಕೊಂಡಿದ್ರಾ? ಇತ್ತೀಚೆಗೆ ಕೆಟ್ಟ ಬೆಳವಣಿಗೆ ಆಗ್ತಿದೆ, ತಪ್ಪು ದಾರಿಗೆಳೆಯುವ ಯತ್ನ ಆಗುತ್ತಿದೆ. ಬೌದ್ಧ ಧರ್ಮ, ಲಿಂಗಾಯತ ಧರ್ಮ, ಸಿಖ್ ಧರ್ಮ, ಜೈನ ಧರ್ಮ ಇವೆಲ್ಲವೂ ಹಿಂದೂ ಧರ್ಮದ ಭಾಗವೆಂದು ಬಿಂಬಿಸಲಾಗುತ್ತಿದೆ. ಜಗಜ್ಯೋತಿ ಬಸವೇಶ್ವರರು ವೈದಿಕ ಧರ್ಮ ಒಪ್ಪಿಕೊಂಡಿದ್ರಾ? ಗೊಡ್ಡು ಸಂಪ್ರದಾಯವನ್ನು ಬಸವಣ್ಣನವರು ಒಪ್ಪಿಕೊಂಡಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ದೇಶದಲ್ಲಿ ಸಾಕ್ಷರತೆ ಪ್ರಮಾಣ ಶೇ.78ರಷ್ಟಿದ್ದರೂ ಅನಿಷ್ಟ ಪದ್ಧತಿಗಳು ಇನ್ನೂ ಹೆಚ್ಚಾಗುತ್ತಲೇ ಇದೆ. ಬುದ್ಧ, ಬಸವಣ್ಣನ ಬಗ್ಗೆ ಎಷ್ಟೇ ಓದಿದರೂ ಪಾಲನೆ ಮಾಡುತ್ತಿಲ್ಲ. ಪ್ರಸ್ತುತ ಉಗ್ರವಾಗಿ ಸತ್ಯ ಹೇಳುವುದೇ ಕಷ್ಟವಾಗಿಬಿಟ್ಟಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಬಹಳ ಕಷ್ಟದಲ್ಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಮಾತಾಡಿದ್ರೆ ಕೆಲವರಿಗೆ ಕಹಿಯಾಗುತ್ತೆ. ಅವರು ನಿಜವಾದ ಕಣ್ಣಿನಿಂದ ನೋಡಲ್ಲ, ಅವರು ವಕ್ರ ಕಣ್ಣಿನವರು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸ್ವಾತಂತ್ರ್ಯದ ಹಕ್ಕು ಚಲಾಯಿಸಿದರೆ ದೇಶದ್ರೋಹಿ, ಉಗ್ರ ಅಂತಾರೆ. ಸಮಾಜಮುಖಿ ಪ್ರಗತಿಪರ ಚಿಂತಕರು ಖಂಡಿಸದೇ ಹೋದರೆ ಸಮಾಜದಲ್ಲಿ ಬದಲಾವಣೆ ತರುವುದು ಸಾಧ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಕರ್ನಾಟಕ ರಾಜ್ಯ ಬಂದ್‌ಗೆ ನಮ್ಮ ನೈತಿಕ ಬೆಂಬಲ ಇದೆ. ಕರ್ನಾಟಕದ ಬಾವುಟವನ್ನು ಮಹಾರಾಷ್ಟ್ರದಲ್ಲಿ ಸುಟ್ಟಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಾವು ಸದನದಲ್ಲಿ ನಿರ್ಣಯ ಅಂಗೀಕರಿಸಿದ್ದೇವೆ. ನಿರ್ಣಯ ಅಂಗೀಕರಿಸಿ ಸರ್ಕಾರ ಕೈಕಟ್ಟಿ ಕೂರುವುದಲ್ಲ. ನಿರ್ಣಯ ಮಹಾರಾಷ್ಟ್ರಕ್ಕೆ ಕಳಿಸಿ ಕ್ರಮಕ್ಕೆ ಒತ್ತಾಯಿಸಬೇಕು. ಎಂಇಎಸ್ ಪುಂಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ನನ್ನ ನೇತೃತ್ವದಲ್ಲೇ ಮುಂದಿನ ಚುನಾವಣೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ನಾವು ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಇದ್ದಾರೆ. ನಾನು ಶಾಸಕಾಂಗ ಪಕ್ಷದ ನಾಯಕನಾಗಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಉಳಿದ ನಾಯಕರೂ ಇದ್ದಾರೆ. ಎಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ.
ನೈಟ್ ಕರ್ಫ್ಯೂ ಜಾರಿ ವಿಚಾರವಾಗಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಒಮಿಕ್ರಾನ್ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿ. ಇದರಲ್ಲಿ ನಮ್ಮ ಆಕ್ಷೇಪ ಏನೂ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಜಾರಿ ಆರೋಗ್ಯಕರವಲ್ಲ; ಮನುಷ್ಯನ ಸಂವಿಧಾನಬದ್ಧ ಹಕ್ಕು ಕಸಿದುಕೊಂಡಂತೆ: ಕೆಹೆಚ್ ಮುನಿಯಪ್ಪ
ಇದನ್ನೂ ಓದಿ: ವಿಧಾನ ಪರಿಷತ್ನಲ್ಲಿ ಮಂಡನೆ ಆಗದ ಮತಾಂತರ ನಿಷೇಧ ವಿಧೇಯಕ: ಮುಂದಿನ ಅಧಿವೇಶನದಲ್ಲಿ ಮಂಡನೆಗೆ ನಿರ್ಧಾರ
Published On - 3:41 pm, Sun, 26 December 21