ಭೂ ವಿವಾದದಲ್ಲಿ ನೊಬೆಲ್​ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್; ಬೆಂಬಲಕ್ಕೆ ನಿಂತ ಮಮತಾ ಬ್ಯಾನರ್ಜಿಗೆ ಕೃತಜ್ಞತೆ

ಅಮಾರ್ತ್ಯ ಸೇನ್​ ವಿರುದ್ಧ ಮಾಡಿದ್ದ ಆರೋಪದ ವಿರುದ್ಧ ಕಿಡಿಕಾರಿದ್ದ ಮಮತಾ ಬ್ಯಾನರ್ಜಿ, ಸೇನ್​ ಅವರ ವಿಚಾರಧಾರೆಗಳು ಬಿಜೆಪಿ ವಿರುದ್ಧ ಇರುವ ಕಾರಣಕ್ಕೆ ಇಂಥ ಆರೋಪಗಳನ್ನು ಮಾಡಲಾಗುತ್ತದೆ ಎಂದಿದ್ದರು.

ಭೂ ವಿವಾದದಲ್ಲಿ ನೊಬೆಲ್​ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್; ಬೆಂಬಲಕ್ಕೆ ನಿಂತ ಮಮತಾ ಬ್ಯಾನರ್ಜಿಗೆ ಕೃತಜ್ಞತೆ
ಮಮತಾ ಬ್ಯಾನರ್ಜಿ ಮತ್ತು ಅಮಾರ್ತ್ಯ ಸೇನ್​
Edited By:

Updated on: Dec 28, 2020 | 8:06 PM

ಕೋಲ್ಕತ್ತ: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್,​ ಕ್ಯಾಂಪಸ್​ನ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ವಿಶ್ವಭಾರತಿ ಯೂನಿವರ್ಸಿಟಿ ಶುಕ್ರವಾರ ಆರೋಪ ಮಾಡಿದ ಬೆನ್ನಲ್ಲೇ ಅಮಾರ್ತ್ಯ ಸೇನ್​ರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪತ್ರ ಬರೆಯುವ ಮೂಲಕ, ನಿಮ್ಮ ಜತೆ ನಾನಿದ್ದೇನೆ ಎಂಬ ಧೈರ್ಯದ ಮಾತುಗಳನ್ನಾಡಿದ್ದಾರೆ.

ಹಾಗೇ, ಮಮತಾ ಬ್ಯಾನರ್ಜಿಯವರ ಪತ್ರಕ್ಕೆ ಇಂದು ಅಮಾರ್ತ್ಯ ಸೇನ್​ ಪ್ರತಿಯಾಗಿ ಕೃತಜ್ಞತಾ ಪತ್ರ ಬರೆದಿದ್ದಾರೆ. ನಿಮ್ಮ ಬೆಂಬಲದ ಧ್ವನಿ ಅದ್ಭುತ ಶಕ್ತಿಯ ಮೂಲವಾಗಿದೆ. ನಿಮ್ಮ ಬಿಡುವಿಲ್ಲದ ಕೆಲಸಕಾರ್ಯಗಳ ನಡುವೆಯೂ ನಮ್ಮ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸಿ ಪತ್ರ ಬರೆದಿದ್ದಕ್ಕೆ ಹಾಗೂ ಆಕ್ರಮಣಕ್ಕೆ, ನಿಂದನೆಗೆ ಒಳಗಾದ ಜನರಿಗೆ ಧೈರ್ಯ ತುಂಬುವ ನಿಮ್ಮ ಗುಣಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ನೀವು ಬೆಂಬಲ ವ್ಯಕ್ತಪಡಿಸಿ ಬರೆದ ಪತ್ರದಿಂದ ನನಗೆ ತುಂಬ ಸಂತೋಷವಾಗಿದೆ. ನನ್ನ ವಿಚಾರದಲ್ಲಿ ನಿಜಕ್ಕೂ ನಡೆದದ್ದು ಏನು ಎಂಬುದನ್ನು ಅರ್ಥ ಮಾಡಿಕೊಂಡಿದ್ದೀರಿ. ನಿಮ್ಮ ಪತ್ರ ನನ್ನ ಅಂತಃಕರಣವನ್ನು ಮುಟ್ಟಿದ್ದಷ್ಟೇ ಅಲ್ಲ, ನನ್ನಲ್ಲಿ ಧೈರ್ಯವನ್ನೂ ತುಂಬಿದೆ. ನಿಮ್ಮ ಕರುಣೆ ತುಂಬಿದ ಪತ್ರಕ್ಕೆ ನನ್ನ ಕೃತಜ್ಞತೆಗಳು ಮತ್ತು ನಿಮ್ಮನ್ನು ನಾನು ಶ್ಲಾಘಿಸುತ್ತೇನೆ. ಎಂದೂ ನೊಬೆಲ್​ ಪುರಸ್ಕೃತ ಅರ್ಥಶಾಸ್ತ್ರಜ್ಞ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ವಿಶ್ವಭಾರತಿ ವಿಶ್ವವಿದ್ಯಾಲಯದ ಶತಮಾನೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದ ದಿನವೇ (ಗುರುವಾರ) ಈ ವಿವಾದವೂ ಭುಗಿಲೆದ್ದಿತ್ತು. ವಿಶ್ವವಿದ್ಯಾಲಯದ ಮಾಲೀಕತ್ವದ ಭೂಮಿಗಳನ್ನು ಹಲವು ಖಾಸಗಿ ವ್ಯಕ್ತಿಗಳ ಹೆಸರಿಗೆ ತಪ್ಪಾಗಿ, ಅಕ್ರಮವಾಗಿ ನೋಂದಣಿಯಾಗಿದೆ. ಹೀಗೆ ಭೂಮಿ ವಶಪಡಿಸಿಕೊಂಡವರಲ್ಲಿ ನೊಬೆಲ್​ ಪುರಸ್ಕೃತ ಅಮಾರ್ತ್ಯ ಸೇನ್​ ಕೂಡ ಒಬ್ಬರು ಎಂದು ಆರೋಪಿಸಿ, ವಿಶ್ವಭಾರತಿ ಯೂನಿವರ್ಸಿಟಿ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದ ಅಮಾರ್ತ್ಯ ಸೇನ್, ನನ್ನ ಮನೆಯಿರುವ ಯೂನಿವರ್ಸಿಟಿಯ ಜಾಗವನ್ನು ದೀರ್ಘಾವಧಿಗೆ ಗುತ್ತಿಗೆ ಪಡೆಯಲಾಗಿತ್ತು. ಸದ್ಯದಲ್ಲೇ ಅದರ ಅವಧಿ ಮುಕ್ತಾಯವಾಗುತ್ತದೆ ಎಂದು ಹೇಳಿದ್ದರು. ಆದರೆ ಅಮಾರ್ತ್ಯ ಸೇನ್​ ವಿರುದ್ಧ ಮಾಡಲಾಗಿದ್ದ ಆರೋಪದ ವಿರುದ್ಧ ಕಿಡಿಕಾರಿದ್ದ ಮಮತಾ ಬ್ಯಾನರ್ಜಿ, ಸೇನ್​ ಅವರ ವಿಚಾರಧಾರೆಗಳು ಬಿಜೆಪಿ ವಿರುದ್ಧ ಇರುವ ಕಾರಣಕ್ಕೆ ಇಂಥ ಆರೋಪಗಳನ್ನು ಮಾಡಲಾಗುತ್ತದೆ ಎಂದಿದ್ದರು. ಅಷ್ಟೇ ಅಲ್ಲ, ಅಮಾರ್ತ್ಯ ಸೇನ್​ರಿಗೆ ಬೆಂಬಲ ವ್ಯಕ್ತಪಡಿಸಿ ಪತ್ರವನ್ನೂ ಬರೆದಿದ್ದರು.

ದೇಶದ 100ನೇ ಕಿಸಾನ್ ರೈಲಿಗೆ ಪ್ರಧಾನಿ ಮೋದಿಯಿಂದ ಹಸಿರು ನಿಶಾನೆ, ವಿಶೇಷತೆಗಳು ಏನು ಗೊತ್ತಾ?