ತಂದೆಯ ಸುಪರ್ದಿಗೆ ಮಗುವನ್ನು ಕೊಡಲು ಸಲ್ಲಿಸಿದ್ದ ಅರ್ಜಿ ವಜಾ; ಅರ್ಜಿದಾರನಿಗೆ 50,000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್
ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠವು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಜೊತೆಗೆ 50,000 ರೂಪಾಯಿ ದಂಡ ವಿಧಿಸಿದ್ದು, 9 ತಿಂಗಳ ಒಳಗೆ ಈ ಹಣವನ್ನು ನೀಡಬೇಕು ಎಂದು ಆದೇಶಿಸಿದೆ.
ಬೆಂಗಳೂರು: ವಿಚ್ಛೇದನ ಪಡೆದ ನಂತರದಲ್ಲಿ ಮಗು ಯಾರ ಬಳಿ ಇರಬೇಕು ಎಂಬ ಬಗ್ಗೆ ಸಾಮಾನ್ಯವಾಗಿ ದಂಪತಿಗಳ ನಡುವೆ ವಾಗ್ವಾದ ಇರುತ್ತದೆ. ಇಂತಹದ್ದೇ ಪ್ರಕರಣವೊಂದನ್ನು ಹೊತ್ತ ದಂಪತಿ ಹೈಕೋರ್ಟ್ (Karnataka High court) ಮೆಟ್ಟಿಲೇರಿತ್ತು. ಅದರಲ್ಲೂ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚ್ಛೇದನ ಪಡೆದ ಪತಿ ಬೇರೊಂದು ಮದುವೆಯಾಗಿದ್ದು, ಈಗ ತನ್ನ ಮೊದಲ ಹೆಂಡತಿಯ ಮಗುವನ್ನು ತನ್ನ ಸುಪರ್ದಿಗೆ ಒಪ್ಪಿಸಲು ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಇದನ್ನು ತಿರಸ್ಕರಿಸಿದೆ. ಹೆತ್ತ ತಾಯಿ ಸಹಜವಾಗಿ ಮಗುವಿನ ಪಾಲನೆಯ ಎಲ್ಲಾ ಅಧಿಕಾರವನ್ನು ಹೊಂದಿರುತ್ತಾಳೆ. ಅದರಲ್ಲೂ ಮಗು ಇನ್ನೂ ಅಪ್ರಾಪ್ತ ವಯಸ್ಸಿನದ್ದಾಗಿದ್ದರೆ ಹೆತ್ತ ತಾಯಿಯೇ ಮಗುವಿನ ಪಾಲನೆಯ ಸಂಪೂರ್ಣ ಹಕ್ಕು ಹೊಂದಿರುತ್ತಾಳೆ. ಮಲತಾಯಿಗೆ ಮಗುವಿನ ಜವಬ್ದಾರಿ ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠವು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಜೊತೆಗೆ ತಂದೆಗೆ 50,000 ರೂಪಾಯಿ ದಂಡ ವಿಧಿಸಿದ್ದು, 9 ತಿಂಗಳ ಒಳಗೆ ಈ ಹಣವನ್ನು ನೀಡಬೇಕು ಎಂದು ಆದೇಶಿಸಿದೆ. ಒಂದು ವೇಳೆ ತಪ್ಪಿದಲ್ಲಿ ಮಗನ ಭೇಟಿಗೆ ಕಲ್ಪಿಸಲಾಗಿರುವ ಅವಕಾಶವನ್ನು ಅಮಾನತು ಮಾಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಎಚ್ಚರಿಸಿದೆ.
ವಿಚ್ಛೇದನದ ಬಳಿಕ ಮಕ್ಕಳು ಯಾರೊಂದಿಗೆ ಇರಬೇಕು ಎನ್ನುವುದು ಬಹಳ ಮುಖ್ಯ. ಅದರಲ್ಲೂ ವಿಚ್ಛೇದನದ ನಂತರ ಮತ್ತೊಂದು ಮದುವೆಯಾದ ಸಂದರ್ಭದಲ್ಲಿ, ಹೆತ್ತ ತಾಯಿಯೇ ಮಗುವಿನ ಜವಬ್ದಾರಳಾಗುತ್ತಾಳೆ. ಮಲತಾಯಿ ಮಗುವಿನ ಪಾಲನೆಯನ್ನು ಸರಿಯಾಗಿ ಮಾಡುತ್ತಾಳೆ ಎಂಬ ನಂಬಿಕೆ ಸ್ವಲ್ಪ ಕಷ್ಟ. ಹೀಗಾಗಿ ಮಲತಾಯಿಗಿಂತ ಹೆತ್ತ ತಾಯಿಗೆ ಮಗುವಿನ ಮೇಲೆ ಅಧಿಕಾರ ಹೆಚ್ಚಾಗಿರುತ್ತದೆ ಮತ್ತು ಹೆತ್ತ ತಾಯಿಯ ಬಳಿ ಮಗು ಸುರಕ್ಷಿತವಾಗಿರುತ್ತದೆ. ಅಷ್ಟೇ ಅಲ್ಲ, ಅಪ್ರಾಪ್ತ ಮಗು ಹೆತ್ತ ತಾಯಿಯ ಬಳಿ ಇರುವುದೇ ಸರಿ ಎಂದು ನ್ಯಾಯಾಲಯ ತಿಳಿಸಿದೆ.
ಬಾರ್ ಮತ್ತು ಬೆಂಚ್ ವರದಿಯ ಪ್ರಕಾರ, ಆರ್ಥಿಕ ದೃಷ್ಟಿಕೋನದಿಂದ ನೋಡುವುದಾದರೆ ನನ್ನ ಮೊದಲ ಪತ್ನಿಗಿಂತ ನಾನು ಸ್ಥಿತಿವಂತನಾಗಿದ್ದೇನೆ. ಮಗುವಿಗೆ ಅತ್ಯುತ್ತಮ ಶಿಕ್ಷಣ, ಪಾಲನೆ ಮತ್ತು ಒಂದೊಳ್ಳೆ ಜೀವನ ನೀಡಲು ನನಗೆ ಸಾಧ್ಯವಿದೆ. ಹೀಗಾಗಿ ಮಗುವನ್ನು ನನ್ನ ಸುಪರ್ದಿಗೆ ವಹಿಸಬೇಕು ಎಂದು ತಂದೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಈ ಅರ್ಜಿಯನ್ನು ಸದ್ಯ ವಜಾ ಮಾಡಿದೆ.
ನ್ಯಾಯಾಲಯದ ಪ್ರಕಾರ, ಆರ್ಥಿಕವಾಗಿ ಉತ್ತಮ ಸ್ಥಾನವನ್ನು ಹೊಂದಿದ್ದಾನೆ ಮತ್ತು ಶೈಕ್ಷಣಿಕವಾಗಿ ಉತ್ತಮನಾಗಿದ್ದಾನೆ ಎಂಬ ಮಾತ್ರಕ್ಕೆ ಮಗುವನ್ನು ಅವರ ಸುಪರ್ದಿಗೆ ನೀಡಲು ಸಾಧ್ಯವಿಲ್ಲ. ಮಗುವಿನ ಅಗತ್ಯತೆಗೆ ತಕ್ಕಂತೆ ತಾಯಿ ಜವಾಬ್ದಾರಿ ವಹಿಸಿರುವಾಗ, ಮಗುವಿನ ಪಾಲನೆಯ ವಿಷಯದಲ್ಲಿ ಬಹಳ ವ್ಯತ್ಯಾಸ ಏನು ಇರುವುದಿಲ್ಲ.
ವಿಚ್ಛೇದನದ ನಂತರ ಅರ್ಜಿದಾರರು ಇನ್ನೊಂದು ಮದುವೆಯಾಗಿದ್ದು, ಅವರಿಗೆ ಒಂದು ಹೆಣ್ಣು ಮಗು ಕೂಡ ಇದೆ. ಈಗ ಮೊದಲ ಹೆಂಡತಿಯ ಮಗುವನ್ನು ಅವರ ಸುಪರ್ದಿಗೆ ವಹಿಸಿದರೆ. ಇತ್ತ ಮೊದಲ ಹೆಂಡತಿ ಒಂಟಿಯಾಗುತ್ತಾಳೆ ಎಂದು ನ್ಯಾಯಾಲಯ ಸ್ಪಷ್ಟನೆ ನೀಡಿದೆ.
Published On - 1:36 pm, Sun, 26 December 21