ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವರ್ಚುವಲ್ ಜಿ 20 ಸಭೆ (Virtual G20 meeting) ಇಂದು (ನ.22) ಸಂಜೆ ನಡೆಯಲಿದೆ. ಸೆಪ್ಟೆಂಬರ್ 9-10 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಕಂಡುಬಂದಂತೆ ಜಾಗತಿಕ ನಾಯಕರ ಅದೇ ಉಪಸ್ಥಿತಿಯು ವರ್ಚ್ಯುವಲ್ ಸಭೆಯಲ್ಲಿ ಕಂಡುಬರುವ ನಿರೀಕ್ಷೆಯಿದೆ. ಆಫ್ರಿಕನ್ ಯೂನಿಯನ್ ಅಧ್ಯಕ್ಷರು ಸೇರಿದಂತೆ ಜಿ 20 ದೇಶಗಳ ನಾಯಕರು, ಒಂಬತ್ತು ಅತಿಥಿ ರಾಷ್ಟ್ರಗಳು ಮತ್ತು 11 ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರನ್ನು ಸಭೆಗೆ ಆಹ್ವಾನಿಸಲಾಗಿದೆ. ಭಾರತವು ನವೆಂಬರ್ 30 ರವರೆಗೆ ಜಿ 20 ಅಧ್ಯಕ್ಷ ಸ್ಥಾನವನ್ನು ಹೊಂದಿರಲಿದೆ. ಇದೀಗ ಈ ಸಭೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಖಲಿಸ್ತಾನ್ ಪರ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾದ ನಡುವೆ ಭಾರೀ ಶೀತಲಸಮರ ಉಂಟಾಗಿತ್ತು. ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯನ್ನು ಭಾರತ ಸರ್ಕಾರದ ಏಜೆಂಟ್ಗಳು ಮಾಡಿದ್ದಾರೆ ಎಂಬ ಜಸ್ಟಿನ್ ಟ್ರುಡೊ ಅವರ ಆರೋಪದಿಂದ ಶುರುವಾದ ಗೊಂದಲ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆದುಕೊಂಡಿತ್ತು. ಇದೀಗ ಇದರ ಗೊಂದಲದ ನಡುವೆ ಭಾರತದ ನೇತೃತ್ವದಲ್ಲಿ ನಡೆಯುವ ವರ್ಚುವಲ್ ಜಿ 20 ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಈ ಹಿಂದೆ ದೆಹಲಿಯಲ್ಲಿ ನಡೆದ ಜಿ-20 ಸಭೆಯಲ್ಲಿ ಭಾಗವಹಿಸಿದರು. ಈ ಸಭೆಯ ನಂತರ ಈ ಎಲ್ಲ ಬೆಳವಣಿಗೆ ನಡೆದಿದೆ. ಇನ್ನೂ ಈ ಸಭೆ ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ರೀತಿಯಲ್ಲೇ ನಡೆಯಲ್ಲಿದೆ ಎಂದು ಭಾರತದ ಜಿ20 ಸಂಯೋಜಕರು ಅಮಿತಾಭ್ ಕಾಂತ್ ಹೇಳಿದ್ದಾರೆ. ಈ ವರ್ಚುವಲ್ ಜಿ 20 ಸಭೆಯು ತುಂಬಾ ಅಪರೂಪವಾಗಿರುತ್ತದೆ. ಒಂದು ದೇಶ ಭೌತಿಕ ಶೃಂಗಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ನಂತರ, ಮತ್ತೆ ಅದೇ ದೇಶ ವರ್ಚುವಲ್ ಜಿ 20 ಸಭೆಯ ಅಧ್ಯಕ್ಷತೆಯನ್ನು ವಹಿಸಿಲ್ಲ, ಆದರೆ ಭಾರತ ಮಾತ್ರ ಈ ಅಧ್ಯಕ್ಷತೆಯನ್ನು ವಹಿಸಿದೆ ಎಂದು ಅಮಿತಾಭ್ ಕಾಂತ್ ಹೇಳಿದ್ದಾರೆ.
ಈ ಸಭೆಯಲ್ಲಿ ತೆಗೆದುಕೊಳ್ಳವ ಎಲ್ಲ ನಿರ್ಣಯಗಳಿಗೆ ನ್ಯಾಯಯುತ ಮತ್ತು ಸಮಾನವಾಗಿ ಎಲ್ಲ ದೇಶಗಳು ಒಪ್ಪಿಕೊಳ್ಳತ್ತದೆ ಎಂದು ಹೇಳಿದ್ದಾರೆ. ಈ ಸಭೆಯಲ್ಲಿ ಅಭಿವೃದ್ಧಿ ಮತ್ತು ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಯಲಿದೆ. ಇದರ ಜತೆಗೆ ಜಗತ್ತಿನ ರಾಷ್ಟ್ರಗಳ ಆರ್ಥಿಕ ಸಹಾಯ, ಒಪ್ಪಂದಗಳ ಬಗ್ಗೆ ಚರ್ಚೆ ನಡೆಸಲಿದೆ ಎಂದು ಹೇಳಿದ್ದಾರೆ. ಈ ಸಭೆಯಲ್ಲಿ ಹಮಾಸ್ ಮತ್ತು ಇಸ್ರೇಲ್ ಯುದ್ಧದ ಬಗ್ಗೆಯು ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ರಷ್ಯಾದ ಅಧ್ಯಕ್ಷ ಪುಟಿನ್ ಅವರು ಕೂಡ ಈ ವರ್ಚುವಲ್ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಗಳನ್ನು ತಿಳಿಸಿದೆ. ಈ ಹಿಂದೆ ದೆಹಲಿಯಲ್ಲಿ ನಡೆದ ಜಿ-20ಯಲ್ಲಿ ಭಾಗವಹಿಸಿಲ್ಲ ಹಾಗೂ ಉಕ್ರೇನ್ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇತ್ತು. ಆದರೆ ಎರಡು ದೇಶದ ಅಧ್ಯಕ್ಷ ಬರದ ಕಾರಣ ಈ ಚರ್ಚೆಯನ್ನು ನಡೆಸಿಲ್ಲ ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ