ಚೆನ್ನೈ: ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿ ಚೆನ್ನೈಗೆ ಮರಳುತ್ತಿದ್ದಂತೆ ರಾಜಕೀಯದಿಂದ ದೂರ ಸರಿಯುವ ಘೋಷಣೆ ಮಾಡಿದ್ದ ಎಐಎಡಿಎಂಕೆ ಉಚ್ಚಾಟಿತ ಪ್ರಧಾನ ಕಾರ್ಯದರ್ಶಿ, ಮಾಜಿ ಸಿಎಂ ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಈಗ ಮರಳಿ ರಾಜಕಾರಣಕ್ಕೆ ಬರಲಿದ್ದಾರಾ? ಹೀಗೊಂದು ಅನುಮಾನ ಹುಟ್ಟಲು ಕಾರಣವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಆಡಿಯೋ.
ಎಐಎಡಿಎಂಕೆ ಪಕ್ಷದ ಕಾರ್ಯಕರ್ತರೊಬ್ಬರೊಂದಿಗೆ ಶಶಿಕಲಾ ಫೋನ್ನಲ್ಲಿ ಮಾತನಾಡಿದ ಆಡಿಯೋ ಕ್ಲಿಪ್ ಇದು ಎನ್ನಲಾಗುತ್ತಿದೆ. ಒಂದು ಸಲ ಕೊರೊನಾ ಸೋಂಕಿನ ಬಿಕ್ಕಟ್ಟಿನ ಪರಿಸ್ಥಿತಿ ಸುಧಾರಿಸಿದ ನಂತರ ನಾನು ಖಂಡಿತ ರಾಜಕೀಯಕ್ಕೆ ಇಳಿಯುತ್ತೇನೆ. ಎಐಎಡಿಎಂಕೆಯಲ್ಲಿರುವ ಸಮಸ್ಯೆಗಳನ್ನು ನಿವಾರಿಸುತ್ತೇನೆ ಎಂದು ಆ ಕಾರ್ಯಕರ್ತನಿಗೆ ಭರವಸೆ ನೀಡಿದ್ದು ಈ ಧ್ವನಿ ತುಣುಕಿನಲ್ಲಿ ಕೇಳುತ್ತದೆ. ಯೋಚಿಸಬೇಡಿ..ನಾನು ರಾಜಕೀಯಕ್ಕೆ ಹಿಂತಿರುಗುತ್ತೇನೆ. ಎಲ್ಲರೂ ಧೈರ್ಯವಾಗಿರಿ ಎಂದು ಹೇಳಿದ್ದಾರೆ.
ಫೆ.8ರಂದು ಶಶಿಕಲಾ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ. ಅವರ ಬಿಡುಗಡೆ ಖಂಡಿತ ತಮಿಳುನಾಡಿನ ರಾಜಕೀಯದಲ್ಲಿ ಬಹುದೊಡ್ಡ ಬದಲಾವಣೆ ತರುತ್ತದೆ ಎಂದು ರಾಜಕೀಯ ವಿಶ್ಲೇಷರು ಅಭಿಪ್ರಾಯಪಟ್ಟಿದ್ದರು. ಆದರೆ ಎಲ್ಲರ ನಿರೀಕ್ಷೆಗೂ ತಣ್ಣೀರು ಎರಚುವಂತೆ ಒಂದು ವಿಭಿನ್ನ ನಿರ್ಧಾರವನ್ನು ಶಶಿಕಲಾ ಪ್ರಕಟಿಸಿದ್ದರು. ನಾನು ಸಕ್ರಿಯ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದು ಮಾರ್ಚ್ 3ರಂದು ಘೋಷಿಸಿದ್ದರು. ಹಾಗೇ, ಎಐಎಡಿಎಂಕೆ ಕಾರ್ಯಕರ್ತರು ಒಗ್ಗಟ್ಟಿನಿಂದ ಹೋರಾಡಿ, ಅಮ್ಮನ ಪಕ್ಷದ ಶತ್ರುವನ್ನು ಬಗ್ಗುಬಡಿಯಬೇಕು ಎಂದು ಹೇಳಿದ್ದರು. ಅದರಂತೆ, ತಮಿಳುನಾಡು ವಿಧಾನಸಭಾ ಕ್ಷೇತ್ರದ ಚುನಾವಣೆಯ ಹೊತ್ತಲ್ಲೂ ಶಶಿಕಲಾ ದೂರವೇ ಇದ್ದರು. ಆದರೆ ಇದೀಗ ವೈರಲ್ ಆಗುತ್ತಿರುವ ಆಡಿಯೋ ಶಶಿಕಲಾ ರಾಜಕೀಯಕ್ಕೆ ಮತ್ತೆ ಬರುತ್ತಾರೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ.
ಇದನ್ನೂ ಓದಿ: ಹಾಸನ: ಆಸ್ತಿ ವಿಚಾರಕ್ಕೆ ಬಡಿದಾಡಿಕೊಂಡು ನಾಲ್ವರ ಕೊಲೆ ಪ್ರಕರಣ; ಗಲಾಟೆ ವಿಡಿಯೋ ವೈರಲ್