ಉತ್ತರ ಪ್ರದೇಶದಲ್ಲಿ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಬಿಹಾರದ ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್(Gangster) ನೀಲೇಶ್ ರೈ ಎಂಬಾತನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಆತನನ್ನು ಹಿಡಿದುಕೊಟ್ಟವರಿಗೆ 2.5 ಲಕ್ಷ ಬಹುಮಾನವನ್ನು ಕೂಡ ಘೋಷಿಸಲಾಗಿತ್ತು. ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಗಳ (ಎಸ್‌ಟಿಎಫ್) ಜಂಟಿ ತಂಡ ಬುಧವಾರ ರಾತ್ರಿ ಎನ್‌ಕೌಂಟರ್ ನಡೆಸಿದೆ.
ಬಿಹಾರದ ಬೇಗುಸರಾಯ್ ಜಿಲ್ಲೆಗೆ ಸೇರಿದ ನೀಲೇಶ್ ರೈ ವಿರುದ್ಧ ಕೊಲೆ, ಲೂಟಿ ಮತ್ತು ಸುಲಿಗೆ ಸೇರಿದಂತೆ 16 ಪ್ರಕರಣಗಳು ದಾಖಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ (ಯುಪಿ ಎಸ್‌ಟಿಎಫ್ ಮತ್ತು ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಬ್ ಯಶ್ ಹೇಳಿದ್ದಾರೆ.
ಯುಪಿ ಎಸ್‌ಟಿಎಫ್‌ನ ನೋಯ್ಡಾ ಘಟಕ ಮತ್ತು ಬಿಹಾರ ಎಸ್‌ಟಿಎಫ್ ಜಂಟಿ ಕಾರ್ಯಾಚರಣೆಯಲ್ಲಿ, ಮುಜಾಫರ್‌ನಗರದ ರತನ್‌ಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎನ್‌ಕೌಂಟರ್ ನಡೆದಿದೆ ಎಂದು ಯಶ್ ಹೇಳಿದರು.
ಫೆಬ್ರವರಿ 24 ರಂದು, ಪೊಲೀಸ್ ತಂಡವು ಬೇಗುಸರಾಯ್‌ನಲ್ಲಿರುವ ರೈ ಅವರ ಅಡಗುತಾಣದ ಮೇಲೆ ದಾಳಿ ನಡೆಸಿತ್ತು, ಆಗ ಆತ ಸಹಚರರೊಂದಿಗೆ ಪೊಲೀಸರ ಮೇಲೆ ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದ.
ಮತ್ತೊಂದು ಘಟನೆ
ಗ್ಯಾಂಗ್ ಸ್ಟರ್ ಅತೀಕ್ ಗೆ 9 ಬಾರಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು
ಗ್ಯಾಂಗ್ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ ಅವರಿಗೆ 9 ಬಾರಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಪ್ರಯಾಗರಾಜ್‌ನ ಶಾಹಗಂಜ್ ಪ್ರದೇಶದ ಆಸ್ಪತ್ರೆಯೊಂದರ ಹೊರಗೆ ಅತೀಕ್ ಮತ್ತು ಅವರ ಸಹೋದರ ಅಶ್ರಫ್ ನನ್ನು ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ದರೋಡೆಕೋರನ ದೇಹದಲ್ಲಿ ಒಂಬತ್ತು ಗುಂಡೇಟುಗಳು ಕಂಡುಬಂದಿವೆ. ಅವರ ಸಹೋದರ ಅಶ್ರಫ್ ಅಹ್ಮದ್ ಅವರ ದೇಹದಿಂದ ಐದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ